ಹಾವೇರಿ: ಮೈಸೂರಿನ ಸಹಜ ಸಮೃದ್ಧ ಸಾವಯವ ಕೃಷಿಕರ ಬಳಗ ಹಾಗೂ ರಾಣೆಬೆನ್ನೂರಿನ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಸಹಯೋಗದಲ್ಲಿ ನಗರದ ಮಾಗಾವಿ ಚಿತ್ರಮಂದಿರದ ಹಿಂಭಾಗದ ಹೊಸಮಠದ ಶ್ರೀ ಬಸವೇಶ್ವರ ಸಮುದಾಯ ಭವನದಲ್ಲಿ ಹಮ್ಮಿಕೊಂಡಿರುವ ಎರಡು ದಿನಗಳ ‘ಸೊಪ್ಪು ಮೇಳ’ಕ್ಕೆ ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಶನಿವಾರ ಚಾಲನೆ ನೀಡಿದರು.
ಮೇಳದಲ್ಲಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆ್ಮಸಿದ್ದ ರೈತರು ದಂಟು, ನುಗ್ಗೆಕಾಯಿ ಸೊಪ್ಪು, ರಾಜಗೀರ, ಹರಿವೆ, ಹಕ್ಕರಕಿ ಸೊಪ್ಪು, ತಿರಕಸಾಲಿ, ಬಸಳೆ, ಸೇರಿ 120ಕ್ಕೂ ಅಧಿಕ ಬಗೆಯ ಸೊಪ್ಪುಗಳನ್ನು ಪ್ರದಶಿಸಿದರು. ಆಯಾ ಸೊಪ್ಪುಗಳ ವೈವಿದ್ಯತೆ, ಅದರಿಂದಾಗುವ ಪ್ರಯೋಜನಗಳ ಕುರಿತು ಮಾಹಿತಿ ನೀಡಿದರು. ನೂರಾರು ಸೊಪ್ಪಿನ ತಳಿಗಳನ್ನು ಕಂಡು ಹಾವೇರಿಯ ಜನ ಪುಳಕಿತರಾದರು.
ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಮಾತನಾಡಿ, ಹಾವೇರಿಯಲ್ಲಿ ಮೊದಲ ಬಾರಿಗೆ ಸೊಪ್ಪು ಮೇಳ ಆಯೋಜಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಹಸಿ ಸೊಪ್ಪುಗಳು ನಮ್ಮ ಆರೋಗ್ಯಕ್ಕೆ ಪೂರಕವಾಗಿವೆ. ಜಗತ್ತು ಎಷ್ಟೇ ಮುಂದುವರಿದರೂ ಆಹಾರದಲ್ಲಿ ಸೊಪ್ಪುಗಳ ಪಾತ್ರ ಅನನ್ಯವಾಗಿದೆ. ಸೊಪ್ಪುಗಳಿಂದಲೇ ಹಲವು ಮಾತ್ರೆಗಳನ್ನು ಮಾಡಲಾಗುತ್ತಿದೆ. ಇಂತಹ ನೈಸರ್ಗಿಕ ಮಾತ್ರೆಗಳಾದ ಸೊಪ್ಪುಗಳನ್ನು ಹೆಚ್ಚಾಗಿ ಬಳಸಿ ಎಂದು ಕರೆ ನೀಡಿದರು.
ಕೃಷಿ ಸಹಾಯಕ ನಿರ್ದೇಶಕ ಕೃಷ್ಣಮೂರ್ತಿ ಮಾತನಾಡಿ, ನಿತ್ಯದ ಆಹಾರದಲ್ಲಿ ಎಲ್ಲ ಪೋಷಕಾಂಶ ಸಿಗಲ್ಲ. ಸೊಪ್ಪುಗಳಿಂದ ಈ ಕೊರತೆ ನೀಗಿಸಬಹುದು. ಇಂದು ಮಣ್ಣಿನಲ್ಲಿ ಸತ್ವ ಇಲ್ಲವಾಗಿದೆ. ಅದನ್ನು ಪೋಷಣೆ ಮಾಡುವ ಕೆಲಸ ನಡೆದಿದೆ. ಮುಂದಿನ ಪೀಳಿಗೆಗೆ ಗುಣಮಟ್ಟದ ಭೂಮಿ ಉಳಿಸುವ ಕೆಲಸ ಆಗಬೇಕಿದೆ ಎಂದರು.
