ಜಿಲ್ಲೆ

ಯಾವುದೇ ಭಯವಿಲ್ಲದೇ ಪರೀಕ್ಷೆ ಎದುರಿಸಿ; ರುದ್ರಪ್ಪ ಲಮಾಣಿ ಕಿವಿಮಾತು; ಜೆಸಿಐನಿಂದ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಯಶಸ್ಸು ಗಳಿಸಬೇಕೆಂದರೆ ವಿದ್ಯಾರ್ಥಿಗಳು ಸತತವಾಗಿ ಅಭ್ಯಾಸ ಮಾಡಬೇಕು. ಯಾವುದೇ ಭಯವಿಲ್ಲದೇ ಪರೀಕ್ಷೆಗಳನ್ನು ಎದುರಿಸಿ ಉತ್ತಮ ಅಂಕ ಪಡೆಯಬೇಕು ಎಂದು ವಿಧಾನಸಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಗುರುಭವನದಲ್ಲಿ ಶಾಲಾ ಶಿಕ್ಷಣ ಇಲಾಖೆ, ಜೆ.ಸಿ.ಐ. ಹಾವೇರಿ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿಗಳ ಸಂಘದ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ‘ಪರೀಕ್ಷೆ ಒಂದು ಹಬ್ಬ; ಆಚರಿಸೋಣ ಬನ್ನಿ’ ಎಂಬ ಶೀರ್ಷಿಕೆಯ ಎಸ್ಸೆಸ್ಸೆಲ್ಸಿ ವಿದಾರ್ಥಿಗಳ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶ್ರಮದಿಂದ ಓದಿದ ವಿದ್ಯೆ ನಿಮ ್ಮಜೀವನಕ್ಕೆ ಆಧಾರವಾಗಬಲ್ಲದು. ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಲು ಗುರು ಹಿರಿಯರೊಂದಿಗೆ ವಿನಯದಿಂದ ವರ್ತಿಸಬೇಕು. ವಿವಿಧ ವಿಷಯಗಳ ಕುರಿತ ಆಸಕ್ತಿ, ಪಠ್ಯದ ಮೇಲಿನ ಕುತೂಹಲಗಳನ್ನು ಹೆಚ್ಚಿಸಿಕೊಳ್ಳಬೇಕು. ಇದೇ ದೃಷ್ಟಿಕೋನದಲ್ಲಿ ಎಲ್ಲರೂ ಮಕ್ಕಳಿಗೆ ಸಹಕರಿಸಬೇಕು ಎಂದು ಹೇಳಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಮೌನೇಶ ಬಡಿಗೇರ ಮಾತನಾಡಿ, ಶಿಕ್ಷಕರು ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ಮಾಡುವ ಮೂಲಕ ಪರೀಕ್ಷೆಯನ್ನು ಸುಲಭವಾಗಿ ಎದುರಿಸುವಂತೆ ಕ್ರಮ ವಹಿಸಬೇಕು ಎಂದರು.
ಹೊಸಪೇಟೆಯ ಸವಿತಾ ರಮೇಶ ಉಪನ್ಯಾಸ ನೀಡಿ, ಪರೀಕ್ಷೆ ಎದುರಿಸಲು ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು.
ಜೆಸಿಐ ಅಧ್ಯಕ್ಷ ಚಂದ್ರಶೇಖರಯ್ಯ ಸುತ್ತೂರಮಠ, ರಾಜ್ಯ ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಬಿ.ಎಂ.ಬೇವಿನಮರದ ಮಾತನಾಡಿದರು.
ನಗರದ ವಿವಿಧ ಪ್ರೌಢಶಾಲೆಗಳಿಂದ ಐದು ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಎಂ.ತೋಟಗೇರ, ಲಕ್ಷ್ಮೀ ಅಡಕಿ, ಓಂಪ್ರಕಾಶ ಯತ್ನಳ್ಳಿ, ಜೆಸಿಐ ಘಟಕದ ಪೂರ್ವಾಧ್ಯಕ್ಷರಾದ ನಾಗರಾಜ ನಡುವಿನಮಠ, ರುಸ್ತುಂ ನಂದಿಹಳ್ಳಿ, ಮಂಜುನಾಥ ಚೂರಿ, ಸದಸ್ಯರಾದ ಶಿವಕುಮಾರ ಕಡೆಕೊಪ್ಪ, ಮತ್ತಿತರರು ಪಾಲ್ಗೊಂಡಿದ್ದರು.