ಹಾವೇರಿ: ಹುಬ್ಬಳ್ಳಿಯಿಂದ ಬೆಂಗಳೂರು ಕಡೆಗೆ ಅಕ್ರಮವಾಗಿ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಲಾರಿ ಹಾಗೂ ಅದರಲ್ಲಿದ್ದ 238 ಕ್ವಿಂಟಲ್ ಅಕ್ಕಿಯನ್ನು ಜಿಲ್ಲಾ ಪೊಲೀಸರು ಶುಕ್ರವಾರ ಬಂಕಾಪುರ ಟೋಲ್ ನಾಕಾ ಬಳಿ ವಶಪಡಿಸಿಕೊಂಡಿದ್ದಾರೆ.
ಯಾವುದೇ ಅನುಮತಿ ಇಲ್ಲದೇ ಕೆಎ 07, ಎ 0829 ಸಂಖ್ಯೆಯ ಅಶೋಕ ಲೇಲ್ಯಾಂಡ್ ಲಾರಿಯಲ್ಲಿ 478 ಚೀಲಗಳಲ್ಲಿ 8,11,580 ರೂ. ಮೌಲ್ಯದ 238 ಕ್ವಿಂಟಲ್ ಅಕ್ಕಿ ತುಂಬಿಕೊಂಡು ಹುಬ್ಬಳ್ಳಿಯಿಂದ ಬೆಂಗಳೂರು ಕಡೆಗೆ ಹೊರಟಿದ್ದರು. ಖಚಿತ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ, ಅಕ್ಕಿ, ಲಾರಿ ವಶಪಡಿಸಿಕೊಂಡು, ಚಾಲಕನನ್ನು ಬಂಧಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಂಶುಕುಮಾರ ಮಾರ್ಗದರ್ಶನದಲ್ಲಿ ಡಿಸಿಆರ್‌ಬಿ ಪಿಎಸ್‌ಐ ಕೃಷ್ಣಪ್ಪ ತೋಪಿನ, ಸಿಬ್ಬಂದಿ ಜೆ.ಬಿ.ಕಾಳೆ, ಪ್ರಕಾಶ ದೇವಗಿರಿ, ಭೀರಪ್ಪ ಲಮಾಣಿ ಹಾಗೂ ಶಿಗ್ಗಾಂವಿ ಆಹಾರ ನಿರೀಕ್ಷಕರಿದ್ದ ತಂಡ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿತ್ತು. ತಂಡದ ಕಾರ್ಯಕ್ಕೆ ಎಸ್‌ಪಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಬಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.