ಜಿಲ್ಲೆ

ಪ್ರಾಯದ ಯುವತಿಯರಿಗೆ ಲವ್ ಜಿಹಾದ್ ಪಾಶ; ಹಣ, ಒಡವೆ ಆಮಿಷದಿಂದ ವಿದೇಶಕ್ಕೆ ಸಾಗಣೆ; ಜೈನಮುನಿ ವಿದಿತಸಾಗರಜಿ ಮಹಾರಾಜ ಕಳವಳ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ದೇಶದಲ್ಲಿ ವಿದೇಶಿಗರ ಕೈವಾಡದಿಂದ ಲವ್ ಜಿಹಾದ್ ಜಾಲ ಸಕ್ರಿಯವಾಗಿದ್ದು, ಪ್ರಾಯದ ಯುವತಿಯರಿಗೆ ಹಣ, ಒಡವೆಯ ಆಮಿಷ ಒಡ್ಡಿ, ಮನ ಪರಿವರ್ತನೆ ಮಾಡಿ ವಿದೇಶಗಳಿಗೆ ಸಾಗಣೆ ಮಾಡಲಾಗುತ್ತಿದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರಜಿ ಮಹಾರಾಜರು ಕಳವಳ ವ್ಯಕ್ತಪಡಿಸಿದರು.

ನಗರದ ಭಗವಾನ ಶ್ರೀ 1008 ನೇಮಿನಾಥ ದಿಗಂಬರ ಜೈನ ಮಂದಿರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರಜಿ ಮಹಾರಾಜರ 7ನೇ ದೀಕ್ಷಾ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಾಯದಲ್ಲಿ ಹಲವು ಯುವತಿಯರಿಗೆ ಯಾವುದು ತಪ್ಪು, ಯಾವುದು ಸರಿ ಎಂಬುದು ತಿಳಿಯುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಹಲವು ಆಮಿಷ ಒಡ್ಡಿ ಮೋಸ ಮಾಡಲಾಗುತ್ತಿದೆ ಎಂದರು.

ಲವ್ ಜಿಹಾದ್ ಪಾಶಕ್ಕೆ ಲಕ್ಷಾಂತರ ಯುವತಿಯರು ಸಿಲುಕಿ ನೊಂದಿದ್ದಾರೆ. ಆದರೆ, ಈ ಬಗ್ಗೆ ಹೇಳಲು ಯಾರೂ ಮುಂದೆ ಬರುತ್ತಿಲ್ಲ. ಯಾರೂ ಮೋಸ ಹೋಗಬಾರದು. ಹಣದ ಆಮಿಷಕ್ಕೆ ನಮ್ಮ ಮನೆಯ ಕನ್ಯೆಯರನ್ನು ಹೊರದೇಶಕ್ಕೆ ಮಾರಾಟ ಮಾಡುವ ಸಂಸ್ಕೃತಿ ನಮ್ಮದಲ್ಲ. ಭಾರತೀಯ ಸಂಸ್ಕೃತಿ, ಸಂಪ್ರದಾಯ, ಸಮಾಜ, ಧರ್ಮ ವಿಶಿಷ್ಟವಾದದ್ದು. ಇದು ಉಳಿಯಬೇಕಾದರೆ ಆಯಾ ಸಮುದಾಯದವರು ಆಯಾ ಸಮುದಾಯದವರನ್ನೇ ಮದುವೆ ಆಗಬೇಕು. ತಮ್ಮದೇ ಧರ್ಮದವರಿಗೆ ಕನ್ಯೆಯರನ್ನು ಕೊಟ್ಟು ಮದುವೆ ಮಾಡಬೇಕು. ಈ ಮೂಲಕ ಸಮಾಜ ಹಾಗೂ ರಾಷ್ಟ್ರವನ್ನು ಉಳಿಸಬೇಕು. ಧರ್ಮ ರಕ್ಷಣೆ ಮಾಡುವ ಕೆಲಸ ಪ್ರತಿಯೊಬ್ಬ ಭಾರತೀಯರ ಜವಾಬ್ದಾರಿ ಎಂದು ಸಲಹೆ ನೀಡಿದರು.

