ಜಿಲ್ಲೆ

ಕ್ರಿಕೆಟ್ ಬೆಟ್ಟಿಂಗ್ ದಂಧೆ ಅವ್ಯಾಹತ !; ಗಲ್ಲಿ ಗಲ್ಲಿಗಳಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆ ಜೋರು; ಮಟ್ಟ ಹಾಕಬೇಕಿದೆ ಪೊಲೀಸರು

ಕೇಶವಮೂರ್ತಿ ವಿ.ಬಿ. ಹಾವೇರಿ

ದಿನದಿಂದ ದಿನಕ್ಕೆ ಕ್ರಿಕೆಟ್ ಎಂಬ ಮಾಯಾಲೋಕ ಯುವ ಜನರನ್ನು ತನ್ನತ್ತ ಸೆಳೆಯುತ್ತಿದ್ದರೆ, ಕ್ರಿಕೆಟ್ ಬೆಟ್ಟಿಂಗ್ ಎಂಬ ಮಾಯಾಜಾಲ ಈ ಯುವಜನರನ್ನೇ ಟಾರ್ಗೆಟ್ ಮಾಡಿಕೊಂಡು ಯುವಕರನ್ನು ಹಾಳು ಕೂಪಕ್ಕೆ ತಳ್ಳುತ್ತಿದೆ. ಜಿಲ್ಲೆ ಸೇರಿದಂತೆ ರಾಜ್ಯದ ಹಲವೆಡೆ ಬೆಟ್ಟಿಂಗ್ ದಂಧೆ ಅವ್ಯಾಹತವಾಗಿ ನಡೆದಿದ್ದು, ಪಾಲಕರ ಆತಂಕಕ್ಕೆ ಕಾರಣವಾಗಿದೆ.
ಬೆಟ್ಟಿಂಗ್ ದಂಧೆಕೋರರು ಬಹುತೇಕ ವರ್ಷಪೂರ್ತಿ ಚಾಲ್ತಿಯಲ್ಲಿರುತ್ತಾರೆ. ಅದರಲ್ಲೂ ಐಪಿಎಲ್ (ಇಂಡಿಯನ್ ಪ್ರೀಮಿಯರ್ ಲೀಗ್) ಪಂದ್ಯಾವಳಿ ನಡೆದಾಗಲಂತೂ ಇವರ ಅಬ್ಬರ ಹೇಳತೀರದಾಗಿರುತ್ತದೆ. ಗಲ್ಲಿ ಗಲ್ಲಿಗಳಲ್ಲಿ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿ ನಡೆಯುತ್ತಿದೆ. ಬುಕ್ಕಿಗಳು ಯುವಕರನ್ನು ಗುರುತಿಸಿ ಹಣದ ಆಮಿಷ ಒಡ್ಡಿ ಬೆಟ್ಟಿಂಗ್ ಖೆಡ್ಡಾಕ್ಕೆ ಸಲೀಸಾಗಿ ಬೀಳಿಸಿಕೊಳ್ಳುತ್ತಿದ್ದಾರೆ.
ಸದ್ಯ ಐಪಿಎಲ್ ನಡೆಯುತ್ತಿದ್ದು ಜಿಲ್ಲೆಯ ಹಲವೆಡೆ ಬೆಟ್ಟಿಂಗ್ ಜೋರಾಗಿ ನಡೆದಿದೆ. ಬೆಟ್ಟಿಂಗ್ ಮಾಡುವವರು ಮುಖ್ಯವಾಗಿ ಯುವಜನರನ್ನೇ ಗುರಿಯಾಗಿಟ್ಟುಕೊಂಡು ದಂಧೆ ನಡೆಸುತ್ತಾರೆ. ಅದರಲ್ಲೂ ಶ್ರೀಮಂತ, ಮುಗ್ದ ಯುವಕರನ್ನು ಟಾರ್ಗೆಟ್ ಮಾಡಿ ಅವರಿಂದ ಲಕ್ಷ ಲಕ್ಷ ಹಣ ಸುರಿಯುವಂತೆ ವಾತಾವರಣ ಸೃಷ್ಟಿಸುತ್ತಾರೆ. ಅವರಿಗೆ ಬಗೆ ಬಗೆಯ ಆಮಿಷ ಒಡ್ಡುತ್ತಾರೆ.
ಕ್ರಿಕೆಟ್ ಬೆಟ್ಟಿಂಗ್‌ನಿಂದ ಹಲವು ಕುಟುಂಬಗಳು ಬೀದಿಗೆ ಬಂದಿವೆ. ಕೆಲವರು ಊರು ಬಿಟ್ಟ ಉದಾಹರಣೆಗಳಿವೆ. ಡ್ರಗ್ಸ್ ರೀತಿಯಲ್ಲಿ ಯುವ ಜನರನ್ನು ಈ ಜಾಲ ವ್ಯಾಪಿಸುವ ಮುನ್ನವೇ ಖಾಕಿಪಡೆ ದಂಧೆಕೋರರ ಹೆಡೆಮುರಿ ಕಟ್ಟಬೇಕಿದೆ.
ತರಹೇವಾರಿ ಆ್ಯಪ್
ಜಿಲ್ಲೆಯಲ್ಲಿ ಬೆಟ್ಟಿಂಗ್ ದಂಧೆಕೋರರು ತರಹೇವಾರಿ ಆ್ಯಪ್‌ಗಳ ಮೂಲಕ ದಂಧೆ ಶುರು ಮಾಡಿಕೊಂಡಿದ್ದಾರೆ. ತಮ್ಮ ನೆಟ್‌ವರ್ಕ್‌ನ ಗ್ರಾಹಕರ ಮೊಬೈಲ್‌ಗೆ ಬೆಟ್ಟಿಂಗ್ ಆ್ಯಪ್ ಡೌನ್‌ಲೋಡ್ ಮಾಡಿಕೊಡುತ್ತಾರೆ. ಫೋನ್ ಪೇ, ಗೂಗಲ್ ಪೇ, ಪೇಟಿಎಂ, ತರ ಆ್ಯಪ್‌ಗಳ ಮೂಲಕ ಆನ್‌ಲೈನ್ ಮೂಲಕವೇ ಹಣ ವರ್ಗಾಯಿಸಿಕೊಳ್ಳುತ್ತಾರೆ.
