ಹಾವೇರಿ: ತಾಲೂಕಿನ ಹೊಸರಿತ್ತಿ ಗ್ರಾಮದ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರು ಶಾಲಾ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ, ದಾಖಲಾತಿ ಕೇಳಿದ್ದಕ್ಕೆ ಎಸ್‌ಡಿಎಂಸಿ ಅಧ್ಯಕ್ಷ ಸ್ಥಾನದಿಂದ ತಮ್ಮನ್ನು ತೆಗೆದು ಬೇರೆಯವರನ್ನು ನೇಮಿಸಿದ್ದಾರೆ ಎಂದು ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ರಜಾಕ್ ಭಾಷಾ ದೊಡ್ಡಮನಿ ಆರೋಪಿಸಿದ್ದಾರೆ. ಈ ಮೂಲಕ ಶಾಲಾ ಎಸ್‌ಡಿಎಂಸಿ ಹಾಗೂ ಮುಖ್ಯೋಪಾಧ್ಯಾಯರ ನಡುವಿನ ಜಗಳ ಬೀದಿಗೆ ಬಂದಿದೆ.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಜಾಕ್ ಭಾಷಾ, ಶಾಲೆಯ ಸಮಯ ಸಾರಿಣಿ, ಯಾವ ಸಿಬ್ಬಂದಿ ಯಾವ ವಿಷಯದ ಪಾಠ ಮಾಡುತ್ತಾರೆ ಎಂಬ ಕುರಿತು ಕೇಳಿದ ಮಾಹಿತಿಯನ್ನು ಮುಖ್ಯೋಪಾಧ್ಯಾಯರು ಕೊಡುತ್ತಿಲ್ಲ. ಬಿಸಿಯೂಟದ ಅಡುಗೆ ಸರಿಯಾಗಿ ಮಾಡುವುದಿಲ್ಲ. ಸಾಂಬಾರಿನಲ್ಲಿ ತರಕಾರಿ ಕಡಿಮೆ ಇರುತ್ತದೆ ಎಂದರೆ ಯಾವ ಬಗ್ಗೆಯೂ ಮುಖ್ಯೋಪಾಧ್ಯಾಯರು ಸಹಕರಿಸುತ್ತಿಲ್ಲ ಎಂದರು.
ಈ ಮೊದಲು 230 ಇದ್ದ ಹಾಜರಾತಿ ಈಗ 70 ಆಗಿದೆ. ದಾಖಲಾತಿ ಆಂದೋಲನ ಮಾಡಲು ಸಹಕರಿಸಲಿಲ್ಲ. ಶಿಕ್ಷಕರನ್ನೂ ಕಳುಹಿಸಲಿಲ್ಲ. ಅಭಿವೃದ್ಧಿ ಕುರಿತು ಪ್ರಶ್ನಿಸುವ ತಮ್ಮ ವಿರುದ್ಧ ಅವಿಶ್ವಾಸ ಮಾಡಿ, ಬೇರೆಯವರನ್ನು ಆಯ್ಕೆ ಮಾಡಿದ್ದಾರೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಕಬುಲ್ ಸಾಬ ಕಮಗಾರ, ಅಬ್ದುಲ್ ಖಾದರ್ ಪಟವೇಗಾರ, ಖಾದರಸಾಬ ಉಸ್ಮಾನಖಾನ್, ಭಾಷಾಸಾಬ ಉಸ್ಮಾನಖಾನ್, ಇಸ್ಮಾಯಿಲ್ ಸಾಬ ಕಿರವತ್ತಿ, ಇತರರಿದ್ದರು.
ಆರೋಪ ಸುಳ್ಳು, ಮುಖ್ಯೋಪಾಧ್ಯಾಯ
ಈ ಆರೋಪದ ಕುರಿತು ಪ್ರತಿಕ್ರಿಯಿಸಿರುವ ಶಾಲೆಯ ಮುಖ್ಯೋಪಾಧ್ಯಾಯ ಮಹಮ್ಮದ್ ಉಮರ್ ಟಾಸ್ಕ್‌ನವರ, ಅಧ್ಯಕ್ಷರ ಆರೋಪ ಸುಳ್ಳು. ಎಸ್‌ಡಿಎಂಸಿ ಸಭೆ ಕರೆಯಲು ಹಿಂದೇಟು ಹಾಕುತ್ತಿದ್ದರು. ಜತೆಗೆ, ಶಾಲೆ ಅಭಿವೃದ್ಧಿಗೆ ಸಹಕರಿಸುತ್ತಿರಲಿಲ್ಲ. ಇದೇ ವಿಚಾರವಾಗಿ ಸದಸ್ಯರು ಕೋಪಗೊಂಡಿದ್ದರು. 18 ಸದಸ್ಯರ ಪೈಕಿ 15 ಸದಸ್ಯರು ಒಗ್ಗಟ್ಟಾಗಿ ಸಭೆಯಲ್ಲಿ ಅವಿಶ್ವಾಸ ಗೊತ್ತುವಳಿ ಮಂಡಿಸಿ ಅಧ್ಯಕ್ಷರನ್ನು ಬದಲಾಯಿಸಿದ್ದಾರೆ. ಹೊಸ ಅಧ್ಯಕ್ಷರಾಗಿ ಅಬ್ಬಾಸಅಲಿ ಮಲ್ಲಾಡದ ಅವರು ಆಯ್ಕೆ ಆಗಿದ್ದಾರೆ ಎಂದರು.
ಎಸ್‌ಡಿಎಂಸಿ ಸದಸ್ಯರು ನಿಯಮದ ಪ್ರಕಾರ ಅಧ್ಯಕ್ಷರನ್ನು ಬದಲಾವಣೆ ಮಾಡಿದ್ದಾರೆ. ಈ ಕುರಿತು ಮತ್ತೊಮ್ಮೆ ಪರಿಶೀಲಿಸಿ, ಸಮಸ್ಯೆ ಬಗೆಹರಿಸುತ್ತೇನೆ ಎಂದು ಬಿಇಒ ಎಂ.ಎಚ್.ಪಾಟೀಲ ‘ವಿಜಯವಾಣಿ’ಗೆ ತಿಳಿಸಿದ್ದಾರೆ.