ಹಾವೇರಿ: ಜನಪದದ ಆಶಯ ಅಮ್ಮನ ಅಂತಃಕರಣದಂತೆ. ಹೃದಯಕ್ಕೆ ಇಳಿದು ಸಮಾಜದ ಅಂಕು ಡೊಂಕುಗಳನ್ನು ತಿದ್ದುವ ಶಕ್ತಿಯನ್ನು ಅದು ಹೊಂದಿದೆ. ಈ ಮೂಲಕ ಶುದ್ಧ ಸಮಾಜ ನಿರ್ಮಾಣದ ಕನಸನ್ನು ಹೊತ್ತಿದೆ ಎಂದು ಜಾನಪದ ತಜ್ಞ ಪ್ರೊ.ಲಿಂಗರಾಜ ಕಮ್ಮಾರ ಹೇಳಿದರು.
ಪಟ್ಟಣದ ಹುಕ್ಕೇರಿ ಮಠದಲ್ಲಿ ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ವತಿಯಿಂದ ಸೋಮವಾರ ಆಯೋಜಿಸಿದ್ದ ‘ವಿಶ್ವ ಜಾನಪದ ದಿನಾಚರಣೆ’ ಸಮಾರಂಭದಲ್ಲಿ ಅವರು ಮಾತನಾಡಿದರು.
ಜನಪದ ಸಂಗ್ರಹ ಇನ್ನೂ ಇದೆ. ನಮ್ಮ ಹಳ್ಳಿಗಳಲ್ಲಿ ಲಿಖಿತ ದಾಖಲೆಯಾಗಿರದ ಸಾಕಷ್ಟು ಜನಪದ ಕಥೆ, ಹಾಡು, ಕುಣಿತ ಇವೆ. ಅವುಗಳನ್ನು ದಾಖಲೀಕರಣಗೊಳಿಸುವ ಅಗತ್ಯವಿದೆ. ಜನಪದಕ್ಕೆ ಬಹುಪಾಲು ಕೃಷಿ ಸಂಸ್ಕೃತಿಯೇ ಮೂಲವಾಗಿದೆ. ಜನಪದವನ್ನು ಗೌರವಿಸುವುದೆಂದರೆ ಈ ನೆಲ ಸಸಂಸ್ಕೃತಿಯನ್ನು ಗೌರವಿಸಿದಂತೆ ಎಂದರು.
ಸಾಹಿತಿ ಪ್ರೊ.ಮಾರುತಿ ಶಿಡ್ಲಾಪೂರ ಮಾತನಾಡಿ, ಜನಪದದ ಜೀವಂತಿಕೆಯನ್ನು ಇಂದಿನ ವಿದ್ಯುನ್ಮಾನ ಕಾಲದಲ್ಲಿ ಮುಚ್ಚಿ ಹಾಕಲು ಸಾಧ್ಯವಿಲ್ಲ. ಕಾಲ ಎಷ್ಟೇ ಬದಲಾದರೂ ನಮ್ಮ ಮೂಲ ಸಂಸ್ಕೃತಿಯ ಬೇರುಗಳು ಗಟ್ಟಿಯಾಗಿವೆ. ಮೇಲ್ನೋಟಕ್ಕೆ ಅದು ಕಳೆದು ಹೋದಂತೆ ಭಾಸವಾಗಬಹದು. ಕಾಲಚಕ್ರ ಮತ್ತೆ ನಮ್ಮ ಮೂಲ ಜನಪದ ಜೀವನ ಪದ್ಧತಿಗೆ ಮರಳುವ ಎಲ್ಲ ಲಕ್ಷಣಗಳಿವೆ. ನಮ್ಮ ಜನಪದ ವೈದ್ಯ, ಜನಪದ ಆಟಗಳು ಅತ್ಯಂತ ವೈಜ್ಞಾನಿಕವಾಗಿವೆ. ಈಗ ಆಯುರ್ವೇದವೇ ಎಲ್ಲ ಮನೆ ಮನೆಗಳಲ್ಲಿ ಅಚ್ಚೊತ್ತಿದೆ. ನಮ್ಮ ಕೃಷಿಯ ಜನಪದ ಪ್ರಕಾರಗಳನ್ನು ಮುಂದಿನ ಪೀಳಿಗೆಗಾಗಿ ಉಳಿಸುವ ಅಗತ್ಯವಿದೆ. ಅದರ ಬೆಳವಣಿಗೆಗೆ ನಾವು ಪುಷ್ಠಿ ನೀಡಿದರೆ ಎಲ್ಲವೂ ಸಾಧ್ಯ ಎಂದರು.
ಕನ್ನಡ ಜನಪದ ಪರಿಷತ್ ಜಿಲ್ಲಾಧ್ಯಕ್ಷ ಗುರುಶಾಂತ ಯತ್ನಳ್ಳಿ ಮಾತನಾಡಿ, ಜನಪದ ಪರಿಷತ್ತಿನ ಸಂಘಟನೆಗೆ ಇಂದು ಚಾಲನೆ ನೀಡಲಾಗಿದೆ. ಜಿಲ್ಲಾ ಮಂಡಳಿ ರಚನೆಯಾಗಿದೆ. ಅಕ್ಟೋಬರ್ 30ರೊಳಗೆ ತಾಲೂಕು ಘಟಕಗಳನ್ನು ರಚಿಸಲಾಗುವುದು ಎಂದರು.
ಜಾನಪದ ಕಲಾವಿದರಾದ ಶಂಕರ ತುಮ್ಮಣ್ಣನವರ ಹಾಗೂ ಪ್ರೇಮಾ ಭುವನೇಶ್ವರಮಠ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಕಾರ್ಯದರ್ಶಿ ಪರಿಮಳಾ ಜೈನ್, ಖಜಾಂಚಿ ಹರೀಶ ಕಲಾಲ, ಸಂಘಟನಾ ಕಾರ್ಯದರ್ಶಿ ಶಶಿಕಲಾ ಅಕ್ಕಿ, ಜಿಲ್ಲಾ ಸದಸ್ಯರಾದ ಚಂದ್ರಶೇಖರ ಕುಳೇನೂರ, ಬಸವರಾಜ ಶಿಗ್ಗಾಂವಿ, ಕರಬಸಪ್ಪ ಪೂಜಾರ, ರಾಘವೇಂದ್ರ ಕಬಾಡಿ, ಹಾಗೂ ಚಂಪಾ ಹುಣಸೀಕಟ್ಟಿ, ಶಿವನಾಗಮ್ಮ ಆರಾಧ್ಯಮಠ, ಮತ್ತಿತರರು ಪಾಲ್ಗೊಂಡಿದ್ದರು.