ಜಿಲ್ಲೆ

ಕನ್ನಡದಲ್ಲೇ ನಾಮಫಲಕ ನಿಯಮ ಜಾರಿಗೊಳಿಸಿ; ಹಾವೇರಿ ಜಿಲ್ಲಾ ಸಾಮಾಜಿಕ ಜಾಲತಾಣಗಳ ಒಕ್ಕೂಟ ಮನವಿ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಕನ್ನಡ ಭಾಷೆಯಲ್ಲೇ ಕಡ್ಡಾಯವಾಗಿ ನಾಮಫಲಕ ಅಳವಡಿಸಬೇಕು ಎಂಬ ನಿಯಮವನ್ನು ಜಿಲ್ಲೆಯಲ್ಲಿ ಹಲವರು ಪಾಲಿಸುತ್ತಿಲ್ಲ. ಹಾಗಾಗಿ, ಕನ್ನಡದಲ್ಲೇ ನಾಮಫಲಕ ನಿಯಮ ಕಟ್ಟುನಿಟ್ಟಾಗಿ ಜಾರಿಗೊಳಿಸಿ ಎಂದು ಒತ್ತಾಯಿಸಿ ಜಿಲ್ಲಾ ಸಾಮಾಜಿಕ ಜಾಲತಾಣಗಳ ಒಕ್ಕೂಟದ ವತಿಯಿಂದ ನಗರದಲ್ಲಿ ಮಂಗಳವಾರ ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಹಾವೇರಿ ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ವಿವಿಧ ನಗರ, ಪಟ್ಟಣಗಳಲ್ಲಿ ವ್ಯಾಪಾರಿಗಳು ಸರ್ಕಾರ ಸುತ್ತೋಲೆ ತಿರಸ್ಕರಿಸಿ ಕನ್ನಡ ಬಿಟ್ಟು ಬೇರೆ ಭಾಷೆಗಳಲ್ಲಿ ನಾಮಫಲಕ ಅಳವಡಿಸುತ್ತಿದ್ದಾರೆ. ಇದರಿಂದ ಗ್ರಾಮೀಣ ಭಾಗದ ಜನರಿಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಜಿಲ್ಲಾಡಳಿತವಾಗಲೀ, ಸ್ಥಳೀಯ ಸಂಸ್ಥೆಗಳಾಗಲೀ ಗಮನ ಹರಿಸುತ್ತಿಲ್ಲ. ಈ ಕೂಡಲೇ ಸರ್ಕಾರದ ಸುತ್ತೋಲೆ ಪ್ರಕಾರ ಕನ್ನಡದ ನಾಮಫಲಕ ಕಡ್ಡಾಯಗೊಳಿಸಬೇಕು. ಬೇರೆ ಭಾಷೆ ಬಳಸಿದವರಿಗೆ ನೋಟಿಸ್ ಜಾರಿಗೊಳಿಸಬೇಕು. ಈ ಕುರಿತು ಜಾಗೃತಿ ಮೂಡಿಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಪದಾಧಿಕಾರಿಗಳಾದ ನವೀನ ಮೈಲಾರದ, ಗಂಗಾಧರ ಕುಲಕರ್ಣಿ, ರಾಕೇಶ ಕರೇಗೌಡ್ರ, ಕರಿಬಸವ ಸಂಗೂರ, ಇತರರಿದ್ದರು.