ಉಪಜಾತಿ ಬೇಡ : ಧರ್ಮಸ್ಥಳ ಕ್ಷೇತ್ರದ ಬಗ್ಗೆ ಅಪಪ್ರಚಾರ ಬಹಳಷ್ಟು ಜನ ಮಾಡುತ್ತಾರೆ. ಆದರೆ ವಸ್ತು ಸ್ಥಿತಿಯನ್ನು ಯಾರೂ ಮುಚ್ಚಿಡಲು ಸಾಧ್ಯವಿಲ್ಲ. ಧರ್ಮಸ್ಥಳದ ಸತ್ಯ ಮತ್ತು ಧರ್ಮದ ಬಗ್ಗೆ ಹೋರಾಟ ಮಾಡಬೇಕು. ದೇಶದ ಅಳಿವು ಉಳಿವು ಪ್ರತಿಯೊಬ್ಬರ ಮುಂದಿದೆ. ಜೈನ ಧರ್ಮದ ಎಲ್ಲರೂ ಜಾತಿಗಣತಿಗೆ ಬಂದಾಗ ಜೈನ ಧರ್ಮವನ್ನು ಉಲ್ಲೇಖ ಮಾಡಬೇಕು. ಉಪಜಾತಿ ಬರೆಯುವ ಅವಶ್ಯಕತೆ ಇಲ್ಲ, ಉಪಜಾತಿ ಬರೆಸಿದರೆ ಸಮಸ್ಯೆಗಳು ಹೆಚ್ಚಾಗುತ್ತವೆ ಎಂದರು.

ಮಹಾವೀರ ಬೈಯಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಜಯಕುಮಾರ ಭಯ್ಯಜಿ, ಮದನಕುಮಾರ ಜೈನ್, ಭರತ ಹಜಾರೆ, ಮಂಜುನಾಥ ಲಂಗೋಟಿ, ಸುಭಾಸ ಪಾಟೀಲ, ಪ್ರತಿಮಾಧಾರಿ ಸುಮಂತ ಪತ್ರಾವಳಿ, ಸಮಾಜದ ಮುಖಂಡರು ಹಾಜರಿದ್ದರು. ಮಹಾವೀರ ಕಳಸೂರ ಸ್ವಾಗತಿಸಿದರು. ಸಂಜೀವ ಇಂಡಿ ಹಾಗೂ ಎಸ್.ಎ.ವಜ್ರಕುಮಾರ ನಿರೂಪಿಸಿದರು.

ಕೋಟ್:

ಅಹಿಂಸಾ ಧರ್ಮ ಶ್ರೇಷ್ಠವಾದುದು. ಹಿಂಸೆಯಿಂದ ದೂರ ಇರುವವರೇ ಹಿಂದುಗಳು. ಇಡೀ ವಿಶ್ವದಲ್ಲಿ ಭಾರತ ದೇಶ ದೇವಸ್ಥಾನವಾಗಿದೆ. ಭಾರತವನ್ನು ಪೂಜ್ಯನೀಯ ಭಾವದಿಂದ ನೋಡಲಾಗುತ್ತಿದೆ. ಅಹಿಂಸಾ ಧರ್ಮ ಅನುಕರಣೆ ಮಾಡುವ ಮೂಲಕ ಜಾತಿ, ಧರ್ಮ, ಪಂಗಡ ಎನ್ನದೇ ಅಹಿಂಸಾ ಧರ್ಮವನ್ನು ಪರಿಪಾಲಿಸಬೇಕು. ಹಿಂದುಗಳು, ಜೈನರು ಹೀಗೆ ಎಲ್ಲ ಅಹಿಂಸೋಧರ್ಮ ಬಾಂಧವರು ಒಗ್ಗಟ್ಟಾಗಬೇಕು. ಭಾರತ ದೇಶದ ಸಂಸ್ಕೃತಿ, ಸಂಪ್ರದಾಯ, ಆಚಾರ ವಿಚಾರಗಳು ಒಂದೇ ಆಗಿರಬೇಕು. ಪೂರ್ವಜರು, ರಾಮ, ಹನುಮರು ಮಾಡಿದ ಧರ್ಮ ಬೋಧನೆಯನ್ನು, ಸಂಸ್ಕೃತಿಯನ್ನು ಹಾಳು ಮಾಡಬಾರದು. ಸಂಸ್ಕೃತಿ ಸಮಾಜದ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ.

- ಮುನಿಶ್ರೀ 108 ವಿದಿತಸಾಗರಜಿ ಮಹಾರಾಜರು