ಜಿಲ್ಲೆ

ಗುದ್ಲೆಪ್ಪ ಹಳ್ಳಿಕೇರಿ ಆಕರ್ಷಕ ಫೋಟೋ ಗ್ಯಾಲರಿ; ಕರ್ನಾಟಕದ ಉಕ್ಕಿನ ಮನುಷ್ಯನ ಸಾಧನೆಯ ಪ್ರತಿಬಿಂಬ; 350ಕ್ಕೂ ಅಧಿಕ ವಿಶೇಷ ಛಾಯಾಚಿತ್ರಗಳ ಪ್ರದರ್ಶಿನಿ

ಹಾವೇರಿ: ತಾಲೂಕಿನ ಹೊಸರಿತ್ತಿ ಗ್ರಾಮದ ಗಾಂಧೀ ಗ್ರಾಮೀಣ ಗುರುಕುಲ ವಸತಿ ಶಾಲೆಯಲ್ಲಿ ನಿರ್ಮಿಸಿರುವ ಕರ್ನಾಟಕದ ಉಕ್ಕಿನ ಮನುಷ್ಯ, ಅಪ್ಪಟ ಗಾಂಧೀವಾದಿ ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಅವರ ಜೀವನ ಚರಿತ್ರೆ ಬಿಂಬಿಸುವ ಫೋಟೋ ಗ್ಯಾಲರಿ ಅತ್ಯಾಕರ್ಷಕವಾಗಿದ್ದು, ಸ್ವಾತಂತ್ರೃ ಯೋಧ ಗುದ್ಲೆಪ್ಪ ಹಳ್ಳಿಕೇರಿ ಅವರ ವೈಶಿಷ್ಟೃತೆಯನ್ನು ಬಿಂಬಿಸುತ್ತಿದೆ.

ಮಹಾತ್ಮಾ ಗಾಂಧೀ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡಿದ್ದ ಗುದ್ಲೆಪ್ಪನವರು ರಾಜಕೀಯ ರಂಗದಲ್ಲಿ ಸ್ವಚ್ಛ ಆಡಳಿತ ನೀಡುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ. ಅಂದಿನ ಕಾಲಘಟ್ಟದಲ್ಲೇ ನಾನಾ ದೇಶಗಳಿಗೆ ಭೇಟಿ ನೀಡಿ, ಅನೇಕ ಮೈಲಿಗಲ್ಲುಗಳನ್ನು ಸ್ಥಾಪಿಸುವ ಮೂಲಕ ದೇಶಸೇವೆ ಮಾಡಿದ್ದಾರೆ.

ಇಂದಿನ ಪೀಳಿಗೆಗೆ ಗುದ್ಲೆಪ್ಪನವರ ಸಾಧನೆ, ಜೀವನ ಚರಿತ್ರೆಯನ್ನು ತಿಳಿಸುವ ಉದ್ದೇಶದಿಂದ ಗುರುಕುಲದಲ್ಲಿ ‘ದರ್ಶನ ಪ್ರದರ್ಶನ’ ಎಂಬ ಹೆಸರಿನ ಫೋಟೋ ಗ್ಯಾಲರಿ ಸ್ಥಾಪಿಸಲಾಗಿದೆ. ಇದರಲ್ಲಿ ಗುದ್ಲೆಪ್ಪನವರ ಸಾಹಸಗಾಥೆ ಬಿಂಬಿಸುವ ಹಲವು ಮಹತ್ವದ ಫೋಟೋಗಳನ್ನು ನೋಡಬಹುದು.

ಮಾಜಿ ಪ್ರಧಾನಿಗಳಾದ ಜವಾಹರಲಾಲ ನೆಹರು, ಇಂದಿರಾ ಗಾಂಧೀ, ಮಾಜಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ, ದೇವರಾಜ ಅರಸು, ಕೆಂಗಲ್ ಹನುಮಂತಯ್ಯ, ಎಸ್.ನಿಜಲಿಂಗಪ್ಪ, ಮತ್ತಿತರ ದೇಶ, ವಿದೇಶಗಳ ಮಹಾನ್ ವ್ಯಕ್ತಿಗಳೊಂದಿಗೆ ಗುದ್ಲೆಪ್ಪನವರು ಹೊಂದಿದ್ದ ಆತ್ಮೀಯ ಒಡನಾಟದ ಫೋಟೋಗಳು ಗ್ಯಾಲರಿಯಲ್ಲಿವೆ.

