ಹಾವೇರಿ: ಸಾಮಾನ್ಯರನ್ನೂ ಅಸಾಮಾನ್ಯರಾಗಿಸುವ ವಾತಾವರಣವನ್ನು ಹುಕ್ಕೇರಿ ಮಠ ಹೊಂದಿದೆ. ಜನ ಸಾಮಾನ್ಯರಲ್ಲಿ ಅಧ್ಯಾತ್ಮದ ಬೀಜ ಬಿತ್ತುವ ಮೂಲಕ ಶ್ರೀಮಠ ಅಧ್ಯಾತ್ಮಿಕ ಚಿಂತನೆಯ ಹೆಬ್ಬಾಗಿಲು ಎಂದೆನಿಸಿಕೊಂಡಿದೆ ಎಂದು ಗೊಟಗೋಡಿಯ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ. ಭಾಸ್ಕರ ಹೇಳಿದರು.
ನಗರದ ಹುಕ್ಕೇರಿ ಮಠದ ಶಿವಾನುಭವ ಮಂಟಪದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲಿಂ.ಶಿವಲಿಂಗ ಸ್ವಾಮೀಜಿಯವರ 106ನೇ ಜಯಂತ್ಯುತ್ಸವ ಹಾಗೂ ಶ್ರೀ ಶಿವಲಿಂಗೇಶ್ವರ ಪದವಿಪೂರ್ವ ಮಹಿಳಾ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನದಲ್ಲಿ ಅವರು ಮಾತನಾಡಿದರು. ಶಿಕ್ಷಣ, ಅರಿವು, ಸಂಸ್ಕಾರ, ಸಾಮರಸ್ಯ ಹಾಗೂ ಸಾಂಸ್ಕೃತಿಕ ಲೋಕಕ್ಕೆ ಅವಕಾಶಗಳನ್ನು ನೀಡಿ, ಸಮಾಜದ ಕಟ್ಟಕಡೆಯ ವ್ಯಕ್ತಿಯೂ ಗುರುತಿಸುವಂಥ ಕೆಲಸವನ್ನು ಲಿಂ.ಶಿವಲಿಂಗ ಸ್ವಾಮೀಜಿ ಮಾಡಿದರು ಎಂದರು.
ಶಾಸಕ ನೆಹರು ಓಲೇಕಾರ ಮಾತನಾಡಿ, ಕನ್ನಡನಾಡಿನಲ್ಲಿ ಮಠಮಾನ್ಯಗಳು ಸದಾ ಸಮಾಜಮುಖಿಯಾಗಿ ಕಾರ್ಯ ಮಾಡುತ್ತಿವೆ. ಹಾವೇರಿಯಲ್ಲಿ ನಡೆದ 86 ನೇ ಕನ್ನಡ ಸಾಹಿತ್ಯ ಸಮ್ಮೇಳನ ನ ಭೋತಿ ನ ಭವಿಷ್ಯತೆ ಎಂಬಂತೆ ನಡೆಯಲು ಪ್ರಮುಖ ಕಾರಣ ಸಾರ್ವಜನಿಕರ, ಸಂಘ ಸಂಸ್ಥೆಗಳ ಸಹಕಾರ ಹಾಗೂ ಜಿಲ್ಲೆಯ ಎಲ್ಲ ಮಠಮಾನ್ಯಗಳ ಕೊಡುಗೆಯೂ ಶ್ಲಾಘನೀಯ. ಅದರಲ್ಲೂ ಶ್ರೀ ಹುಕ್ಕೇರಿಮಠದ ಮಠದ ಸಹಾಯ ಸಹಕಾರ ಸದಾ ಸ್ಮರಣೀಯವಾಗಿದೆ ಎಂದು ಹೇಳಿದರು.
