ಹಾವೇರಿ: ಶಿಗ್ಗಾಂವಿ ಉಪಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಅವರ ಏಕಚಕ್ರಾಧಿಪತ್ಯ ಮತ್ತು ದುರಹಂಕಾರವೇ ಕಾರಣ. ಕ್ಷೇತ್ರದಲ್ಲಿ ಅವರೇ ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದು, ತಮ್ಮಿಂದ ಆಗಿರುವ ಸೋಲನ್ನು ಮುಚ್ಚಿಹಾಕಲು ಶ್ರೀಕಾಂತ ದುಂಡಿಗೌಡ್ರ ಹಾಗೂ ತಮ್ಮನ್ನು ಪಕ್ಷದಿಂದ ಉಚ್ಛಾಟನೆ ಮಾಡಿಸಿದ್ದಾರೆ. ಈ ಕುರಿತು ಶೀಘ್ರವೇ ಹೈಕಮಾಂಡ್‌ಗೆ ದೂರು ಸಲ್ಲಿಸಲಾಗುವುದು ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಸಂಗಮೇಶ್ವರ ಕಂಬಾಳಿಮಠ ತಿಳಿಸಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಾವುದೇ ಪಕ್ಷ ವಿರೋಧಿ ಚಟುವಟಿಕೆ ಮಾಡದ ನಮ್ಮ ವಿರುದ್ಧ ಯಾಕೆ ಕ್ರಮ ತೆಗೆದುಕೊಂಡಿದ್ದಾರೆ. ತಮ್ಮ ಮಗ ಭರತ ಬೊಮ್ಮಾಯಿ ಸೋಲನ್ನು ಸಮಚಿತ್ತದಿಂದ ಸ್ವೀಕರಿಸದೇ, ಪಕ್ಷ ವಿರೋಧಿ ಚಟುವಟಿಕೆ ಮಾಡದ ನಮ್ಮನ್ನು ಉಚ್ಛಾಟಿಸುವ ಮೂಲಕ ಸೇಡಿನ ರಾಜಕಾರಣಕ್ಕೆ ಬೊಮ್ಮಾಯಿ ಮುಂದಾಗಿದ್ದಾರೆ ಎಂದು ಆರೋಪಿಸಿದರು. ಬಿಜೆಪಿ ಕಾರ್ಯಕರ್ತರನ್ನು ಕಡೆಗಣಿಸಿ, ಬಿಟ್ ಕಾಯಿನ್ ಹಗರಣ ಕೇಸ್‌ನಲ್ಲಿದ್ದ ಮಗನಿಗೆ ಟಿಕೆಟ್ ಕೊಡಿಸಿದರು. ತಾವು ನಡೆದದ್ದೇ ದಾರಿ ಎಂಬ ವರ್ತನೆ ಸೋಲಿಗೆ ಕಾರಣವಾಗಿದೆ. ವಕ್ಫ್ ಬೋರ್ಡ್ ಪರವಾಗಿ ಅವರೇ ಮಾತನಾಡಿದ್ದ ವಿಡಿಯೋ ಕಾಂಗ್ರೆಸ್‌ಗೆ ವರದಾನವಾಯಿತು ಎಂದರು.
