ಹಾವೇರಿ: ರಾಣಾ ಹಾಗೂ ರಕ್ಷಿತಾ ಎಂಬ ಹೆಸರಿನ ಎರಡು ಶ್ವಾನಗಳ ಮಾಲೀಕತ್ವ ಹಾಗೂ ಸಾಕಿದ್ದ ವ್ಯಕ್ತಿಯ ನಡುವೆ ನಡೆದಿದ್ದ ಜಗಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಶ್ವಾನಗಳನ್ನು ಮಾಲೀಕರ ಸುಪರ್ದಿಗೆ ಒಪ್ಪಿಸಿ ಪ್ರಕರಣವನ್ನು ಸುಖಾಂತ್ಯಗೊಳಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಇಲ್ಲಿನ ಬಸವೇಶ್ವರ ನಗರದ ನಿವಾಸಿ ರಾಕೇಶ ಬಾರಂಗಿ ಹಂಸಭಾವಿ ಬಳಿಯ ತಮ್ಮ ಜಮೀನಿನಲ್ಲಿ ಜರ್ಮನ ಶಫರ್ಡ್ ತಳಿಯ ಎರಡು ಶ್ವಾನಗಳನ್ನು ಸಾಕಿದ್ದರು. ಅಲ್ಲಿ ಹೊಲದಲ್ಲಿ ಚಿರತೆ ಕಾಟದಿಂದ ರಕ್ಷಿಸಿಕೊಳ್ಳಲೆಂದು ಹಾವೇರಿಯ ನಿವಾಸಕ್ಕೆ ತಂದಿದ್ದರು. ಮನೆಯಲ್ಲಿ ಮೊದಲೇ ಒಂದು ಶ್ವಾನ ಇದ್ದ ಕಾರಣ ಕೆಲದಿನ ನೋಡಿಕೊಳ್ಳುವಂತೆ ಸ್ನೇಹಿತ ಮದನ ಎಂಬುವರಿಗೆ ಕೊಟ್ಟಿದ್ದರು.
ಮದನ ಅವರು ಶ್ವಾನಗಳನ್ನು ತಮ್ಮ ಬಳಿ ಇಟ್ಟುಕೊಳ್ಳದೇ ಪರಿಚಯಸ್ಥರ ಮೂಲಕ ಹೂವಿನಶಿಗ್ಲಿಯ ಚಂದ್ರಶೇಖರ ಮೇಟಿ ಎಂಬುವರಿಗೆ ಕೊಟ್ಟಿದ್ದರು. ಶ್ವಾನ ಸಾಕುವ ಹವ್ಯಾಸ ಮಾಡಿಕೊಂಡಿದ್ದ ಚಂದ್ರಶೇಖರ, ಒಂದೂವರೆ ತಿಂಗಳು ಎರಡೂ ಶ್ವಾನಗಳನ್ನು ಸಾಕಿದ್ದರು.
ಇತ್ತೀಚೆಗೆ ಶ್ವಾನಗಳನ್ನು ವಾಪಸ್ ಪಡೆಯಲು ರಾಕೇಶ ಮುಂದಾಗಿದ್ದರು. ಆದರೆ, ಮದನ ಆ ಶ್ವಾನಗಳನ್ನು ಚಂದ್ರಶೇಖರ ಬಳಿ ಕೊಟ್ಟಿರುವುದು ಗೊತ್ತಾಗಿದೆ. ಈ ಬಗ್ಗೆ ವಿಚಾರಿಸಿದಾಗ, ನೀವು ನಮಗೆ ಕೊಟ್ಟಿಲ್ಲ ಎಂದು ವಾಪಸ್ ಕಳುಹಿಸಿದ್ದರು. ಹಾಗಾಗಿ, ರಾಕೇಶ, ಶ್ವಾನ ನಾಪತ್ತೆ ಬಗ್ಗೆ ಶಹರ ಠಾಣೆಗೆ ದೂರು ನೀಡಿದ್ದರು.
ಇನ್‌ಸ್ಪೆಕ್ಟರ್ ಮೋತಿಲಾಲ ಪವಾರ ತಂಡ ಚಂದ್ರಶೇಖರನನ್ನು ಠಾಣೆಗೆ ಕರೆಸಿ ಬುದ್ದಿ ಹೇಳಿ ಕಾನೂನುಬದ್ಧವಾಗಿಯೇ ಶ್ವಾನಗಳನ್ನು ಮಾಲೀಕರಿಗೆ ಕೊಡಿಸಿದ್ದಾರೆ. ಸಾಕಿ ಸಲುಹಿದ ಚಂದ್ರುಗೆ ಪರಿಹಾರ ಎಂದು 9 ಸಾವಿರ ರೂ. ಕೊಡಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.