ಜಿಲ್ಲೆ

ಅಕ್ಷರ ಲೋಕದಲ್ಲಿ ವಿನೂತನ ಪ್ರಯತ್ನ; ಎಂ.ಎಸ್.ಮಾಳವಾಡರ ‘ಜ್ಞಾನದಾನಿ ಕನಕ’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಜಾನಪದ ವಿವಿ ವಿಸಿ ಡಾ.ಟಿ.ಎಂ.ಭಾಸ್ಕರ್

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಮನುಷ್ಯ ಕುಲದ ವರ್ಗೀಕರಣವನ್ನು ಸಹಿಸದ ದಾಸ ಪರಂಪರೆಯ ಅಗ್ರಗಣ್ಯ ಕನಕದಾಸರ ದರ್ಶನ ತತ್ವವನ್ನು ಪರಿಚಯಿಸುವ ಮೂಡಲಪಾಯ ಬಯಲಾಟಕ್ಕೆ ಸಂಬಂಧಿಸಿದ ‘ಜ್ಞಾನದಾನಿ ಕನಕ’ ಪುಸ್ತಕ ಅಕ್ಷರ ಲೋಕದ ಮಾಧ್ಯಮದಲ್ಲಿ ವಿನೂತನ ಪ್ರಯತ್ನ ಎಂದು ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ.ಟಿ.ಎಂ.ಭಾಸ್ಕರ್ ಹೇಳಿದರು.

ನಗರದ ಹೊಸಮಠದಲ್ಲಿ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ಹಾಗೂ ಸಾಹಿತಿ ಕಲಾವಿದರ ಬಳಗದ ಸಹಯೋಗದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ರಂಗಕರ್ಮಿ ಎಂ.ಎಸ್.ಮಾಳವಾಡ ಅವರ ‘ಜ್ಞಾನದಾನಿ ಕನಕ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬಯಲಾಟವನ್ನು ರಕ್ತಗತವಾಗಿಸಿಕೊಂಡಿರುವ ಮಾಳವಾಡರು ಕನಕದಾಸರ ಜೀವನ ಚರಿತ್ರೆಯನ್ನು ವೈಚಾರಿಕ ಹಿನ್ನೆಲೆಯ ಪ್ರತಿರೋಧದ ದೃಷ್ಟಿಕೋನದಲ್ಲಿ ಕಟ್ಟಿಕೊಟ್ಟಿದ್ದಾರೆ. ವರ್ಗ ಸಂಘರ್ಷವನ್ನು ಜನಸಮುದಾಯದ ಕಂಗಳಲ್ಲಿ ಅನಾವರಣಗೊಳಿಸಿದ್ದಾರೆ. ಶ್ರಮ ಸಂಸ್ಕೃತಿಯ ಪ್ರಾತಿನಿಧಿಕ ಪ್ರತಿಮೆಯಾಗಿ ಕನಕರನ್ನು ಮುಂದೆ ನಿಲ್ಲಿಸಿದ್ದಾರೆ. ಕಲಾವಿದರ ಪ್ರದರ್ಶನದಿಂದ ಮತ್ತಷ್ಟು ಹತ್ತಿರವಾಗಿಸಲು ಶ್ರಮಿಸಿದ್ದಾರೆ ಎಂದರು.

ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ವೈಚಾರಿಕ ಹಾಗೂ ವೈಜ್ಞಾನಿಕ ಚಿಂತನೆಗಳನ್ನು ಒರೆಗೆ ಹಚ್ಚುವ ಜತೆಗೆ ಬಂಡಾಯ ಸಾರಿದವರು ಕನಕರು. ಅಮೃತ ಸಾಗರದಂತಿರುವ ಅವರನ್ನು ಬಯಲಾಟದ ಮೂಲಕ ಇಡೀ ಸಮಾಜಕ್ಕೆ ಕನ್ನಡಿಯಾಗಿಸಿದ್ದಾರೆ ಎಂ.ಎಸ್.ಮಾಳವಾಡರು ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಡಾ.ಡಿ.ರವಿ ಮಾತನಾಡಿ, ಕನಕ ಎಂಬ ಜ್ಞಾನ ಹೊಸ ಹೊಸ ರೂಪದಲ್ಲಿ ಪ್ರಕಟವಾಗುತ್ತಲೇ ಇರುತ್ತದೆ. ಹೊಸ ಸಂಗತಿಗಳನ್ನು ಸ್ಪುರಿಸುವ ಜ್ಞಾನದಾನಿ ಕನಕ ಕೃತಿಕಾರ ಎಂ.ಎಸ್.ಮಾಳವಾಡರ ಅನಾರೋಗ್ಯದ ಮಧ್ಯ ಅವರಿಗೊಂದು ಆತ್ಮಚೈತನ್ಯ ತುಂಬಲಿದೆ. ಪ್ರಾಧಿಕಾರ ಪುಸ್ತಕ ಪ್ರಕಟಣೆಗೆ ಅಭಿಮಾನ ಪಡುತ್ತದೆ ಎಂದರು.

