ಹಾವೇರಿ: ವನ್ಯಜೀವಿಗಳ ಜೀವ ವೈವಿಧ್ಯತೆ, ಅವುಗಳ ಕುತೂಹಲಕಾರಿ ಜಗತ್ತಿನ ಕೈಗನ್ನಡಿಯಾಗಿ ಪತ್ರಕರ್ತ ಮಾಲತೇಶ ಅಂಗೂರ ಅವರ ಕೃತಿ ‘ಕಾಡು-ಮೇಡು’ ಕೃತಿ ಹೊರಹೊಮ್ಮಿದೆ ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಹೇಳಿದರು.
ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಭಾನುವಾರ ಶ್ರಮಿಕ ಪ್ರಕಾಶನ ಹಾಗೂ ಸಾಹಿತಿ ಕಲಾವಿದರ ಬಳಗದ ವತಿಯಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಪತ್ರಕರ್ತ, ಸಾಹಿತಿ, ವನ್ಯಜೀವಿ ಛಾಯಾಗ್ರಾಹಕ ಮಾಲತೇಶ ಅಂಗೂರ ಅವರ ’ಕಾಡು-ಮೇಡು’ ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ನಮ್ಮ ಸುತ್ತ-ಮುತ್ತಲಿರುವ ಪ್ರಾಣಿ-ಪಕ್ಷಿ ಪ್ರಪಂಚದ ಸೂಕ್ಷ್ಮತೆಯನ್ನು ಅಂಗೂರ ಅವರು ತಮ್ಮ ಪುಸ್ತಕದಲ್ಲಿ ದಾಖಲಿಸಿದ್ದಾರೆ. ಪುಸ್ತಕ ಬರೆಯುವುದು ಅಷ್ಟು ಸುಲಭದ ಕೆಲಸವಲ್ಲ. ಯಾವುದೇ ಬರಹಗಾರರಿಗೆ ಕುತೂಹಲಕಾರಿ ಬರವಣಿಗೆ ಹಾಗೂ ಸಾಮಾಜಿಕ ಬದ್ಧತೆ ಇದ್ದರೆ ಮಾತ್ರ ಇಂತಹ ಕೃತಿಗಳು ಸೃಷ್ಟಿಯಾಗುತ್ತವೆ. ‘ಕಾಡು-ಮೇಡು’ ಕೃತಿ ಅಧ್ಯಯನಾಸಕ್ತರಿಗೆ ಉಪಯುಕ್ತ ಮಾರ್ಗದರ್ಶಿ ಕೃತಿಯಾಗಿದೆ ಎಂದರು.
ಪ್ರಾಚಾರ್ಯ ಡಾ.ರಮೇಶ ತೆವರಿ ಮಾತನಾಡಿ, ಒಂದು ಚಿತ್ರ ಸಾವಿರ ಪದಗಳಿಗೆ ಸಮ, ಹವ್ಯಾಸಿ ಛಾಯಾಗ್ರಾಹಕರಾಗಿರುವ ಮಾಲತೇಶ ಅಂಗೂರ ಅವರು ಶ್ರಮ, ಸೃಜನ ಶೀಲತೆ, ಚಿತ್ರಸಹಿತ ಬರವಣಿಗೆ ಎದ್ದು ಕಾಣುತ್ತದೆ. ವನ್ಯಜೀವಿ ಆಸಕ್ತರಿಗೆ, ಅಧ್ಯಯನ ಶೀಲರಿಗೆ ಆಕಾರ ಗ್ರಂಥವಾಗಿಯೂ ‘ಕಾಡು-ಮೇಡು’ ಕೃತಿ ಮಾರ್ಗದರ್ಶನ ನೀಡಲಿದೆ ಎಂದರು.
ಲೇಖಕ ಮಾಲತೇಶ ಅಂಗೂರ ಮಾತನಾಡಿ, ವನ್ಯಜೀವಿಗಳ ಬಗೆಗಿನ ವಿಷಯ ಆಸಕ್ತಿಕರವಾಗಿದ್ದು, ನಿತ್ಯ ಪರಿಸರ ಒಂದಿಲ್ಲದೊಂದು ಹೊಸ ತನಪಡೆಯತ್ತದೆ. ಪರಿಸರ ನಾಶದಿಂದ ನಮ್ಮ ಸುತ್ತಮುತ್ತಲಿನ ಅನೇಕ ಅಪರೂಪದ ವನ್ಯಜೀವಿಗಳ ಸಂತತಿ ವಿನಾಶದ ಅಂಚಿಗೆ ಬಂದಿದೆ. ಪರಿಸರವನ್ನು ನಾವು ಕಾಪಾಡದಿದ್ದರೆ ಪರಿಸರ ನಮ್ಮ ಮೇಲೆ ಸೇಡು ತೀರಿಸಿಕೊಳ್ಳದೇ ಇರಲಾರದು. ನಮಗೆ ಮನೆ ಇರದಿದ್ದರೆ ಹೇಗೆ ತೊಂದರೆಯಾಗುತ್ತದೆಯೋ ಹಾಗೇ ವನ್ಯಜೀವಿಗಳಿಗೆ ಕಾಡು ಇರದಿದ್ದರೆ ಅವು ತೊಂದರೆ ಅನುಭವಿಸುತ್ತವೆ. ಹಸಿರು ಹಸನಾಗಿದ್ದರೆ ನಮ್ಮ ಬದುಕು ಹಸನಾಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಹಿರಿಯ ಸಾಹಿತಿ ಹನುಮಂತಗೌಡ ಗೊಲ್ಲರ, ನಗರಸಭೆ ಅಧ್ಯಕ್ಷ ಸಂಜೀವಕುಮಾರ ನೀರಲಗಿ ಹಾಗೂ ಉದ್ಯಮಿ ಕೆ.ಮಂಜಣ್ಣ ಮಾತನಾಡಿದರು.
ಸಮಾರಂಭದಲ್ಲಿ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮಿಜಿ, ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮಿಜಿ, ತಾಲೂಕು ಕಸಾಪ ಅಧ್ಯಕ್ಷ ವೈ.ಬಿ.ಆಲದಕಟ್ಟಿ, ಇತರರಿದ್ದರು. ಹನುಮಂತಸಿಂಗ್ ರಜಪೂತ ಪ್ರಾರ್ಥಿಸಿದರು. ಪ್ರವೀಣ ಪೂಜಾರ ಸ್ವಾಗತಿಸಿದರು, ಎಸ್.ಆರ್. ಹಿರೇಮಠ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಮೌನೇಶ ಬಡಿಗೇರ ನಿರೂಪಿಸಿದರು. ವೀರೇಶ ಹ್ಯಾಡ್ಲ ವಂದಿಸಿದರು.