ಜಿಲ್ಲೆ

ಜಿಲ್ಲೆಯಲ್ಲೂ ಆರ್‌ಸಿಬಿ ಅಭಿಮಾನೋತ್ಸವ; ಎಲ್ಲೆಲ್ಲೂ ಐಪಿಎಲ್ ಫೈನಲ್ ಮ್ಯಾಚ್‌ನದ್ದೇ ಹವಾ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಜಿಲ್ಲಾ ಕೇಂದ್ರ ಹಾವೇರಿ ಸೇರಿದಂತೆ ಜಿಲ್ಲೆಯಾದ್ಯಂತ ಮಂಗಳವಾರ ಐಪಿಎಲ್ ಟಿ-20 ಕ್ರಿಕೆಟ್ ಕ್ರೇಜ್ ಜೋರಾಗಿತ್ತು. ಅದರಲ್ಲೂ 18 ವರ್ಷಗಳ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳುರು (ಆರ್‌ಸಿಬಿ) ಮೊದಲ ಬಾರಿಗೆ ಚಂಪಿಯನ್ ಆಗಲು ಅವಕಾಶ ಸಿಕ್ಕಿದ್ದರಿಂದ ಅಭಿಮಾನಿಗಳ ಅಭಿಮಾನೋತ್ಸವ ಮುಗಿಲು ಮುಟ್ಟಿತ್ತು.

ನಗರದ ಮುನ್ಸಿಪಲ್ ಹೈಸ್ಕೂಲ್ ಮೈದಾನದಲ್ಲಿ ಯುವಕ ಕಾಂಗ್ರೆಸ್ ವತಿಯಿಂದ ಫೈನಲ್ ಮ್ಯಾಚ್ ವೀಕ್ಷಣೆಗೆ ಬೃಹತ್ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗಿತ್ತು. ನೂರಾರು ಅಭಿಮಾನಿಗಳು ಕ್ರಿಕೆಟ್ ನೋಡಿ ಖುಷಿಪಟ್ಟರು.

ಬೆಳಗ್ಗೆಯಿಂದಲೇ ಆರ್‌ಸಿಬಿ ಗೆಲುವಿಗಾಗಿ ಅಭಿಮಾನಿಗಳು ವಿವಿಧ ದೇವಸ್ಥಾನಗಳಲ್ಲಿ ಪೂಜೆ ಸಲ್ಲಿಸಿದ್ದರು. ಮಧ್ಯಾಹ್ನ ಆಗುತ್ತಿದ್ದಂತೆ ಆರ್‌ಸಿಬಿ ಜರ್ಸಿ ಧರಿಸಿಕೊಂಡು ಸಂಜೆ ಪಂದ್ಯ ವೀಕ್ಷಣೆಗೆ ಅಣಿಯಾಗುತ್ತಿದ್ದುದು ಕಂಡು ಬಂತು. ಸಂಜೆ ಪಂದ್ಯ ಆರಂಭವಾಗುತ್ತಿದ್ದಂತೆ ಎಲ್ಲೆಲ್ಲೂ ಆರ್‌ಸಿಬಿ.. ಆರ್‌ಸಿಬಿ.. ಎಂಬ ಉದ್ಘೋಷ ಕೇಳಿ ಬಂತು.