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಸಂಶೋಧಕ ಡಾ.ಜಗನ್ನಾಥ ಗೇನಣ್ಣವರ ಪ್ರಾಸ್ತಾವಿಕವಾಗಿ, ಕರ್ನಾಟಕ ಜಾನಪದ ವಿವಿ ಸಹಾಯಕ ಪ್ರಾಧ್ಯಾಪಕ ಡಾ.ಚಂದ್ರಪ್ಪ ಸೊಬಟಿ ಪುಸ್ತಕ ಕುರಿತು ವಿವರಿಸಿದರು. ಸಾಹಿತಿ ಸಂಕಮ್ಮ ಸಂಕಣ್ಣನವರ ಮಾತನಾಡಿದರು.

ಸಾಹಿತಿ ಸತೀಶ ಕುಲಕರ್ಣಿ, ವಿ.ಎನ್.ತಿಪ್ಪನಗೌಡ್ರ, ನಾಗೇಂದ್ರ ಕಡಕೋಳ, ಹನುಮಂತಗೌಡ ಗಾಜಿಗೌಡ್ರ, ಎಸ್.ಆರ್.ಹಿರೇಮಠ, ಮಾಲತೇಶ ಅಂಗೂರ, ಲೀಲಾವತಿ ಪಾಟೀಲ, ಮಹಾದೇವಿ ಕಣವಿ, ದಾಕ್ಷಾಯಣಿ ಗಾಣಗೇರ, ಅಮೃತಮ್ಮ ಶೀಲವಂತರ, ರೇಣುಕಾ ಗುಡಿಮನಿ, ಜುಬೇದಾ ನಾಯಕ್, ಲೀಲಾ ಬೇವಿನಮರದ ಉಪಸ್ಥಿತರಿದ್ದರು.

ಭೂಮಿಕಾ ರಜಪೂತ ವಚನ ಗಾಯನ ಪ್ರಸ್ತುತಪಡಿಸಿದರು. ಪರಿಮಳಾ ಜೈನ್ ಸ್ವಾಗತಿಸಿದರು. ಗೂಳಪ್ಪ ಅರಳಿಕಟ್ಟಿ ನಿರೂಪಿಸಿದರು. ಪೃಥ್ವಿರಾಜ ಬೆಟಗೇರಿ ವಂದಿಸಿದರು.

ಹಾವೇರಿ ವಿವಿಯಲ್ಲಿ ಕನಕ ಅಧ್ಯಯನ ಪೀಠ

ಕಾರ್ಯಕ್ರಮ ಉದ್ಘಾಟಿಸಿದ ಹಾವೇರಿ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ ಮಾತನಾಡಿ, ರಂಗಕರ್ಮಿ ಎಂ.ಎಸ್.ಮಾಳವಾಡರು ಕನಕದಾಸರ ಜೀವನ ಸಂದೇಶವನ್ನು ವೀರತೆ ಹಾಗೂ ಹಾಸ್ಯ ಪ್ರಧಾನದಲ್ಲಿ ಆಧುನಿಕತೆಯ ಸ್ಪರ್ಶ ನೀಡಿರುವರು. ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರದ ಈ ಕಾರ್ಯ ಶ್ಲಾಘನೀಯ. ಹಾವೇರಿ ವಿಶ್ವವಿದ್ಯಾಲಯದಲ್ಲಿ ಕನಕ ಅಧ್ಯಯನ ಪೀಠ ಆರಂಭಿಸುವ ಚಿಂತನೆ ಇದೆ ಎಂದರು.

ಕೋಟ್:

ಯಾವುದೇ ಕಲೆಗೆ ಸಾಮಾಜಿಕ ಬದ್ಧತೆ ಇರಬೇಕು. ಅದು ಸಮಾಜವನ್ನು ತಿದ್ದುವ ಸಾಧನವಾಗಬೇಕು. ಈ ಹಿನ್ನೆಲೆಯಲ್ಲಿ ಕನಕದಾಸರನ್ನು ಬಯಲಾಟದ ಮೂಲಕ ಜನಪದೀಯವಾಗಿಸಲು ಮತ್ತು ಶ್ರಮ ಸಂಸ್ಕೃತಿಯ ಬಿಂಬದಲ್ಲಿ ಕಾಣಲು ಯತ್ನಿಸಿರುವೆ. ಅದು ಪವಾಡಗಳನ್ನು ಮತ್ತು ಐತಿಹ್ಯಗಳನ್ನು ಮೀರಿದ ನಿಲುವಿನಿಂದ ಕೂಡಿದೆ.

- ಎಂ.ಎಸ್.ಮಾಳವಾಡ, ರಂಗಕರ್ಮಿ