ಜಿಲ್ಲೆ

ಹುಕ್ಕೇರಿ ಮಠದ ಶಿವಬಸವೇಶ್ವರ ಪ್ರೌಢಶಾಲೆಯ 1992ನೇ ಬ್ಯಾಚ್‌ನಿಂದ ಗುರುವಂದನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಶಿಕ್ಷಕ ವೃತ್ತಿ ಅತ್ಯಂತ ಪವಿತ್ರವಾದ ವೃತ್ತಿ. ಸಮಾಜದ ಎಲ್ಲ ವ್ಯಕ್ತಿಗಳಲ್ಲಿ ಉತ್ತಮ ಗುಣಗಳನ್ನು ತುಂಬಿ ಅವರನ್ನು ನಾಗರಿಕನ್ನಾಗಿಸುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ಆದ್ದರಿಂದಲೇ ಶಿಕ್ಷಕರನ್ನು ಸಮಾಜದ ರಕ್ಷಕರು ಎಂದು ಕರೆಯುತ್ತಾರೆ. ಅಂತಹ ಶಿಕ್ಷಕರನ್ನು ಗೌರವಿಸುವದು ಎಂದರೆ ಅದು ಸಮಾಜವನ್ನು ಗೌರವಿಸಿದಂತೆ ಎಂದು ಹುಕ್ಕೇರಿ ಮಠದ ಶ್ರೀ ಸದಾಶಿವ ಸ್ವಾಮೀಜಿ ಹೇಳಿದರು.
ನಗರದ ಹುಕ್ಕೇರಿ ಮಠದ ದಾಸೋಹ ಮಂದಿರದಲ್ಲಿ 1992ನೇ ಸಾಲಿನ ಹುಕ್ಕೇರಿಮಠ ಶಿವಬಸವೇಶ್ವರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾಮಾಜಿಕ ಜಾಲತಾಣಗಳ ಅಬ್ಬರದಲ್ಲಿ ಇಂದು ಮಾನವ ಸಂಬಂಧ ಕೇವಲ ವ್ಯಾವಹಾರಿಕವಾಗಿದೆ. ಮನೆಯಲ್ಲಿನ ಹಿರಿಯರನ್ನೇ ಗೌರಿವಿಸದ ಇಂದಿನ ದಿನಮಾನದಲ್ಲಿ 30 ವರ್ಷಗಳ ಹಿಂದೆ ಅಕ್ಷರ ಕಲಿಸಿದ ಗುರುಗಳನ್ನು ನೆನಪಿಸಿ ಗೌರವಿಸುವುದು ಇಂದಿನ ಜನಾಂಗಕ್ಕೆ ಮಾದರಿಯಾಗಿದೆ ಎಂದು ಹೇಳಿದರು.
ನಿವೃತ್ತ ಶಿಕ್ಷಕ ಸಿ.ಎಸ್ ಮರಳಿಹಳ್ಳಿ ಮಾತನಾಡಿ, ವೃತ್ತಿಯಲ್ಲಿದ್ದಾಗ ಸಾವಿರಾರು ಮಕ್ಕಳ ಭವಿಷ್ಯ ರೂಪಿಸಿ, ನಿವೃತ್ತಿ ನಂತರ ಎಲೆ ಮರೆಯ ಕಾಯಿಯಂತೆ ಇರುವ ಶಿಕ್ಷಕರನ್ನು ಕರೆದು ಗೌರವಿಸಿದಾಗ ಮತ್ತೆ ಅವರಲ್ಲಿ ಬದುಕಿನ ಬಗ್ಗೆ ಭರವಸೆ ಮೂಡುತ್ತದೆ ಎಂದರು.
ನಿವೃತ್ತ ಶಿಕ್ಷಕರಾದ ಎಸ್.ಎನ್. ದೊಡ್ಡಗೌಡರ, ಆರ್.ಎಸ್.ಪಾಟೀಲ, ವಿದ್ಯಾರ್ಥಿಗಳೊಂದಿಗೆ ಹಳೆಯ ನೆನಪುಗಳನ್ನು ಮೆಲಕು ಹಾಕಿದರು. ಹಿರಿಯ ವಿದ್ಯಾರ್ಥಿಗಳ ಪರವಾಗಿ ಡಾ.ಅಂಜನಾದೇವಿ ತಾಮ್ರಗುಂಡಿ, ಮಧುಮತಿ ಮರಚರಡ್ಡಿ, ಆಶಾ ಉಪ್ಪಾರ, ಡಾ.ಸಂತೋಷ ಆನಿಶೆಟ್ಟರ, ನಾಗರಾಜ ಚೆಕ್ಕಿ, ಮುಸ್ತಫಾ ಮುಲ್ಲಾ ಅನಿಸಿಕೆ ಹಂಚಿಕೊಂಡರು.
ಶಾಲೆಯ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುವ ಸಲುವಾಗಿ ಹಳೆಯ ವಿದ್ಯಾರ್ಥಿಗಳು ಶ್ರೀಮಠಕ್ಕೆ ಒಂದು ಲಕ್ಷ ರೂ. ದೇಣಿಗೆ ನೀಡಿದರು.
ಸಮಾರಂಭದಲ್ಲಿ ವಿ.ವಿ ಬನ್ನಿಮಟ್ಟಿ, ಪಿ.ಆರ್ ಭಗವಂತಗೌಡರ, ಎ.ಎಚ್ ಕೋಳಿವಾಡ, ಕೆ. ಶರಣಪ್ಪ, ಆರ್.ಸಿ ಚಿಕ್ಕಮಠ, ಕೆ.ಬಿ ಬಿಕ್ಷಾವರ್ತಿಮಠ, ಸರೋಜಾ ಸುಂಕಾಪುರ, ಎಚ್.ಆರ್ ಹೊಸಮನಿ, ಐ.ಎಂ ಕಮ್ಮಾರ, ಶಿವಲಿಂಗಯ್ಯ ಮಠಪತಿ, ಡಾ.ಪ್ರದೀಪ ದೊಡ್ಡಗೌಡ್ರ, ಸತೀಶ ಹತ್ತಿಮತ್ತೂರ, ರಪಿ ಇರಾಣಿ, ಮಾಬಳೇಶ ಗೋವಿ, ನಾಗರಾಜ ಹೊರಡಿ, ಇಂದುಮತಿ ಬಾಳೆ, ಮಂಜುಳಾ ತಾರಿಕೊಪ್ಪ, ಸರೋಜಾ ಶಿಲವಂತರ, ಶಿವಬಸಪ್ಪ ಹಾಲಣ್ಣನವರ, ರಾಜೇಶ ಬಾರ್ಕಿ, ಕರಬಸಪ್ಪ ಭದ್ರಶೆಟ್ಟಿ, ಮತ್ತಿತರರು ಉಪಸ್ಥಿತರಿದ್ದರು.
ಚಂದ್ರಶೇಖರ ಹೊನ್ನಪ್ಪನವರ ಸ್ವಾಗತಿಸಿದರು. ಡಾ.ಲಿಂಗರಾಜ ಹಂಚಿನಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಾಗರಾಜ ನಡುವಿನಮಠ ಹಾಗೂ ಶಶಿಕಲಾ ಕಮ್ಮಾರ ನಿರೂಪಿಸಿದರು. ಪ್ರಮೀಳಾ ಬೂದಿಹಾಳ ವಂದಿಸಿದರು.