ಜಿಲ್ಲೆ

ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆಯ ವಿಮೆ ಯೋಜನೆಯಡಿ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ವಿವಿಧ ತಾಲೂಕುಗಳ ವಿವಿಧ ಬೆಳೆಗಳಿಗೆ ಅಧಿಸೂಚನೆ ಹೊರಡಿಸಿ, ಮಂಜೂರಾತಿ ನೀಡಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಇಬ್ರಾಹಿಂ ದೊಡ್ಡಮನಿ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯ ಬ್ಯಾಡಗಿ, ಹಾನಗಲ್ಲ, ಹಿರೇಕೆರೂರ ಹಾಗೂ ಶಿಗ್ಗಾಂವಿ ತಾಲೂಕಗಳಿಗೆ ಅಡಕೆ, ಶುಂಠಿ, ಮಾವು ಮತ್ತು ಹಸಿಮೆಣಸಿನಕಾಯಿ ಬೆಳೆಗಳನ್ನು ಹಾಗೂ ಹಾವೇರಿ, ಸವಣೂರ ಮತ್ತು ರಾಣೇಬೆನ್ನೂರ ತಾಲೂಕುಗಳಿಗೆ ಹಸಿಮೆಣಸಿನಕಾಯಿ ಹಾಗೂ ಮಾವು ಬೆಳೆಗಳಿಗೆ ಅಧಿಸೂಚಿಸಲಾಗಿದೆ.
ಅಡಕೆ, ಹಸಿಮೆಣಸಿನಕಾಯಿ, ಶುಂಠಿ ಹಾಗೂ ಮಾವು ಬೆಳೆಗಳಿಗೆ ವಿಮಾ ಕಂತನ್ನು ಜುಲೈ 31ರ ಒಳಗಾಗಿ ತುಂಬಬೇಕು. ಬೆಳೆಸಾಲ ಪಡೆಯುವ ಮತ್ತು ಬೆಳೆಸಾಲ ಪಡೆಯದ ರೈತರಿಗೆ ವಿಮಾ ಮೊತ್ತವು ಬೆಳೆವಾರು ಹಣಕಾಸು ಪ್ರಮಾಣದ ಆಧಾರದ ಮೇಲೆ ನಿರ್ಧರಿಸಲಾಗಿದೆ. ಪ್ರಸ್ತುತ ಹಾಗೂ ಹಂಗಾಮಿನಲ್ಲಿ ವಿವಿಧ ವಿಮಾ ಘಟಗಳಲ್ಲಿ ಅಧಿಸೂಚಿಸಲಾದ ಬೆಳೆಗಳಿಗೆ ಇಚ್ಚೆಯುಳ್ಳ ಬೆಳೆ ಸಾಲ ಪಡೆಯದ ರೈತರು ಯೋಜನೆಯಡಿ ಭಾಗವಹಿಸಬಹುದು ಎಂದು ತಿಳಿಸಿದ್ದಾರೆ.
ಬೆಳೆಸಾಲ ಪಡೆಯದ ರೈತರು ಅರ್ಜಿಯೊಂದಿಗೆ ಭೂಮಿ ಹೊಂದಿರುವುದಕ್ಕೆ ಪಹಣಿ, ಖಾತೆ ಪುಸ್ತಕ, ಬ್ಯಾಂಕ್‌ಪಾಸ್ ಪುಸ್ತಕ ಹಾಗೂ ಕಂದಾಯ ರಶೀದಿಯನ್ನು ಮತ್ತು ಆಧಾರ್ ಸಂಖ್ಯೆ ನೀಡಬೇಕು. ಈ ಯೋಜನೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವವರು ಬ್ಯಾಂಕುಗಳ ಮೂಲಕ ಅಂದರೆ ವಾಣಿಜ್ಯ ಬ್ಯಾಂಕುಗಳು, ಪ್ರಾಂತೀಯ ಗ್ರಾಮೀಣ ಬ್ಯಾಂಕುಗಳು, ಸಾಮಾನ್ಯ ಸೇವಾ ಕೇಂದ್ರ ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಂಪರ್ಕಿಸಲು ಕೋರಲಾಗಿದೆ.
ಪ್ರಸಕ್ತ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆಯ ವಿಮೆ ಯೋಜನೆ, ಮುಂಗಾರು-2023 ಹಂಗಾಮಿನಲ್ಲಿ ಬೆಳೆವಿಮೆ ತುಂಬಿದ ರೈತರು ಕಾಲಕಾಲಕ್ಕೆ ಬೆಳೆ ಸಮೀಕ್ಷೆಯನ್ನು ಖುದ್ದಾಗಿ ತಾವೇ ಅಥವಾ ತಮ್ಮ ಗ್ರಾಮದ ಗ್ರಾಮ ಲೆಕ್ಕಾಧಿಕಾರಿ ಅಧೀನ ಪಿ ಆರ್ ಮುಖಾಂತರ ಕಡ್ಡಾಯವಾಗಿ ಮಾಡಿಸಬೇಕು. ಇಲ್ಲದಿದ್ದರೆ ಬೆಳೆ ವಿಮೆ ಕ್ಮೈಮ್ ಆಗುವುದಿಲ್ಲ. ಆದ್ದರಿಂದ ಬೆಳೆ ವಿಮೆ ತುಂಬಿದ ಎಲ್ಲ ರೈತರು ಬೆಳೆ ಸಮೀಕ್ಷೆಯನ್ನು ನಿಗದಿತ ಅವಧಿಯೊಳಗೆ ಕೈಗೊಳ್ಳಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆಯ ಹೋಬಳಿ ಮಟ್ಟದ ಸಹಾಯಕ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.