ಜಿಲ್ಲೆ

ವಚನಗಾರ್ತಿಯರ ಸಾಧನೆ ಸ್ಮರಣೀಯ; ಕದಳಿ ಮಹಿಳಾ ವೇದಿಕೆಯ ವಚನ ಚಿಂತನ ಸಭೆಯಲ್ಲಿ ಡಾ.ಗೀತಾ ಸುತ್ತಕೋಟಿ

ಹಾವೇರಿ: ವಚನ ಚಳುವಳಿಗೆ ಸಾಮುದಾಯಿಕ ಶಕ್ತಿಯನ್ನು ತುಂಬಿದವರು ವಚನಗಾರ್ತಿಯರು. ಶರಣರ ಅಭಿವ್ಯಕ್ತಿಗೆ ಸ್ತ್ರೀಯ ಶ್ರೇಷ್ಠ ದನಿಯನ್ನು ಕಸಿಗೊಳಿಸಿ ಸಾಹಿತ್ಯವನ್ನು ಶ್ರೀಮಂತಗೊಳಿಸಿದ ವಚನಗಾರ್ತಿಯರ ಸಾಧನೆ ಸ್ಮರಣೀಯವಾದದ್ದು ಎಂದು ಶಿಕ್ಷಕಿ ಡಾ.ಗೀತಾ ಸುತ್ತಕೋಟಿ ಹೇಳಿದರು.
ಕದಳಿ ಮಹಿಳಾ ವೇದಿಕೆಯ ಜಿಲ್ಲಾ ಹಾಗೂ ತಾಲೂಕು ಘಟಕದ ವತಿಯಿಂದ ನಗರದಲ್ಲಿ ಇತ್ತೀಚೆಗೆ ಆಯೋಜಿಸಿದ್ದ 275ನೇ ಮಾಸಿಕ ವಚನ ಚಿಂತನ ಮಂಥನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸಾಧನೆ ಮಾಡುವ ಹಾದಿಯಲ್ಲಿ ನಿಂದನೆಗಳು ಸರ್ವೇಸಾಮಾನ್ಯ. ಅವೆಲ್ಲವುಗಳನ್ನು ಮೆಟ್ಟಿ ನಿಂತಾಗಲೇ ಸಾಧನೆ ಎಂಬ ಶಿಖರ ಏರಲು ಸಾಧ್ಯ. ಮಹಿಳೆಯರು ವಿದ್ಯಾವಂತರಾದರೆ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲಲು ಸಾಧ್ಯ. ನಮ್ಮ ಕಾರ್ಯಕ್ಷೇತ್ರ ಕೇವಲ ಅಡುಗೆ ಮನೆಗೆ ಸೀಮಿತವಾಗಿರದೇ ತನ್ನ ಯುಕ್ತಿಯೊಂದಿಗೆ ಶಕ್ತಿವಂತಳಾಗುವುದು ಅಷ್ಟೇ ಮುಖ್ಯವಾಗಿದೆ ಎಂದು ಹೇಳಿದರು.
ಚಿಂತಕಿ ಅಮೃತಮ್ಮ ಮಾತನಾಡಿ, ವಚನಗಾರ್ತಿಯರು ಸಮಾಜದ ಲೋಕಾರೂಢಿಗಳನ್ನು ಧಾರ್ಮಿಕತೆಗಳನ್ನು ನಿಷ್ಠುರವಾಗಿ ಬಯಲಿಗೆ ತಂದಿದ್ದಾರೆ ಎಂದು ಅಕ್ಕಮಹಾದೇವಿಯ ವಚನ ವಿಶ್ಲೇಷಿಸಿದರು.
ವೇದಿಕೆ ಜಿಲ್ಲಾಧ್ಯಕ್ಷೆ ದ್ರಾಕ್ಷಾಯಿಣಿ ಗಾಣಿಗೇರ ಮಾತನಾಡಿ, ಸುಶಿಕ್ಷಿತ ಮಾತೆಯರಿಂದ ಸುಶಿಕ್ಷಿತ ಸಮಾಜ ನಿರ್ಮಾಣ ಸಾಧ್ಯ. ಇಂತಹ ಕಾರ್ಯಕ್ರಮಗಳಲ್ಲಿ ಮಕ್ಕಳು ಪಾಲ್ಗೊಳ್ಳುವಂತೆ ಮಾಡಬೇಕು ಎಂದರು.
ಸುಮಾ ಕಾಡದೇವರಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ವನಿತಾ ಅರಳೇಶ್ವರ, ಶಶಿಕಲಾ ತುರಮುರಿ, ಶೋಭಾ ತೊಂಡಿಹಾಳ, ಮುತ್ತಕ್ಕ ನಂದಿಗೇರಿ, ಪ್ರೇಮ ಗೌಡಶಾನಿಮಠ, ಜ್ಯೋತಿ ಸಾತೇನಹಳ್ಳಿ, ಶಾಂತಕ್ಕ ಮಡಿವಾಳರ, ಸುಮಂಗಲಾ ಪಾಟೀಲ, ಜ್ಯೋತಿ ಬಶೆಟ್ಟಿ, ರೇಣುಕಾ ಗುಡಿಮನಿ, ಮತ್ತಿತರರು ಉಪಸ್ಥಿತರಿದ್ದರು.
ಅಶ್ವಿನಿ ಬೆಳ್ಳಟ್ಟಿ ಸ್ವಾಗತಿಸಿದರು. ಅಕ್ಕಮಹಾದೇವಿ ಕಬ್ಬಿಣಕಂತಿಮಠ ನಿರೂಪಿಸಿದರು, ಚೇತನ ಬೆಳ್ಳಟ್ಟಿ ವಂದಿಸಿದರು.