ಹಾವೇರಿ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಉತ್ತರ ಕರ್ನಾಟಕ ಹಾಗೂ ಹೈದರಾಬಾದ್ ಕರ್ನಾಟಕಕ್ಕೆ ಅನೇಕ ಕೊಡುಗೆಗಳನ್ನು ಕೊಟ್ಟಿದ್ದಾರೆ. ಆದರೆ, ಅವುಗಳನ್ನು ಜನರಿಗೆ ತಿಳಿಸುವಲ್ಲಿ ನಾವು ವಿಫಲರಾಗಿದ್ದೇವೆ. ಈಗ ಅವುಗಳನ್ನು ಜನರಿಗೆ ತಿಳಿಸುವ ಉದ್ದೇಶದಿಂದ ಹುಬ್ಬಳ್ಳಿಯಲ್ಲಿ ಅ.12ರಂದು ಧಾರವಾಡ ವಿಭಾಗ ಮಟ್ಟದ ಕಾರ್ಯಕರ್ತರ ಪುನಶ್ಚೇತನ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಜೆಡಿಎಸ್ ರಾಜ್ಯ ಕಾರ್ಯಾಧ್ಯಕ್ಷ ಹಾಗೂ ಮಾಜಿ ಸಚಿವ ಆಲ್ಕೋಡ ಹನುಮಂತಪ್ಪ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನತಾ ದಳ ಸರ್ಕಾರ ಅಧಿಕಾರದಲ್ಲಿ ಇದ್ದಾಗಲೂ ಕೂಡ ಈ ಭಾಗದಲ್ಲಿ ಸಾಕಷ್ಟು ಕೆಲಸಗಳಾಗಿವೆ. ನೀರಾವರಿಗೆ ಪಕ್ಷ ಕೊಡುಗೆ ಕೊಟ್ಟಿದೆ. ತಾಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಚುನಾವಣೆ ದೃಷ್ಟಿಯಿಂದ ಗ್ರಾಮ ಮಟ್ಟದಲ್ಲಿ ಸಂಘಟನೆ ಮಾಡಲು ನಿರ್ಧರಿಸಲಾಗಿದೆ. ಹಾಗಾಗಿ, ಧಾರವಾಡ ವಿಭಾಗದ ಪುನಶ್ಚೇತನ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಸಮಾವೇಶದಲ್ಲಿ ಧಾರವಾಡ, ಹಾವೇರಿ, ಗದಗ, ಉತ್ತರ ಕನ್ನಡ ಜಿಲ್ಲೆಯ ತಾಲೂಕು, ಜಿಲ್ಲಾ ಮಟ್ಟದ ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಕಾರ್ಯಕರ್ತರ ಸಲಹೆ, ಅಭಿಪ್ರಾಯ ಪಡೆದು ಸಂಘಟನೆ ರೂಪಿಸಲಾಗುವುದು ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆ ಬಿಟ್ಟರೆ ಯಾವ ಅಭಿವೃದ್ಧಿ ಕಾರ್ಯವನ್ನೂ ಮಾಡುತ್ತಿಲ್ಲ. ಇದ್ದ ಗ್ಯಾರಂಟಿಗಳನ್ನೂ ಜನರಿಗೆ ತಲುಪಿಸಲು ಆಗುತ್ತಿಲ್ಲ. ಅತಿವೃಷ್ಠಿಗೆ ಮನೆಹಾನಿಯಾದವರಿಗೆ ಪರಿಹಾರ ಕೊಡಲೂ ಸರ್ಕಾರದ ಬಳಿ ಹಣವಿಲ್ಲ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಜಿಲ್ಲಾ ವಕ್ತಾರ ಮಹಾಂತೇಶ ಬೇವಿನಹಿಂಡಿ, ಕೆ.ಎಸ್.ಸಿದ್ದಬಸಪ್ಪ ಯಾದವ, ಮಲ್ಲಿಕಾರ್ಜುನ ಹಲಗೇರಿ, ರಾಜ್ ಅಹ್ಮದ್, ಜೆ.ಎ.ಪಿ.ಪಠಾಣ, ರಾಮನಗೌಡ ಪಾಟೀಲ, ಎಸ್.ಎಲ್.ಕಾಡದೇವರಮಠ, ಮಲ್ಲಿಕಾರ್ಜುನ ಅರಳಿ, ಇತರರಿದ್ದರು.
ಕೋರ್ ಕಮಿಟಿ ಸಭೆ
ಪುನಶ್ಚೇತನ ಸಮಾವೇಶದ ಬಳಿಕ ಹುಬ್ಬಳ್ಳಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ.ದೇವೇಗೌಡರ ನೇತೃತ್ವದಲ್ಲಿ ಕೋರ್ ಕಮಿಟಿ ಸಭೆಯೂ ನಡೆಯಲಿದೆ. ಸಮಿತಿ 21 ಸದಸ್ಯರೂ ಭಾಗವಹಿಸಲಿದ್ದಾರೆ ಎಂದು ಹನುಮಂತಪ್ಪ ತಿಳಿಸಿದರು.
ಉಕ ಟಿಕೆಟ್ ಬಗ್ಗೆ ಭವಿಷ್ಯದಲ್ಲಿ ಚರ್ಚೆ
ನಾವು ಬಿಜೆಪಿ ಜತೆಗೆ ಸೇರಿಲ್ಲ. ಎನ್‌ಡಿಎ ಮೈತ್ರಿಕೂಟದ ಜತೆಗೆ ಸೇರಿದ್ದೇವೆ. ಟಿಕೆಟ್ ಹಂಚಿಕೆ ಪ್ರಕ್ರಿಯೆ ಇನ್ನೂ ಆರಂಭವಾಗಿಲ್ಲ. ನಂತರದಲ್ಲಿ ಉತ್ತರ ಕರ್ನಾಟಕದ ಲೋಕಸಭೆ ಟಿಕೆಟ್ ಹಂಚಿಕೆ ಕುರಿತು ಚರ್ಚಿಸಿ ನಿರ್ಧರಿಸಲಾಗುವುದು ಎಂದು ಹನುಮಂತಪ್ಪ ಹೇಳಿದರು.