ಹಾವೇರಿ: ಭಾರತ ಆಧ್ಯಾತ್ಮದ ನೆಲೆವೀಡು. ಇಲ್ಲಿನ ಪ್ರತಿಯೊಂದು ಆಚರಣೆಗೆ ವೈಜ್ಞಾನಿಕ ಹಿನ್ನೆಲೆ ಇದೆ. ಶ್ರವಾಣ ಮಾಸದಲ್ಲಿ ಇಳೆ, ಗಾಳಿ, ಮಳೆ, ನದಿ, ಪರ್ವತಗಳು ಕಂಗೊಳಿಸುತ್ತಿರುತ್ತವೆ. ಸೃಷ್ಟಿ ಸಮೃದ್ಧವಾಗಿರುತ್ತದೆ ಎಂದು ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಹೇಳಿದರು. ನಗರದ ಹುಕ್ಕೇರಿಮಠದ ಶಿವಾನುಭವ ಮಂಟಪದಲ್ಲಿ ಶ್ರಾವಣ ಮಾಸದ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಶ್ರಾವಣ ಸಂಜೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಮನುಷ್ಯನ ಬದುಕಿನಲ್ಲಿ ತಾಮಸ ಗುಣಗಳು ಹೋಗಿ ಆಧ್ಯಾತ್ಮಿಕ ಸಂಪತ್ತು ಬರಲಿ ಎಂಬ ಭಾವನೆಯಿಂದ ಶ್ರಾವಣ ಮಾಸವನ್ನು ಆಚರಿಸುತ್ತಾರೆ. ಶ್ರವಣ, ಮನನ, ಧ್ಯಾನ ನಮ್ಮನ್ನು ಮುಕ್ತಿ ಮಾರ್ಗಕ್ಕೆ ಕೊಂಡೊಯ್ಯುತ್ತದೆ ಎಂದರು.
ಹೆಚ್ಚುವರಿ ಪೋಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ಶಿರಕೋಳ ಮಾತನಾಡಿ, ತಂತ್ರಜ್ಞಾನ ಬೆಳೆದಂತೆ, ಸಮಾಜದಲ್ಲಿ ಅಪರಾಧ ಪ್ರಕರಣಗಳ ಸ್ವರೂಪವೂ ಬದಲಾಗುತ್ತಿದೆ. ಕಣ್ಣಿಗೆ ಕಾಣದೇ ಅಪರಾಧಿಯು ತಂತ್ರಜ್ಞಾನ ಬಳಸಿ, ಅಮಾಯಕರನ್ನು ಮೋಸ ಮಾಡುವ ಪ್ರಕರಣಗಳು ಇತ್ತೀಚೆಗೆ ಹೆಚ್ಚಾಗುತ್ತಿವೆ. ಹಾಗಾಗಿ, ಜನಸಾಮಾನ್ಯರು ಮೊಬೈಲ್ ಬಳಸುವಾಗ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದರು.
ಮಹಿಳಾ ಪೋಲೀಸ್ ಠಾಣೆಯ ವೃತ್ತ ನಿರೀಕ್ಷಕಿ ಪಲ್ಲವಿ ಜಿ. ಮಾತನಾಡಿ, ಮಹಿಳೆಯು ಪುರುಷನಂತೆ ಎಲ್ಲ ಕ್ಷೇತ್ರಗಳಲ್ಲಿಯೂ ಮುಂದುವರೆದಿದ್ದಾಳೆ. ಆದಾಗ್ಯೂ ಅವಳ ಮೇಲೆ ದೌರ್ಜನ್ಯಗಳು ಹೆಚ್ಚಾಗುತ್ತವೆ. ಇಂಥ ಸಮಯದಲ್ಲಿ ಎದೆಗುಂದದೆ ಮಹಿಳಾ ಪೊಲೀಸ್ ಠಾಣೆಯ ಉಪಯೋಗವನ್ನು ಪಡೆಯಬೇಕೆಂದು ಹೇಳಿದರು.
ಹುಕ್ಕೇರಿಮಠದ ಶ್ರೀ ಸದಾಶಿವ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ನಗರ ಪೊಲೀಸ್ ವೃತ್ತ ನಿರೀಕ್ಷಕ ಮೋತಿಲಾಲ ಪವಾರ ಮತ್ತು ಗ್ರಾಮೀಣ ಪಿಎಸ್‌ಐ ಸಂತೋಷ ಪವಾರ ಮಾತನಾಡಿದರು. ರಾಚೋಟೇಶ್ವರ ಪ.ಪೂ ಕಾಲೇಜ್ ಉಪನ್ಯಾಸಕ ಗುಡ್ಡಪ್ಪ ಚಟ್ರಮ್ಮನವರ ಮಾತನಾಡಿದರು.
ಸಮಾರಂಭದಲ್ಲಿ ವಿರೂಪಾಕ್ಷ ದೇವರು, ಎಸ್.ಎಸ್.ಮುಷ್ಠಿ, ಆರ್.ಎಸ್.ಮಾಗನೂರ, ವೀರಣ್ಣ ಅಂಗಡಿ, ಶಿವಯೋಗಿ ವಾಲಿಶೆಟ್ಟರ, ಸುಭಾಷ ಹುರಳಿಕುಪ್ಪಿ, ವಿಜಯಕುಮಾರ ಕೂಡ್ಲಪ್ಪನವರ, ರಾಜಣ್ಣ ಮಾಗನೂರ, ಮಹೇಶ ಚಿನ್ನಿಕಟ್ಟಿ, ನಾಗಪ್ಪ ಮುರನಾಳ, ಶಿವಣ್ಣ ಶಿರೂರ, ಎಸ್.ವಿ.ಹಿರೇಮಠ, ಅಶೋಕ ಹೇರೂರ, ರಾಚಣ್ಣ ಲಂಬಿ, ಲತಾ ಭರತನೂರಮಠ, ಚಂಪಾ ಹುಣಸಿಕಟ್ಟಿ, ಲಲಿತಕ್ಕ ಹೊರಡಿ, ವನಿತಾ ಮಾಗನೂರ, ರೇಣುಕಾ ಮಡಿವಾಳರ, ಚನ್ನಪ್ಪ ಹಳಕೊಪ್ಪ, ಮಲ್ಲಿಕಾರ್ಜುನ ಬೆಳ್ಳಟ್ಟಿ, ಎಂ.ಎಸ್.ಹಿರೇಮಠ, ಮತ್ತಿತರರು ಉಪಸ್ಥಿತರಿದ್ದರು.
ಆರಂಭದಲ್ಲಿ ಅಕ್ಕನ ಬಳಗದವರು ಪ್ರಾರ್ಥಿಸಿದರು. ಬಿ.ಬಸವರಾಜ ಸ್ವಾಗತಿಸಿದರು. ಎಸ್.ಎನ್.ಮಳೆಪ್ಪನವರ ನಿರೂಪಿಸಿದರು. ಶಿವಬಸವ ಮರಳಿಹಳ್ಳಿ ವಂದಿಸಿದರು.