ಜಿಲ್ಲೆ

ಕಾಗಿನೆಲೆ ಮಠದಲ್ಲಿ ನ.8ರಂದು ಕನದಾಸರ ಜಯಂತಿ; ಈ ಬಾರಿ ಅದ್ಧೂರಿ ಕನಕೋತ್ಸವ; ಜಗದ್ಗುರು ನಿರಂಜನಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಪೂರ್ವಭಾವಿ ಸಭೆ

ಹಾವೇರಿ: ಬ್ಯಾಡಗಿ ತಾಲೂಕು ಕಾಗಿನೆಲೆಯಲ್ಲಿ ನ.8ರಂದು ದಾಸಶ್ರೇಷ್ಠ ಕನಕದಾಸರ ಜಯಂತ್ಯುತ್ಸವ ಹಮ್ಮಿಕೊಳ್ಳಲಾಗಿದ್ದು, ಈ ವರ್ಷದ ಕನಕದಾಸರ ಜಯಂತಿ ಆಚರಣೆ ಜವಾಬ್ದಾರಿಯನ್ನು ರಾಣೆಬೆನ್ನೂರ ತಾಲೂಕಿನ ಕುರುಬ ಸಮಾಜದ ಮುಖಂಡರಿಗೆ ಹಾಗೂ ಭಕ್ತಾದಿಗಳಿಗೆ ವಹಿಸಲಾಗಿದೆ ಎಂದು ಶ್ರೀಮಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು.

ಕಾಗಿನೆಲೆ ಕನಕ ಗುರುಪೀಠ ಮಠದ ಆವರಣದಲ್ಲಿ ಶುಕ್ರವಾರ ಶ್ರೀಗಳ ನೇತೃತ್ವದಲ್ಲಿ ಆಯೋಜಿಸಿದ್ದ ಕನಕದಾಸ ಜಯಂತ್ಯುತ್ಸವದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಕುರುಬ ಸಂಘದ ನೂತನ ಪದಾಧಿಕಾರಿಗಳು ಸಮಾಜಕ್ಕೆ ಚ್ಯುತಿ ಬರದ ಹಾಗೆ ಸೇವೆ ಮಾಡಬೇಕು. ಹುದ್ದೆಗಾಗಿ ಬರುವವರು ನಮಗೆ ಬೇಕಾಗಿಲ್ಲ. ಸಮಾಜಕ್ಕಾಗಿ ನಿಜವಾಗಲೂ ನಿಸ್ವಾರ್ಥ ಸೇವೆ ಮಾಡುವವರು ಇದ್ದರೆ ಸಾಕು. ಶ್ರೀಮಠದಲ್ಲಿ ನಡೆಯುವ ಧಾರ್ಮಿಕ ಸಭೆ, ಸಮಾರಂಭ ಸಂಘದ ಸಭೆಗಳಿಗೆ ಕರೆದಾಕ್ಷಣ ಬಂದು ಜವಾಬ್ದಾರಿ ನಿರ್ವಹಣೆ ಮಾಡಬೇಕು. ಪದೇಪದೇ ಸಭೆಗೆ ಗೈರಾದರೆ ಅಂಥವರನ್ನು ಸಂಘದಿಂದ ವಜಾಗೊಳಿಸಲಾಗುವುದು. ಈ ಬಾರಿ ನ.1ರಿಂದಲೇ ಮಠದಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮ ನಡೆಯಲಿವೆ. ವಿಶೇಷವಾಗಿ ಇಟಗಿ ಭೀಮಾಂಭಿಕೆ ಪುರಾಣ ಕಾರ್ಯಕ್ರಮ ನಡೆಯಲಿದೆ ಎಂದರು.

ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಮಾರುತಿ ಹರಿಹರ, ಮಾಲತೇಶ ಬಣಕಾರ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಸಭೆಯಲ್ಲಿ ಶ್ರೀಮಠದ ಅಮೋಘ ಸಿದ್ದೇಶ್ವರ ಸ್ವಾಮೀಜಿ, ಧರ್ಮದರ್ಶಿಗಳಾದ ಎಸ್‌ಎಫ್‌ಎನ್ ಗಾಜೀಗೌಡ್ರ, ಶಂಕ್ರಣ್ಣ ಮಾತನವರ, ರಾಜೇಂದ್ರ ಹಾವೇರಣ್ಣನವರ, ಭೋಜರಾಜ ಕರೂದಿ, ಇತರರಿದ್ದರು.

