ವಿಜಯವಾಣಿ ಸುದ್ದಿಜಾಲ ಹಾವೇರಿ (ಹೊಸರಿತ್ತಿ): ಗುದ್ಲೆಪ್ಪ ಹಳ್ಳಿಕೇರಿ ಅವರಂಥ ಶ್ರೇಷ್ಠ ವ್ಯಕ್ತಿಯನ್ನು ನಮ್ಮ ರಾಜ್ಯದಲ್ಲಿ ಪಡೆದಿರುವದು ನಮ್ಮ ಭಾಗ್ಯ. ಅವರು ಮಾಡಿರುವ ಕೆಲಸ- ಕಾರ್ಯ ಮತ್ತು ಅವರ ಹೆಸರು ಚಿರಸ್ಥಾಯಿಯಾಗಿದ್ದು, ಅವರ ಜೀವನದ ಯಶೋಗಾಥೆ ಮತ್ತು ಹೋರಾಟದ ಕುರಿತು ಇಂದಿನ ಮಕ್ಕಳಿಗೆ ತಿಳಿಸುವ ಕೆಲಸ ಆಗಬೇಕು ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಕರೆ ನೀಡಿದರು. ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನದ ವತಿಯಿಂದ ತಾಲೂಕಿನ ಹೊಸರಿತ್ತಿಯ ಗಾಂಧಿ ಗ್ರಾಮೀಣ ಗುರುಕುಲದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ಸಂಗ್ರಾಮದ ಮುಂಚೂಣಿ ನಾಯಕ, ಏಕೀಕರಣ ನೇತಾರ ಗುದ್ಲೆಪ್ಪ ಹಳ್ಳಿಕೇರಿ ಅವರ 119ನೇ ಜಯಂತ್ಯುತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗುದ್ಲೆಪ್ಪ ಅವರಂಥ ಮಹಾನ್ ವ್ಯಕ್ತಿಗಳ ಮಾರ್ಗದರ್ಶನದಲ್ಲಿ ನಡೆದರೆ ಈ ದೇಶ ಉತ್ತಮ ರೀತಿಯಲ್ಲಿ ಮುನ್ನಡೆಯುತ್ತದೆ. ಇಲ್ಲದಿದ್ದರೆ ಕಷ್ಟದ ಹಾದಿಯಲ್ಲಿ ಮುನ್ನಡೆಯಬೇಕಾಗುತ್ತದೆ ಎಂದು ಹೇಳಿದರು.
ಗುದ್ಲೆಪ್ಪನವರು ಸಭಾಪತಿ ಆಗಿದ್ದ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ತಮ್ಮ ಸ್ಥಾನವನ್ನು ನಿರ್ವಹಿಸಿದ್ದರು. ಹಲವಾರು ಹೋರಾಟಗಳನ್ನು ಮತ್ತು ಚಳವಳಿಯನ್ನು ನಡೆಸಿ ಜೈಲುವಾಸ ಅನುಭವಿಸಿ ಮಹಾನ್ ವ್ಯಕ್ತಿಗಳಾಗಿ ಲಕ್ಷಾಂತರ ಮಕ್ಕಳಿಗೆ ಆಸರೆಯಾಗುವಂಥ ಗುರುಕುಲ ನಿರ್ಮಾಣ ಮಾಡಿದರು ಎಂದು ಸ್ಮರಿಸಿದರು. ಗುರುಕುಲದ ಅಭಿವೃದ್ಧಿಗಾಗಿ ಪ್ರಾಮಾಣಿಕ ಪ್ರಯತ್ನ ಮಾಡಿ ಸಮಸ್ಯೆಗಳನ್ನು ಬಗೆ ಹರಿಸಲಾಗುವುದು ಎಂದು ಭರವಸೆ ನೀಡಿದರು.
ಸಾಹಿತಿ ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಜಾತಿಬೇದ ಎನ್ನದೇ ಹಲವಾರು ಜನರ ಸಮಸ್ಯೆಗಳನ್ನು ನಿಸ್ವಾರ್ಥದಿಂದ ಬಗೆಹರಿಸಲು ನಿರಂತರವಾಗಿ ಶ್ರಮ ಪಡುತ್ತಿದ್ದ ಏಕೈಕ ವ್ಯಕ್ತಿ ಗುದ್ಲೆಪ್ಪನವರು. ಈಗಿನ ಕಾಲದಲ್ಲಿ ಜಾತಿ, ಹಣ, ಲಂಚಕ್ಕೆ ಕೈಚಾಚಿ ಸಮಸ್ಯೆಗಳನ್ನು ಬಗೆಹರಿಸುವವರ ಸಂಖ್ಯೆ ಜಾಸ್ತಿಯಾಗಿದೆ ಎಂದು ಅವರು ಹೇಳಿದರು.