ಸಮಾರಂಭದಲ್ಲಿ ಜಿಪಂ ಸಿಪೊ ಎಚ್.ವೈ.ಮೀಸಿ ‘ಸಕತ್ ಸೊಪ್ಪು’ ಪುಸ್ತಕ ಲೋಕಾರ್ಪಣೆ ಮಾಡಿದರು. ರಾಣೆಬೆನ್ನೂರ ತಾಲೂಕು ಇಟಗಿಯಲ್ಲಿ 1.5 ಎಕರೆ ತೋಟದಲ್ಲಿ ವೈವಿಧ್ಯಮಯ ಸೊಪ್ಪು ಬೆಳೆದಿರುವ ಸಾವಯವ ಕೃಷಿಕ ರೇವಣೆಪ್ಪ ಪೂಜಾರ ಅವರನ್ನು ಸನ್ಮಾನಿಸಲಾಯಿತು.
ತೋಗಾರಿಕೆ ಇಲಾಖೆಯ ವಿಜಯಲಕ್ಷ್ಮೀ, ವನಸಿರಿ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಶಾಂತಕುಮಾರ, ದೇಶಿ ತಳಿಯ ಕೃಷಿಕ ಶ್ರೇಣಿಕರಾಜ, ನಾಗರಹೊಳೆ ಕಾಡಿನ ಜೇನು ಕುರುಬ ಸಮುದಾಯದ ಪಾರ್ವತಿ, ಇತರರಿದ್ದರು.
ಸೊಪ್ಪಿನಲ್ಲಿವೆ ಔಷಧೀಯ ಗುಣ
ಸೊಪ್ಪಿನಲ್ಲಿ ಒಮೆಗಾ 3 ಫ್ಯಾಟಿ ಆಸಿಡ್, ನಿಯಾಸಿನ್, ರೋಗನಿರೋಧಕ, ಫೈಬರ್, ಜ್ಞಾಪಕ ಶಕ್ತಿ ಹೆಚ್ಚಿಸುವ ಪೋಷಕಾಂಶಗಳು, ಕಬ್ಬಿಣದ ಅಂಶ ಸೇರಿ ವಿವಿಧ ಬಗೆಯ ಔಷಧೀಯ ಗುಣಗಳಿವೆ. ನಿರ್ಲಕ್ಷೃಕ್ಕೆ ಒಳಗಾಗುತ್ತಿರುವ ಸೊಪ್ಪನ್ನು ಮತ್ತೆ ಮುನ್ನೆಲೆಗೆ ತರುವುದು ನಮ್ಮ ಸಂಸ್ಥೆಯ ಉದ್ದೇಶ ಎಂದು ಆಯೋಜಕ ಆನಂದತೀರ್ಥ ಪ್ಯಾಟಿ ಹೇಳಿದರು.
ಇಂದು ಕೊನೆ
ಮೇಳ ಇಂದು ಕೊನೆಗೊಳ್ಳಲಿದ್ದು, ಬೆಳಗ್ಗೆ 10ರಿಂದ ರಾತ್ರಿ 8 ಗಂಟೆವರೆಗೆ ಇರಲಿದೆ. ಮೇಳದಲ್ಲಿ ಜವಾರಿ ತಳಿಯ ಸೊಪ್ಪು, ತರಕಾರಿಯ ಬೀಜಗಳು ಲಭ್ಯವಿದ್ದು, ಮನೆಯ ಮುಂದೆ, ತಾರಸಿ ಮೇಲೆ, ತೋಟದಲ್ಲಿ ಬೆಳೆಯಬಹುದಾಗಿದೆ.