350ಕ್ಕೂ ಅಧಿಕ ಚಿತ್ರಗಳು

ಗುದ್ಲೆಪ್ಪ ಹಳ್ಳಿಕೇರಿಯವರ ನೆನಪನ್ನು ಚಿರಸ್ಮರಣೀಯವಾಗಿಸುವ ದೃಷ್ಟಿಯಿಂದ ‘ದರ್ಶನಪ್ರದರ್ಶನ’ ಎಂಬ ಫೋಟೊ ಗ್ಯಾಲರಿ ಮ್ಯೂಸಿಯಂ ಸ್ಥಾಪಿಸಲಾಗಿದೆ. ಅವರ ಜೀವನ ಮತ್ತು ಸಾಧನೆ ಬಿಂಬಿಸುವ 350ಕ್ಕೂ ಹೆಚ್ಚು ಛಾಯಾಚಿತ್ರಗಳು ಗ್ಯಾಲರಿಯಲ್ಲಿವೆ. 15 ಲಕ್ಷ ರೂ. ವೆಚ್ಚದಲ್ಲಿ ಸ್ಥಾಪಿಸಲಾಗಿದ್ದು, ಕಲಾವಿದ ಶಶಿ ಸಾಲಿ ಛಾಯಾಚಿತ್ರ ಜೋಡಿಸುವಲ್ಲಿ ಸಹಕರಿಸಿದರು.

ಕೋಟ್:

ಹೊಸರಿತ್ತಿಯ ಗಾಂಧೀ ಗ್ರಾಮೀಣ ಗುರುಕುಲದ ನಿರ್ಮಾತೃ, ಮಾಜಿ ಸ್ವಾತಂತ್ರೃ ಹೋರಾಟಗಾರ ಗುದ್ಲೆಪ್ಪ ಹಳ್ಳಿಕೇರಿ ಅವರ ಜೀವನ ಚರಿತ್ರೆ, ಸಾಹಸಗಾಥೆಯನ್ನು ಬಿಂಬಿಸುವ ಫೋಟೋ ಗ್ಯಾಲರಿ ಅದ್ಭುತವಾಗಿ ಮೂಡಿ ಬಂದಿದೆ. ಇಂದಿನ ಶಾಲಾ ಮಕ್ಕಳು, ಯುವಕ- ಯುವತಿಯರು ಫೋಟೋ ಗ್ಯಾಲರಿ ವೀಕ್ಷಿಸುವ ಮೂಲಕ ದೇಶಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು.

- ವೀರಣ್ಣ ಚೆಕ್ಕಿ, ಹಿರಿಯ ಧರ್ಮದರ್ಶಿ, ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸ್ಮಾರಕ ಪ್ರತಿಷ್ಠಾನ

120ನೇ ಜಯಂತ್ಯುತ್ಸವ, ಪ್ರಶಸ್ತಿ ಪ್ರದಾನ ಇಂದು

ಕರ್ನಾಟಕದ ಉಕ್ಕಿನ ಮನುಷ್ಯ ಗುದ್ಲೆಪ್ಪ ಹಳ್ಳಿಕೇರಿ ಅವರ 120ನೇ ಜಯಂತ್ಯುತ್ಸವ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ಜೂ.6ರಂದು ಬೆಳಗ್ಗೆ 11 ಗಂಟೆಗೆ ಹಾವೇರಿ ತಾಲೂಕು ಹೊಸರಿತ್ತಿಯ ಗಾಂಧೀ ಗ್ರಾಮೀಣ ಗುರುಕುಲದಲ್ಲಿ ನಡೆಯಲಿದೆ. ಶ್ರೀ ಗುದ್ಲೆಪ್ಪ ಹಳ್ಳಿಕೇರಿ ಸೇವಾ ಗೌರವ ಪ್ರಶಸ್ತಿಯನ್ನು ಹಿರಿಯ ಪತ್ರಕರ್ತ ಮೋಹನ ಹೆಗಡೆ ಅವರಿಗೆ ಪ್ರದಾನ ಮಾಡಲಾಗುವುದು. ಹಾವೇರಿ ವಿವಿ ಕುಲಪತಿ ಪ್ರೊ.ಸುರೇಶ ಜಂಗಮಶೆಟ್ಟಿ, ಕೆಎಲ್‌ಇ ಜಿಎಚ್ ಕಾಲೇಜ್ ಪ್ರಾಂಶುಪಾಲ ಪ್ರೊ.ಎಂ.ಎಂ ಹೊಳ್ಳಿಯವರ, ಕೆಎಲ್‌ಇ ಧ್ವನಿ ನಿರ್ದೇಶಕ ಗೋಪಾಲಕೃಷ್ಣ ಹೆಗಡೆ, ಧಾರವಾಡ ಕಸಾಪ ಜಿಲ್ಲಾಧ್ಯಕ್ಷ ಡಾ.ಲಿಂಗರಾಜ ಅಂಗಡಿ, ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.