ದೇಶದ ಜನರ ಮೇಲೆ ಅಪಾರ ಪ್ರೀತಿ ಹೊಂದಿದ ಗುದ್ಲೆಪ್ಪನವರು ತಮ್ಮನ್ನು ಬೇಟಿ ಮಾಡಿ ತಮ್ಮ ಸಮಸ್ಯೆಗಳನ್ನು ಬಗೆಹರಿಸಿದ ಸಂದರ್ಭಗಳನ್ನು ಮೇಲುಕು ಹಾಕಿದರು. ಬಡವರ ಬಗ್ಗೆ ಅತೀವ ಕಾಳಜಿ ಹೊಂದಿದವರು ಹಣ ಆಸ್ತಿ ಆಂತಸ್ತಿಗೆ ಮರಳಾಗದ ಗುದ್ಲೆಪ್ಪನವರು ಶಿಕ್ಷಣದ ಬಗ್ಗೆ ಹೆಚ್ಚು ಒತ್ತು ನೀಡಿ ಇಂತಹ ಶಿಕ್ಷಣ ಸಂಸ್ಥೆಯನ್ನು ಬೇಳೆಸಿದರು ಎಂದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದ ಕುಲಪತಿ ಡಾ.ಪಿ.ಎಲ್.ಪಾಟೀಲ ಮಾತನಾಡಿ, ಗುರುಕುಲದಲ್ಲಿ ಶಿಕ್ಷಣ ಪಡೆದವರು ಪುಣ್ಯವಂತರು. ಮಕ್ಕಳಿಗೆ ಪಾಲಕರು ಉತ್ತಮ ಶಿಕ್ಷಣ ನೀಡಿ ವಿಜ್ಞಾನ ವಿಭಾಗದಲ್ಲಿ ಜೀವಶಾಸ್ತ್ರ ವಿಷಯವನ್ನು ಮಕ್ಕಳು ಆಯ್ದುಕೊಳ್ಳಬೇಕು. ರೈತರ ಮಕ್ಕಳಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆಯಲು ಶೇ.50 ರಿಯಾಯ್ತಿ ಇದ್ದು, ಇದರ ಸದುಪಯೋಗ ಪಡೆಯಬೇಕು ಎಂದು ಹೇಳಿದರು.
ಗುದ್ಲೆಪ್ಪ ಹಳ್ಳಿಕೇರಿ ಅವರ 350ಕ್ಕೂ ಹೆಚ್ಚಿನ ಛಾಯಾಚಿತ್ರಗಳಿರುವ ಫೋಟೋ ಗ್ಯಾಲರಿ ಉದ್ಘಾಟಿಸಲಾಯಿತು. ಗುದ್ಲೆಪ್ಪನವರ ಸಮಾದಿಗೆ ಪುಷ್ಪಾರ್ಪಣೆ ಮಾಡಲಾಯಿತು.
ಗುದ್ಲೆಪ್ಪ ಹಳ್ಳಿಕೇರಿ ಪ್ರತಿಷ್ಠಾನದ ಧಮದರ್ಶಿ ವೀರಣ್ಣ ಚಕ್ಕಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಸಂಸದ ಪ್ರೊ.ಐ.ಜಿ.ಸನದಿ, ಡಾ.ಲಿಂಗರಾಜ ಅಂಗಡಿ ಮಾತನಾಡಿದರು. ಡಾ.ವೀರಣ್ಣ ರಾಜೂರ ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಡಾ.ಗುದ್ಲೇಶ ಹಳ್ಳಿಕೇರಿ, ಗಿರೀಶ ಅಂಕಲಕೋಟಿ, ರಮೇಶ ಏಕಬೋಟೆ, ಆರ್.ಎಸ್.ಪಾಟೀಲ, ಶಶಿ ಸಾಲಿ, ಮತ್ತಿತರರು ಉಪಸ್ಥಿತರಿದ್ದರು.
ಸಿದ್ದಲಿಂಗ ಪಟ್ಟಣಶೆಟ್ಟಿಗೆ ಸೇವಾ ಗೌರವ ಪ್ರಶಸ್ತಿ
ಪ್ರಸಕ್ತ ವರ್ಷದ ಗುದ್ಲೆಪ್ಪ ಹಳ್ಳಿಕೇರಿ ಸೇವಾ ಗೌರವ ಪ್ರಶಸ್ತಿಯನ್ನು ಸಾಹಿತಿ, ಕಥೆಗಾರ ಸಿದ್ದಲಿಂಗ ಪಟ್ಟಣಶೆಟ್ಟಿ ಅವರಿಗೆ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಫಲಕದೊಂದಿಗೆ 25 ಸಾವಿರ ರೂ. ನಗದು ನೀಡಿ ಸನ್ಮಾನಿಸಲಾಯಿತು. ನಂತರ ಗುರುಕುಲದ ಅಭಿವೃದ್ಧಿಗಾಗಿ ಪಟ್ಟಣಶೆಟ್ಟಿ ಅವರು ಒಂದು ಲಕ್ಷ ರೂ. ಚೆಕ್ ಹಸ್ತಾಂತರಿಸಿದರು.
ಹಣ, ಮದ್ಯದ ಮೇಲೆ ಚುನಾವಣೆಗೆ ಹೊರಟ್ಟಿ ಬೇಸರ
ಚುನಾವಣೆ ಸಂದರ್ಭದಲ್ಲಿ ಹಣ, ಮದ್ಯ ಕೊಟ್ಟು ಮತ ಪಡೆಯುವಂಥ ಸ್ಥಿತಿ ನಿರ್ಮಾಣವಾಗಿದೆ. ಸಮಾಜವನ್ನು ತಿದ್ದುವಂಥ ಮಕ್ಕಳಿಗೆ ಪಾಠ ಮಾಡುವಂತ ಶಿಕ್ಷಕರು ಮತ್ತು ಬುದ್ದಿಜೀವಿಗಳೇ ಹಣ, ಮದ್ಯಕ್ಕೆ ಆಸೆಪಟ್ಟು ಮತ ನೀಡಿದರೆ ಇನ್ನು ಜನಸಾಮಾನ್ಯರ ಗತಿ ಏನು ಎಂದು ಬಸವರಾಜ ಹೊರಟ್ಟಿ ಪ್ರಶ್ನಿಸಿದರು. ಹಣ ಕೊಡುವವರು, ಪಡೆಯುವವರು ಸುಧಾರಣೆ ಆಗುವವರೆಗೂ ದೇಶ ಉದ್ದಾರ ಆಗಲು ಸಾಧ್ಯವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.