ಸಾನಿಧ್ಯ ವಹಿಸಿದ್ದ ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮಿಜಿ ಮಾತನಾಡಿ, ಲಿಂ.ಶಿವಲಿಂಗ ಸ್ವಾಮೀಜಿ ಸದಾ ಸಮಾಜಮುಖಿ ಕಾರ್ಯ ಮಾಡುತ್ತಿದ್ದರು. ಸಮಾಜಮುಖಿ ಕಾರ್ಯವನ್ನು ಸದಾ ಶ್ಲಾಘಿಸುತ್ತಿದ್ದರು. ಸತ್ಯ ಶುದ್ಧ ಕಾಯಕದ ಮೂಲಕ ಭಕ್ತರನ್ನು ಪೋಷಿಸಿದ ಲಿಂ. ಶಿವಲಿಂಗ ಶ್ರೀಗಳು ನಡೆದಾಡುವ ದೇವರೆಂದು ಹೆಸರವಾಸಿಯಾಗಿದ್ದರು. ತಮಗೆ ಬಂದ ಕಾಣಿಕೆ ಬಂಗಾರವನ್ನು ತಮಗಾಗಿ ಇಟ್ಟುಕೊಳ್ಳದೇ ಸಮಾಜಕ್ಕೆ ನೀಡಿದ ಮಹಾನ್ ಸಂತ ಶ್ರೇಷ್ಟರು ಎಂದು ಹೇಳಿದರು.
ಸಮಾರಂಭದಲ್ಲಿ ಹಿಂದಿನ ಉಪವಿಭಾಗಧಿಕಾರಿ ಶಿವಾನಂದ ಉಳ್ಳಾಗಡ್ಡಿ, ಜಾನಪದ ವಿ.ವಿ. ಉಪನ್ಯಾಸಕ ಡಾ.ಒ.ಸಿ.ಗುರುಪ್ರಸಾದ, ಎಸ್.ಎಸ್.ಮುಷ್ಠಿ, ಎಸ್.ಎಂ. ಹಾಲಯ್ಯನವರಮಠ, ವೀರಣ್ಣ ಅಂಗಡಿ, ಪ್ರಾಚಾರ್ಯ ಎಸ್.ಬಿ.ಅಣ್ಣಿಗೇರಿ, ಜಿ.ಎಸ್.ಚಟ್ರಮ್ಮನವರ, ನಿರ್ಮಿತಿ ಕೇಂದ್ರದ ತಿಮ್ಮೇಶಕುಮಾರ, ಅಮೃತ್ಮಮ್ಮ ಶೀಲವಂತರ, ಮಲ್ಲಿಕಾರ್ಜುನ ಹಂದ್ರಾಳ, ಮಹಾಂತಪ್ಪ ಹಲಗಣ್ಣನವರ, ಚಂಪಾ ಹುಣಸಿಕಟ್ಟಿ, ಜಗದೀಶ ಕನವಳ್ಳಿ, ಪಂಚಾಕ್ಷರಯ್ಯ ಅಂದಾನಿಮಠ, ಸಿ.ಜಿ.ತೋಟಣ್ಣನವರ, ತಮ್ಮಣ್ಣ ಮುದ್ದಿ, ನಿರಂಜನ ತಾಂಡೂರ, ಜಗದೀಶ ತುಪ್ಪದ, ಶಿವಲಿಂಗೇಶ ಗುಂಜಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಪಿ.ಡಿ.ಶಿರೂರ ಸ್ವಾಗತಿಸಿದರು. ಕೆ.ಆರ್. ನಾಶೀಪುರ ವಂದಿಸಿದರು. ಎಸ್.ಎನ್.ಮಳೆಪ್ಪನವರ ಮತ್ತು ಶಿವಬಸವ ಮರಳಿಹಳ್ಳಿ ನಿರೂಪಿಸಿದರು.
ಯಶಸ್ಸಿನ ರೂವಾರಿಗಳಿಗೆ ಸನ್ಮಾನ
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ಸಿಗೆ ಶ್ರಮಿಸಿದ ಡಿಸಿ ರಘುನಂದನ ಮೂರ್ತಿ, ಹಿಂದಿನ ಜಿಪಂ ಸಿಇಒ ಮಹಮ್ಮದ ರೋಷನ್, ಕಸಾಪ ಜಿಲ್ಲಾಧ್ಯಕ್ಷ ಲಿಂಗಯ್ಯ ಹಿರೇಮಠ, ತಾಲೂಕಾಧ್ಯಕ್ಷ ವೈ.ಬಿ.ಆಲದಕಟ್ಟಿ, ತಿಮ್ಮೇಶಕುಮಾರ, ಗಿರೀಶ ಸ್ವಾದಿ, ಸಂಜೀವಕುಮಾರ ನೀರಲಗಿ, ಉದ್ಯಮಿ ಕೆ. ಮಂಜಪ್ಪ ಅವರನ್ನು ಶ್ರೀಮಠದಿಂದ ಸನ್ಮಾನಿಸಲಾಯಿತು.