ಹಾವೇರಿ: ಪ್ರಸಕ್ತ 2023-24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆಯಡಿ ವಿವಿಧ ಬೆಳೆಗಳನ್ನು ಅಧಿಸೂಚಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಇಬ್ರಾಹಿಂ ದೊಡ್ಡಮನಿ ತಿಳಿಸಿದ್ದಾರೆ.
ಬ್ಯಾಡಗಿ ತಾಲೂಕಿನ ಬ್ಯಾಡಗಿ ಹಾಗೂ ಕಾಗಿನೆಲೆ ಹೋಬಹಳಿಗೆ ಎಲೆಕೋಸು, ಹಾವೇರಿ ತಾಲೂಕಿನ ಗುತ್ತಲ ಹೋಬಳಿಗೆ ಈರುಳ್ಳಿ (ನೀರಾವರಿ ಮತ್ತು ಮಳೆಯಾಶ್ರಿತ ಎಲೆಕೋಸು, ಟೊಮ್ಯಾಟೋ ಹಾಗೂ ಕರ್ಜಗಿ ಹೋಬಳಿಗೆ ಈರುಳ್ಳಿ (ನೀರಾವರಿ ಮತ್ತು ಮಳೆಯಾಶ್ರಿತ) ಹಿರೇಕೆರೂರ ತಾಲೂಕಿನ ಹಿರೇಕೆರೂರ ಹೋಬಳಿಗೆ ಎಲೆಕೋಸು ಮತ್ತು ಟೋಮ್ಯಾಟೊ, ಹಂಸಭಾವಿ ಹೋಬಳಿಗೆ ಹಾಗೂ ರಟ್ಟಿಹಳ್ಳಿ ತಾಲೂಕಿಗೆ ಟೋಮ್ಯಾಟೊ ಬೆಳೆಗಳನ್ನು ಅಧಿಸೂಚಿಸಲಾಗಿದೆ.
ರಾಣೆಬೆನ್ನೂರ ತಾಲೂಕಿನ ರಾಣೆಬೆನ್ನೂರ, ಮೆಡ್ಲೇರಿ ಹಾಗೂ ಕುಪ್ಪೇಲೂರ ಹೋಬಳಿಗೆ ಈರುಳ್ಳಿ (ನೀರಾವರಿ ಮತ್ತು ಮಳೆಯಾಶ್ರಿತ) ಹಾಗೂ ಟೊಮ್ಯಾಟೊ, ಶಿಗ್ಗಾಂವಿ ತಾಲೂಕಿಗೆ ಕೆಂಪು ಮೆಣಸಿನಕಾಯಿ(ಮಳೆಯಾಶ್ರಿತ), ಸವಣೂರ ತಾಲೂಕಿನ ಸವಣೂರ ಹೋಬಳಿಗೆ ಕೆಂಪು ಮೆಣಸಿನಕಾಯಿ(ಮಳೆಯಾಶ್ರಿತ), ಹತ್ತಿಮತ್ತೂರ ಹೋಬಳಿಗೆ ಈರುಳ್ಳಿ(ನೀರಾವರಿ) ಹಾಗೂ ಕೆಂಪು ಮೆಣಸಿನಕಾಯಿ (ನೀರಾವರಿ ಮತ್ತು ಮಳೆಯಾಶ್ರಿತ) ಅಧಿಸೂಚಿಸಲಾಗಿದೆ.
ರೈತರು ಎಲೆಕೋಸು, ಈರುಳ್ಳಿ ಬೆಳೆಗೆ ದಿನಾಂಕ 15-07-2023ರೊಳಗಾಗಿ ಹಾಗೂ ಟೊಮ್ಯಾಟೋ ಮತ್ತು ಕೆಂಪು ಮೆಣಸಿನಕಾಯಿ ಬೆಳೆಗೆ ದಿನಾಂಕ 31-07-2023ರೊಳಗಾಗಿ ವಿಮಾ ನೋಂದಣಿ ಮಾಡಿಸಬೇಕು.
ವಿಮಾ ಮೊತ್ತವು ಬೆಳೆಸಾಲ ಪಡೆಯುವ ಮತ್ತು ಬೆಳೆಸಾಲ ಪಡೆಯದ ರೈತರಿಗೆ ಒಂದೇ ಆಗಿರುತ್ತದೆ. ವಿಮೆ ಪಾವತಿಸಲು ಹತ್ತಿರದ ರಾಷ್ಟ್ರೀಕೃತ ಬ್ಯಾಂಕ್ ಶಾಖೆಗಳಲ್ಲಿ, ಸಹಕಾರಿ ಸಂಘಗಳನ್ನು ಮತ್ತು ಸಾಮಾನ್ಯ ಸೇವಾ ಕೇಂದ್ರಗಳನ್ನು ಸಂಪರ್ಕಿಸಬಹುದಾಗಿದೆ. ಭೂಮಿ ಹೊಂದಿರುವುದಕ್ಕೆ ಪಹಣಿ, ಖಾತೆ ಪುಸ್ತಕ, ಬ್ಯಾಂಕ್ ಪಾಸ್ ಪುಸ್ತಕ, ಕಂದಾಯ ರಶೀದಿ ಮತ್ತು ಆಧಾರ್ ಸಂಖ್ಯೆಯನ್ನು ಕಡ್ಡಾಯವಾಗಿ ನೀಡಬೇಕು ಎಂದು ತಿಳಿಸಿದ್ದಾರೆ.
ಮುಂದಿನ ಹೆಚ್ಚುವರಿ ಘಟಕದ ಇಳುವರಿಯನ್ನು ಪರಿಗಣಿಸುವಾಗ, ಗ್ರಾಮ ಪಂಚಾಯಿತಿ ವಿಮಾ ಘಟಕಗಳಿಗೆ ಹೋಬಳಿಗಳನ್ನು ಹಾಗೂ ಹೋಬಳಿ ವಿಮಾ ಘಟಕಗಳಿಗೆ ತಾಲೂಕುಗಳನ್ನು ಪರಿಗಣಿಸುವಾಗ 31-04-2023ಕ್ಕೆ ಸಂರಕ್ಷಣೆ ತಂತ್ರಾಂಶದ ಮ್ಯಾಪಿಂಗ್‌ನಲ್ಲಿರುವಂತೆ ಪರಿಗಣಿಸಬೇಕು.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಇಲಾಖೆ, ಕೃಷಿ ಇಲಾಖೆ, ಕಂದಾಯ ಇಲಾಖೆಯ ಸಿಬ್ಬಂದಿ ಹಾಗೂ ಹತ್ತಿರದ ಬ್ಯಾಂಕ್ ಶಾಖೆಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.