ಜಿಲ್ಲಾ, ತಾಲೂಕು ಸಮಿತಿಗೆ ಪದಾಧಿಕಾರಿ ನೇಮಕ

ಜಿಲ್ಲಾ ಕುರುಬ ಸಂಘದ ನೂತನ ಅಧ್ಯಕ್ಷರಾಗಿ ಬ್ಯಾಡಗಿಯ ನಾಗರಾಜ ಆನ್ವೇರಿ, ಜಿಲ್ಲಾ ಉಪಾಧ್ಯಕ್ಷರಾಗಿ ಅಶೋಕ ಬಣಕಾರ, ದಾನಪ್ಪ ಗಂಟೇರ, ಪರಶುರಾಮ ಬಗಾಡೆ, ಜಿಲ್ಲಾ ಕಾರ್ಯಾಧ್ಯಕ್ಷರಾಗಿ ಚೋಳಪ್ಪ ತಸ್ವಾಳ, ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತಗೌಡ ಗಾಜೀಗೌಡ್ರ, ಖಜಾಂಚಿ ರವಿ ಕಂಬಳಿ, ಸಂಘಟನಾ ಕಾರ್ಯದರ್ಶಿಯಾಗಿ ಯಲ್ಲಪ್ಪ ಗದಿಗೆಪ್ಪನವರ, ಜಿಲ್ಲಾ ನಿರ್ದೇಶಕರಾಗಿ ಬಸವರಾಜ ಕಂಬಳಿ, ರವಿ ಕರಿಗಾರ, ಡಿವಿ ಅಜ್ಜಣ್ಣನವರ, ಅನಂದ ಇಟಗಿ, ನಿಂಗಪ್ಪ ಕರಬಣ್ಣನವರ, ಮಲ್ಲಿಕಾರ್ಜುನ ಕರಲಿಂಗಣ್ಣನವರ, ರಾಮಚಂದ್ರ, ಯಲ್ಲಪ್ಪ ಗದಿಗೆಣ್ಣನವರ, ಸುರೇಶ ದೊಡ್ಡಕುರುಬರ, ವಿಜ ರಾಣೋಜಿ, ಯಲ್ಲಪ್ಪ ನರಗುಂದ, ಸೇರಿದಂತೆ ಜಿಲ್ಲಾಮಟ್ಟದಲ್ಲಿ 25 ಪದಾಧಿಕಾರಿಗಳನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಎಲ್ಲ ತಾಲೂಕು ಘಟಕಗಳಿಗೂ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಈ ಬಾರಿ ಅದ್ಧೂರಿ ಕನಕೋತ್ಸವ

ಕಾಗಿನೆಲೆ ಪ್ರಾಧಿಕಾರದಿಂದ ಈ ಬಾರಿ ಮೂರು ದಿನ ಕಿತ್ತೂರರಾಣಿ ಚನ್ನಮ್ಮ ಉತ್ಸವ ಮಾದರಿಯಲ್ಲಿ ಕನಕದಾಸರ ಜೀವನ, ಸಾಧನೆ ಕುರಿತು ಸರ್ಕಾರದಿಂದ ಕಾಗಿನೆಲೆಯಲ್ಲಿ ಅದ್ಧೂರಿಯಾಗಿ ‘ಕನಕೋತ್ಸವ’ ಸಮಾರಂಭ ನಡೆಯಲಿದೆ. ಶೀಘ್ರವೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಸಮಯ ತಿಳಿಸಲಾಗುವುದು. ನ.8ರಂದು ಪ್ರತಿ ಹಳ್ಳಿಯಿಂದ ಎಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಕನಕ ಪೀಠಕ್ಕೆ ಆಗಮಿಸಿ ಕನಕದಾಸರ ಜಯಂತಿ ಮತ್ತು ರಥೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕು ಎಂದು ಶಾಸಕ ಬಸವರಾಜ ಶಿವಣ್ಣನವರ ಮನವಿ ಮಾಡಿದರು.