ಜಿಲ್ಲೆ

ಹಿರೇಕೋಡಿ ಜೈನ ಮುನಿಗಳ ಹತ್ಯೆಗೆ ಖಂಡನೆ; ದಿಗಂಬರ, ಶ್ವೇತಾಂಬರ ಸಮಾಜದಿಂದ ಮೌನ ಪ್ರತಿಭಟನೆ

ಹಾವೇರಿ: ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಹಿರೇಕೋಡಿ ಗ್ರಾಮದ ನಂದಿ ಪಾರ್ವತದ ಆಶ್ರಮದ 108 ಶ್ರೀ ಕಾಮಕುಮಾರ ನಂದಿ ಮುನಿ ಮಹಾರಾಜರ ಹತ್ಯೆಯನ್ನು ಖಂಡಿಸಿ ಹಾವೇರಿ ಜಿಲ್ಲಾ ದಿಗಂಬರ ಹಾಗೂ ಶ್ವೇತಾಂಬರ ಜೈನ ಸಮಾಜದ ವತಿಯಿಂದ ನಗರದಲ್ಲಿ ಸೋಮವಾರ ಮೌನ ಪ್ರತಿಭಟನೆ ನಡೆಸಲಾಯಿತು.
ಕೈಗೆ ಕಪ್ಪು ಪಟ್ಟಿ ಧರಿಸಿದ ನೂರಾರು ಜನರು ನಗರದ ಬಸ್ತಿ ಓಣಿ 1008 ನೇಮಿನಾಥ ಜಿನ ಮಂದಿರದಿಂದ ಮೌನ ಮೆರವಣಿಗೆ ಆರಂಭಿಸಿದರು. ಎಂಜಿ ರಸ್ತೆ ಮುಖಾಂತರ ಹೊಸಮನಿ ಸಿದ್ದಪ್ಪ ವೃತ್ತಕ್ಕೆ ಆಗಮಿಸಿ ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದರು. ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ಜಿಲ್ಲಾಧಿಕಾರಿಯವರಿಗೆ ಮನವಿ ಪತ್ರ ಸಲ್ಲಿಸಿದರು.
ದೇಶ, ಸಮಾಜದ ಒಳಿತಿಗಾಗಿ ಬದುಕುತ್ತಿದ್ದ ಜೈನಮುನಿಗಳ ಹತ್ಯೆ ಹೇಐವಾದದ್ದು. ಮುಂದಿನ ದಿನಗಳಲ್ಲಿ ತ್ಯಾಗಿಗಳು, ಮುನಿಗಳು ಸೇರಿದಂತೆ ಎಲ್ಲ ಧರ್ಮದ ಗುರುಗಳಿಗೆ ಸರ್ಕಾರ ಸೂಕ್ತ ಭದ್ರತೆ ಒದಗಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಚಾರಿಣಿ ಸುಮಂಗಲಮ್ಮ, ಜಿಲ್ಲಾ ಜೈನ ಸಮಾಜದ ಅಧ್ಯಕ್ಷ ಮಂಜುನಾಥ ತಡಸದ, ಉಪಾಧ್ಯಕ್ಷ ಸುನೀಲ ಅರೆಗೊಪ್ಪ, ಗೌರವಾಧ್ಯಕ್ಷ ಭರತರಾಜ ಹಜಾರಿ, ಹಾವೇರಿ ಜೈನ ಸಮಾಜದ ಅಧ್ಯಕ್ಷ ಚಂದ್ರನಾಥ ಕಳಸೂರ, ಸುಜಿತ ಜೈನ, ವಜ್ರಕುಮಾರ, ಶಿವರಾಜಪ್ಪ ಅಪ್ಪಣ್ಣವರ, ವಿಜಯ ಕುಮಾರ ಸಾತಗೊಂಡ, ಮಹಾವೀರ ಕಳಸೂರ, ಸುಧೀರ ಉಪಾಧ್ಯ, ಸುಧೀರ ಛಬ್ಬಿ, ಪದ್ಮರಾಜ ಕಳಸೂರ, ಮಂದಾರ ವಡವೆ, ರಮೇಶ ಕಳಸೂರ, ಸನತಕುಮಾರ ಕಳಸೂರ, ಸುಭಾಷ ಹೂಗಾರ, ರತ್ನತ್ರಯ ಮಹಿಳಾ ಸಮಾಜದ ಅಧ್ಯಕ್ಷೆ ಆರತಿ ಹಜಾರೆ, ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.