ಜಿಲ್ಲೆ

ಮೊಬೈಲ್ ಬ್ಯಾಟರಿ ಸ್ಪೋಟಗೊಂಡು ಇಬ್ಬರಿಗೆ ಗಾಯ; ಹೊಸರಿತ್ತಿ ಗ್ರಾಮದಲ್ಲಿ ಅವಘಡ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಹಾಳಾಗಿದ್ದ ಮೊಬೈಲ್‌ನ ಬ್ಯಾಟರಿ ಬದಲಾಯಿಸಿಕೊಳ್ಳುವ ವೇಳೆ ಬ್ಯಾಟರಿ ಸ್ಪೋಟಗೊಂಡ ಪರಿಣಾಮ ಇಬ್ಬರು ಯುವಕರ ಕೈಗಳಿಗೆ ಗಾಯವಾದ ಘಟನೆ ತಾಲೂಕಿನ ಹೊಸರಿತ್ತಿ ಗ್ರಾಮದಲ್ಲಿ ಸಂಭವಿಸಿದೆ.
ಗ್ರಾಮದ ಗಾಯತ್ರಿ ಎಂಬ ಹೆಸರಿನ ಮಳಿಗೆ ಇಬ್ಬರು ಯುವಕರು ಬಂದಿದ್ದರು. ಮೊಬೈಲ್‌ವೊಂದರ ಬ್ಯಾಟರಿ ಹಾಳಾಗಿತ್ತು. ಅದನ್ನು ಬದಲಾಯಿಸಿಕೊಂಡಿದ್ದರು. ನಂತರ ಹಳೆಯ ಬ್ಯಾಟರಿಯನ್ನು ಒತ್ತಾಯಪೂರ್ವಕವಾಗಿ ಅಂಗಡಿಯವರಿಂದ ಪಡೆದಿದ್ದರು. ಹಳೆಯ ಬ್ಯಾಟರಿಯ ಕವಚವನ್ನು ಓರ್ವ ಬಾಯಿಯಿಂದ ಕಿತ್ತು ತೆರೆದು ಅದರಲ್ಲಿದ್ದ ರಸಾಯನಿಕ ಪರೀಕ್ಷಿಸಲು ಮುಂದಾಗಿದ್ದಾಗ ಏಕಾಏಕಿ ಬ್ಯಾಟರಿ ಸ್ಪೋಟಗೊಂಡು ಇಬ್ಬರ ಕೈಗಳಿಗೂ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಅಂಗಡಿಯವರು, ಅಕ್ಕಪಕ್ಕದ ಅಂಗಡಿಯವರು ಆಗಮಿಸಿ ಬೆಂಕಿ ನಂದಿಸಿದ್ದಾರೆ. ಸ್ಪೋಟಗೊಂಡ ಬಳಿಕ ಯುವಕರು ಭಯಭೀತರಾಗಿ ದಿಕ್ಕಾಪಾಲಾಗಿ ಓಡಿ ಹೋಗಿದ್ದಾರೆ. ಗಾಯಾಳುಗಳ ಹೆಸರು ಹಾಗೂ ಸ್ಪೋಟಕ್ಕೆ ಕಾರಣವೇನು ಎಂಬುದು ಗೊತ್ತಾಗಿಲ್ಲ. ಈ ಕುರಿತು ಯಾವುದೇ ದೂರು ದಾಖಲಾಗಿಲ್ಲ.