ಹಾವೇರಿ: ಕೇವಲ ಒಂದು ವರ್ಷ ಒಂಭತ್ತು ತಿಂಗಳ ಮಗು ದೇಹದ ವಿವಿಧ ಭಾಗಗಳು, ಪ್ರಾಣಿಗಳ ಶಬ್ದದ ಅನುಕರಣೆ, ಇಂಗ್ಲಿಷ್, ಹಿಂದಿ ಅಂಕಿ ಸಂಖ್ಯೆ ಹೇಳುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಹೆಸರು ಸೇರಿಸುವ ಮೂಲಕ ದಾಖಲೆಗೈದಿದೆ.
ತಾಲೂಕಿನ ಕನವಳ್ಳಿ ಗ್ರಾಮದ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ಹೊಳೆಇಟಗಿ ಮೂಲದ ಸೋಮಣ್ಣ ಹಾಗೂ ರವಿನಾ ದಂಪತಿಯ 1 ವರ್ಷ 9 ತಿಂಗಳ ಮಗು ರಿಷಭ ತೆಲಗಿ ಸಾಧನೆಗೈದ ಪುಟಾಣಿ ಪೋರ.
ರಿಷಭ ದೇಹದ 7 ಭಾಗಗಳನ್ನು ಗುರುತಿಸುವುದು, ಇಂಗ್ಲಿಷ್ ವರ್ಣಮಾಲೆ, 10 ವಿವಿಧ ಪ್ರಾಣಿಗಳ ಶಬ್ದಗಳ ಅನುಕರಣೆ, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯ 1ರಿಂದ 10ರವರೆಗಿನ ಅಂಕಿ ಸಂಖ್ಯೆ ಹೇಳುವ ಮೂಲಕ ಏಪ್ರಿಲ್ 5, 2025ರಂದು ರಾಷ್ಟ್ರಮಟ್ಟದ ದಾಖಲೆಯ ಪುಟಗಳಲ್ಲಿ ತನ್ನ ಹೆಸರು ಭದ್ರಪಡಿಸಿಕೊಂಡಿದ್ದಾನೆ.
ಹುಕ್ಕೇರಿ ಮಠದ ಶ್ರೀಗಳ ಆಶೀರ್ವಾದ :
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ದಾಖಲೆ ಬರೆದ ಪುಟಾಣಿ ರಿಷಭನಿಗೆ ನಗರದ ಹುಕ್ಕೇರಿ ಮಠದಲ್ಲಿ ಶುಕ್ರವಾರ ಶ್ರೀ ಸದಾಶಿವ ಸ್ವಾಮೀಜಿ ಯಾಲಕ್ಕಿ ಮಾಲೆ ಹಾಕಿ ಆಶೀರ್ವಾದ ಮಾಡಿದರು. ಈ ವೇಳೆ ರಿಷಭನ ಅಜ್ಜಿಯರಾದ ಪುಷ್ಪಾ ಬಸವರಾಜ ಬೊಮ್ಮಣ್ಣನವರ, ನೀಲಮ್ಮ ತೆಲಗಿ, ಮಹದೇವಕ್ಕ ತೆಲಗಿ, ಇತರರಿದ್ದರು.
6 ತಿಂಗಳಿಂದ ತಯಾರಿ
ನನ್ನ ಕಂದ ರಿಷಭ 6 ತಿಂಗಳ ಕೂಸು ಇದ್ದಾಗಿನಿಂದಲೇ ಅನೇಕ ರೀತಿಯ ಹೊಸ ಹೊಸ ಚಟುವಟಿಕೆಗಳನ್ನು ಮಾಡುತ್ತಿದ್ದ. ಈತನ ಚುರುಕುತನ ಕಂಡು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲಿಸುವ ಯೋಚನೆ ಬಂದಿತು. ಪ್ರತಿದಿನ ಅಭ್ಯಾಸ ಮಾಡಿಸುತ್ತಿದ್ದೆ. ಇತ್ತೀಚೆಗೆ ದಾಖಲೆಗಾಗಿ ವೆಬ್‌ಸೈಟ್‌ನಲ್ಲಿ ಹೆಸರು ನೋಂದಾಯಿಸಿಕೊಂಡಿದ್ದೆವು. ಆತನ ಚಟುವಟಿಕೆಗಳನ್ನು ವಿಡಿಯೋ ಮಾಡಿ ಮೇಲ್ ಮಾಡುವಂತೆ ಆಯೋಜಕರು ತಿಳಿಸಿದ್ದರು. ಆತನ ವಿಡಿಯೋ ಕಳುಹಿಸಿದಾಗ ನನ್ನ ಮಗ ಆಯ್ಕೆಯಾಗಿದ್ದಾನೆ ಎಂದು ತಿಳಿಸಿದಾಗ ಸಂತಸವಾಯಿತು ಎಂದು ರಿಷಭನ ತಾಯಿ ರವಿನಾ ತೆಲಗಿ ತಿಳಿಸಿದ್ದಾರೆ.
ಕೋಟ್:
ಮೊದಲಿನಿಂದಲೂ ರಿಷಭ ಚೂಟಿಯಾಗಿರುವ ಬಾಲಕ. ಒಂದು ಸಾರಿ ಏನೇ ಹೇಳಿದರೂ ನೆನಪು ಇಟ್ಟುಕೊಂಡು ಪ್ರತಿಕ್ರಿಯಿಸುತ್ತಾನೆ. ರಾಷ್ಟ್ರಮಟ್ಟದ ಸಾಧನೆ ಮಾಡಿದ್ದು, ಮುಂದೆ ವರ್ಲ್ಡ್ ರೆಕಾರ್ಡ್ ಮಾಡುವ ಯೋಚನೆ ಮೂಡಿದೆ.
- ರವಿನಾ ಸೋಮಣ್ಣ ತೆಲಗಿ, ರಿಷಭನ ತಂದೆ- ತಾಯಿ