2023ರಲ್ಲಿ ಮುಖ್ಯಮಂತ್ರಿ ಇದ್ದಾಗ ವಿಧಾನಸಭಾ ಚುನಾವಣೆ ಎದುರಿಸಿದರು. ಆಗ ಜಿಲ್ಲೆಯಲ್ಲಿ ಒಬ್ಬರನ್ನೂ ಶಾಸಕರನ್ನಾಗಿ ಮಾಡಲು ಆಗಲಿಲ್ಲ. ರಾಜ್ಯದಲ್ಲೂ ಹೀನಾಯ ಸೋಲು ಕಂಡರು. ಇವರು ಅಹಂಕಾರದಿಂದ ವರ್ತಿಸಿದ ಕಾರಣ ಇದ್ದ ಕ್ಷೇತ್ರವನ್ನೂ ಕಳೆದುಕೊಂಡಿದ್ದಾರೆ. ಇವರ ಪಕ್ಷ ವಿರೋಧಿ ಚಟುವಟಿಕೆಗಳ ಕುರಿತು ಶೀಘ್ರದಲ್ಲೇ ದೆಹಲಿಗೆ ತೆರಳಿ ಹೈಕಮಾಂಡ್‌ಗೆ ಮನವರಿಕೆ ಮಾಡುತ್ತೇವೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ಜೆಪಿ ನಡ್ಡಾ ಅವರಿಗೂ ಸಮಯ ಕೇಳಿದ್ದು, ಶೀಘ್ರದಲ್ಲೇ ಎಲ್ಲರನ್ನೂ ಭೇಟಿಯಾಗಿ ದೂರು ಸಲ್ಲಿಸುತ್ತೇವೆ. ಬೊಮ್ಮಾಯಿ ಅವರನ್ನೇ ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಮನವಿ ಮಾಡುತ್ತೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಘವೇಂದ್ರ ದೇಶಪಾಂಡೆ, ನಾಗಪ್ಪ ಅಣ್ಣಿಗೇರಿ, ಯಲ್ಲಪ್ಪ ಹುಕ್ಕೇರಿ, ಬಸವರಾಜ ಮಿರ್ಜಿ, ರವಿ ಮಡಿವಾಳರ, ಬಸವರಾಜ ಲಂಗೋಟಿ, ಬಸವರಾಜ ಕುಂಬಾರ, ಶೇಖರ ಬಳ್ಳಾರಿ, ಇತರರಿದ್ದರು.
ಜೋಶಿ ಸೋಲಿಸುವ ಹುನ್ನಾರ
ಬೊಮ್ಮಾಯಿ ಹಿಂಬಾಲಕರು ಈ ಹಿಂದೆ ಬೊಮ್ಮಾಯಿಗೆ ಬೇಕಾಗಿದ್ದ ಪಕ್ಷೇತರರು, ವಿರೋಧಿ ಪಕ್ಷದವರನ್ನೂ ಬೆಂಬಲಿಸಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಪ್ರಲ್ಹಾದ ಜೋಶಿ ಅವರನ್ನೇ ಸೋಲಿಸಲು ಮುಂದಾಗಿದ್ದರು. ಪರಿಣಾಮ ಕ್ಷೇತ್ರದಲ್ಲಿ ಬಿಜೆಪಿಗೆ 8 ಸಾವಿರ ಮತಗಳ ಹಿನ್ನಡೆ ಆಯಿತು. ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುವ ಸಲುವಾಗಿ ಬೊಮ್ಮಾಯಿ ಮಾಡಿದ ಹುನ್ನಾರ ಎಂದು ಕಂಬಾಳಿಮಠ ಗಂಭೀರವಾಗಿ ಆರೋಪಿಸಿದರು.
ಅಜ್ಜ, ಅಪ್ಪನಂತೆ ಭರತ ಪಲಾಯನ
ಅಜ್ಜ ಎಸ್.ಆರ್.ಬೊಮ್ಮಾಯಿ ಹಾಗೂ ಅಪ್ಪ ಬಸವರಾಜ ಬೊಮ್ಮಾಯಿ ಅವರಂತೆ ಭರತ ಬೊಮ್ಮಾಯಿ ಕೂಡ ಮೊದಲ ಬಾರಿ ಚುನಾವಣೆಯಲ್ಲಿ ಸೋತಿದ್ದಾರೆ. ಅವರ ಅಜ್ಜ ಹಾಗೂ ಅಪ್ಪನಂತೆ ಕ್ಷೇತ್ರದಿಂದ ಪಲಾಯನ ಮಾಡಿ, ರಾಣೆಬೆನ್ನೂರ ಕ್ಷೇತ್ರಕ್ಕೆ ಲಗ್ಗೆ ಇಡಲಿದ್ದಾರೆ. ಆಗ ಬಿಜೆಪಿ ಜಿಲ್ಲಾಧ್ಯಕ್ಷರ ಬಾಯಲ್ಲಿ ಯಾವ ಮಾತುಗಳು ಬರುತ್ತವೆ ಎಂಬುದನ್ನು ಕಾದು ನೋಡಿ ಎಂದು ಕಂಬಾಳಿಮಠ ಭವಿಷ್ಯ ನುಡಿದರು.