ಲಾಡ್ಜ್‌ನಲ್ಲಿ ರೂಮ್
ದಂಧೆಕೋರರು ರಾಜಾರೋಷವಾಗಿ ಕೆಲವೆಡೆ ಲಾಡ್ಜ್‌ಗಳಲ್ಲಿ ರೂಮ್ ಬುಕ್ಕಿಂಗ್ ಮಾಡಿಕೊಂಡು ದಂಧೆ ನಡೆಸುತ್ತಿದ್ದಾರೆ. ಬೆಟ್ಟಿಂಗ್ ಏಜೆಂಟ್‌ಗಳು, ಬುಕ್ಕಿಗಳು ಅಲ್ಲಿಂದ ಮೊಬೈಲ್, ವಾಟ್ಸ್ ಆ್ಯಪ್ ಕಾಲ್, ಇನ್ನಿತರ ವಾಹಿನಿಯ ಮೂಲಕ ಸರಾಗವಾಗಿ ಗ್ರಾಹಕರನ್ನು ತಲುಪುತ್ತಾರೆ. ವಿಕೆಟ್, ಬಾಲ್, ಓವರ್, ತಂಡದ ಗೆಲುವು- ಸೋಲಿನ ಮೇಲೆ ವಿವಿಧ ರೀತಿಯಲ್ಲಿ ಬಾಜಿ ಕಟ್ಟುತ್ತಾರೆ.
ನಾಲ್ಕು ವರ್ಷಗಳಲ್ಲಿ 22 ಕೇಸ್
ಜಿಲ್ಲೆಯಲ್ಲಿ ನಾಲ್ಕು ವರ್ಷಗಳಲ್ಲಿ ಜಿಲ್ಲೆಯ ವಿವಿಧ ಪೊಲೀಸ್ ಠಾಣೆಗಳಲ್ಲಿ ಕೇವಲ 22 ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳು ದಾಖಲಾಗಿದ್ದು, ಈ ಕೇಸ್‌ಗಳಲ್ಲಿ 27 ಜನರನ್ನು ಬಂಧಿಸಲಾಗಿದೆ. ಬಂಧಿತರಿಂದ ಒಟ್ಟಾರೆ 1.04 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ.
ಪೊಲೀಸರೂ ಶಾಮೀಲು ?
ಬೆಟ್ಟಿಂಗ್ ದಂಧೆ ಕಡಿವಾಣಕ್ಕೆ ಪೊಲೀಸ್ ಇಲಾಖೆ ಶ್ರಮಿಸುತ್ತಿದ್ದರೂ ಬುಡಸಮೇತ ಕಿತ್ತೆಸೆಯಲು ಸಾಧ್ಯವಾಗುತ್ತಿಲ್ಲ. ನಿರಂತರವಾಗಿ ಹೊಸ ಹೊಸ ಬುಕ್ಕಿಗಳು ಹುಟ್ಟಿಕೊಳ್ಳುತ್ತಿದ್ದಾರೆ. ಕೆಲ ಪೊಲೀಸ್ ಅಧಿಕಾರಿ, ಸಿಬ್ಬಂದಿಯೂ ಇವರೊಂದಿಗೆ ಕೈಜೋಡಿಸಿದ್ದೇ ದಂಧೆ ಅವ್ಯಾಹತವಾಗಲು ಕಾರಣ ಎಂಬುದು ಗುಟ್ಟಾಗಿ ಉಳಿದಿಲ್ಲ. ಈ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ದಂಧೆಕೋರರು ಹಾಗೂ ಅವರೊಂದಿಗೆ ಸಂಪರ್ಕ ಹೊಂದಿರುವ ಪೊಲೀಸರಿಗೆ ಬಿಸಿ ಮುಟ್ಟಿಸಬೇಕು ಎಂಬುದು ಪ್ರಜ್ಞಾವಂತ ನಗರಿಕರ ಆಗ್ರಹವಾಗಿದೆ.

ಕೋಟ್:
ಕ್ರಿಕೆಟ್ ಬೆಟ್ಟಿಂಗ್‌ನಲ್ಲಿ ತೊಡಗಿಕೊಂಡವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುತ್ತಿದೆ. ಬೆಟ್ಟಿಂಗ್ ತಡೆಗಟ್ಟಲು ಪೊಲೀಸ್ ಇಲಾಖೆ ಸನ್ನದ್ಧವಾಗಿದೆ. ಈ ಬಾರಿ ಐಪಿಎಲ್ ಆರಂಭವಾದಾಗಿನಿಂದ ಈವರೆಗೆ ಎರಡು ಕೇಸ್ ದಾಖಲಾಗಿದೆ.
- ಅಂಶುಕುಮಾರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ದಾಖಲಾದ ಪ್ರಕರಣಗಳ ಅಂಕಿ-ಅಂಶ
ವರ್ಷ ವರದಿಯಾದ ಕೇಸ್ ಬಂಧಿತರ ಸಂಖ್ಯೆ ಜಪ್ತಿ ಮಾಡಿದ ಹಣ
2021 07 08 9,810
2022 03 01 3,850
2023 04 04 50,970
2024 (ಮೇ 13ರವರೆಗೆ) 08 14 39,760