ಜಿಲ್ಲೆ

ಮಾನವ ಹಕ್ಕುಗಳ ಆಯೋಗದ ತಂಡ ಭೇಟಿ ತಪಾಸಣೆ; ಬಸ್ ನಿಲ್ದಾಣ ಅವ್ಯವಸ್ಥೆಗೆ ಗರಂ; ಜೈಲು, ಹಾಸ್ಟೆಲ್, ಮದ್ಯವರ್ಜನ ಕೇಂದ್ರದಲ್ಲಿ ತಪಾಸಣೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಅನೈರ್ಮಲ್ಯ, ಶೌಚಗೃಹದಲ್ಲಿ ನಾಮಫಲಕ ಅಳವಡಿಸದಿರುವುದು, ಕುಡಿಯುವ ನೀರಿನ ವ್ಯವಸ್ಥೆ ಇಲ್ಲದಿರುವುದು ಕಂಡು ಮಾನವ ಹಕ್ಕುಗಳ ಆಯೋಗದ ತಂಡ ಗರಂ ಆಗಿದ್ದರು. ಕೂಡಲೇ ಕ್ರಮ ಜರುಗಿಸುವಂತೆ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ ಸೂಚಿಸಿದರು. ಮಾನವ ಹಕ್ಕುಗಳ ಆಯೋಗದ ಹಂಗಾಮಿ ಅಧ್ಯಕ್ಷ ಡಾ.ಶ್ಯಾಮ ಭಟ್ ಮತ್ತು ಸದಸ್ಯರ ತಂಡ ಗುರುವಾರ ಹಾವೇರಿ ನಗರಕ್ಕೆ ಭೇಟಿ ನೀಡಿ ಬಸ್ ನಿಲ್ದಾಣ, ಹಾಸ್ಟೆಲ್, ಕಾರಾಗೃಹ, ಮಹಿಳಾ ಸಾಂತ್ವನ ಕೇಂದ್ರ, ಮತ್ತಿತರ ಸ್ಥಳಗಳಿಗೆ ಭೇಟಿ ನೀಡಿ ತಪಾಸಣೆ ನಡೆಸಿದರು.
ಮೊದಲಿಗೆ ಬಸ್ ನಿಲ್ದಾಣದಲ್ಲಿ ಪರಿಶೀಲನೆ ನಡೆಸಿದ ಅವರು ಪ್ರಯಾಣಿಕರಿಂದ ಸಮಸ್ಯೆಗಳ ಮಾಹಿತಿ ಪಡೆದರು. ಮಳಿಗೆಗಳಿಗೆ ತೆರಳಿ ವಸ್ತುಗಳ ಎಕ್ಸ್‌ಪೈರು ಡೇಟ್ ಪರಿಶೀಲಿಸಿದರು. ಹೆಚ್ಚುವರಿ ಹಣ ಪಡೆಯದಂತೆ ಎಚ್ಚರಿಸಿದರು. ಸಾರ್ವಜನಿಕ ಶೌಚಗೃಹದ ದರಪಟ್ಟಿ ಅಳವಡಿಕೆಗೆ ಸೂಚಿಸಿದರು. ಹೆಚ್ಚುವರಿ ಹಣ ಪಡೆಯದಂತೆ ತಾಕೀತು ಮಾಡಿದರು.
ಶ್ರೀಕಂಠಪ್ಪ ಬಡಾವಣೆಯ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್ಗೆ ಭೇಟಿ ನೀಡಿ ಚಪಾತಿ, ಉಪ್ಪಿನಕಾಯಿ ತಪಾಸಣೆ ಮಾಡಿದರು. ಏಪ್ರಾನ್ ಧರಿಸಿದ್ದ ಅಡುಗೆ ಸಿಬ್ಬಂದಿಯನ್ನು ಮಾತನಾಡಿಸಿ, ಡ್ರೆಸ್ ಹೊಸದು ಇದ್ದಂತಿದೆ. ನಿತ್ಯವೂ ಹಾಕುತ್ತೀರಾ ಅಥವಾ ಯಾರಾದರೂ ವಿಸಿಟ್ ಇದ್ದಾಗ ಮಾತ್ರ ಹಾಕ್ತೀರಾ ? ಎಂದು ಪ್ರಶ್ನಿಸಿದರು. ಎರಡು ಜತೆ ಇದೆ. ನಿತ್ಯವೂ ಹಾಕುತ್ತಾರೆ ಎಂದು ವಾರ್ಡನ್ ಮುದಿಗೌಡ್ರ ಉತ್ತರಿಸಿದರು. ಅಡುಗೆ ಕೋಣೆಗೆ ಜಿರಳೆ, ಹಲ್ಲಿ ಬರದಂತೆ ಸ್ವಚ್ಛತೆಗೆ ಒತ್ತು ನೀಡಿ ಎಂದು ಅಧ್ಯಕ್ಷರು ಸೂಚಿಸಿದರು. ಮೆಡಿಕಲ್ ಚೆಕ್‌ಅಪ್, ಸಿಸಿಟಿವಿ, ವಾಚ್‌ಮನ್, ಕಂಪ್ಯೂಟರ್ ಲ್ಯಾಬ, ಗ್ರಂಥಾಲಯ ಪರಿಶೀಲಿಸಿದರು.
ಕೆರಿಮತ್ತಿಹಳ್ಳಿಯ ಅನ್ನಪೂರ್ಣ ಮದ್ಯ ವ್ಯಸನ ಮುಕ್ತಿ ಕೇಂದ್ರಕ್ಕೆ ಭೇಟಿ ನೀಡಿ, ಶಿಬಿರಾರ್ಥಿಗಳೊಂದಿಗೆ ಚರ್ಚಿಸಿದರು. ಕೇಂದ್ರಕ್ಕೆ ಬಂದ ಮೇಲೆ ಕುಡಿತ ಬಿಟ್ಟಿದ್ದೀರಾ ? ಹೊರಗೆ ಹೋದ ಬಳಿಕ ಮತ್ತೆ ಮಾಡ್ತೀರಾ ಎಂದು ಕೇಳಿದರು. ಕೌನ್ಸೆಲಿಂಗ್, ಊಟ, ವಸತಿ ಬಗ್ಗೆ ತಿಳಿದುಕೊಂಡರು. ಸೋರಿಗೆ ತಡೆಗಟ್ಟಿ ಎಂದು ಸೂಚಿಸಿದರು.
ಆಯೋಗದ ಸದಸ್ಯ ಎಸ್.ಕೆ.ವಂಟಗೋಡಿ, ಅಪರ ಜಿಲ್ಲಾಧಿಕಾರಿ ವೀರಮಲ್ಲಪ್ಪ ಪೂಜಾರ, ಎಸಿ ಎಚ್.ಬಿ.ಚನ್ನಪ್ಪ, ಡಿಎಚ್‌ಒ ಡಾ.ರಾಜೇಶ ಸುರಗಿಹಳ್ಳಿ, ತಹಸೀಲ್ದಾರ-2 ಅಮೃತಗೌಡ ಪಾಟೀಲ, ಅರ್ಜುನ ಪೂಜಾರ, ಮತ್ತಿತರು ಇದ್ದರು.