ಹಾವೇರಿ: ಯಾವುದೇ ಖಾಸಗಿ ವ್ಯಕ್ತಿಗಳು ಅಥವಾ ಸಂಸ್ಥೆಗಳು ಸಾರ್ವಜನಿಕ ಸ್ಥಳಗಳಲ್ಲಿ ಮೆರವಣಿಗೆ ಅಥವಾ ಕಾರ್ಯಕ್ರಮ ಮಾಡಬೇಕಾದರೆ ಸಕ್ಷಮ ಪ್ರಾಧಿಕಾರದಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು ಎಂದು ರಾಜ್ಯ ಸರ್ಕರ ಅಧಿಸೂಚನೆ ಹೊರಡಿಸಿದೆ. ಜತೆಗೆ ಹೋರಿ ಸ್ಪರ್ಧೆಗೆ ಸರ್ಕಾರದ 2022ರ ಎಸ್‌ಒಪಿ ಪ್ರಕಾರ ಅನುಮತಿ ಕಡ್ಡಾಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋಧಾ ವಂಟಗೋಡಿ ತಿಳಿಸಿದರು.
ನಗರದ ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿಯಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೀಪಾವಳಿ ಹಬ್ಬದ ದಿನ ಬುಧವಾರ ಹೋರಿ ಮೆರವಣಿಗೆ ಸಂದರ್ಭದಲ್ಲಿ ಹೋರಿ ಬೆದರಿ ಓಡಿದ ವೇಳೆ, ದಾಳಿ ನಡೆಸಿದ ಪರಿಣಾಮ ನಾಲ್ವರು ಮೃತಟ್ಟಿದ್ದಾರೆ. ಈ ಕುರಿತು ಹಾವೇರಿ ಶಹರ, ಹಾವೇರಿ ಗ್ರಾಮೀಣ ಠಾಣೆ, ಆಡೂರ ಹಾಗೂ ಹಾನಗಲ್ಲ ಪೊಲೀಸ್ ಠಾಣೆಗಳಲ್ಲಿ 4 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಹಬ್ಬದ ದಿನ ಹೋರಿ ಕ್ರೀಡೆ ಎಂದು ಆಯೋಜಿಸಿದ್ದಲ್ಲ. ಹಬ್ಬದ ಸಲುವಾಗಿ ಮೆರವಣಿಗೆ ಆಯೋಜಿಸಿದ್ದು ಎಂದು ಪ್ರಾಥಮಿಕವಾಗಿ ಗೊತ್ತಾಗಿದೆ. ಆದರೂ, ಆಯೋಜಕರು ಹಾಗೂ ಹೋರಿ ಮಾಲೀಕರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದರು.
2022ರಲ್ಲಿ ಹೋರಿ ಸ್ಪರ್ಧೆ, ಮೆರವಣಿಗೆ ಆಯೋಜನೆ ಕುರಿತು ಸರ್ಕಾರದಿಂದ ಎಸ್‌ಒಪಿ (ಸ್ಟಾೃಂಡರ್ಡ್ ಆಪರೇಟಿಂಗ್ ಪ್ರೊಸೀಜರ್) ಬಂದಿತ್ತು. ಆ ಪ್ರಕಾರ ಜಿಲ್ಲಾಧಿಕಾರಿ ಅವರ ಅನುಮತಿ ಪಡೆದು ಆಯೋಜಿಸಬೇಕು. ತೆರೆದ ಸ್ಥಳದಲ್ಲಿ ಮಾಡುವಂತಿಲ್ಲ ಎಂಬಿತ್ಯಾದಿ ನಿಯಮಗಳಿವೆ. ಎಲ್ಲ ನಿಬಂಧನೆಗೆ ಒಳಪಟ್ಟಿರಬೇಕು. ಹೋರಿ ಹಬ್ಬ ಸ್ಪರ್ಧೆ ಮಾಡುವ ಆಯೋಜಕರ ಪಟ್ಟಿ ಮಾಡುತ್ತಿದ್ದೇವೆ. ಅವರಿಗೆ ಈ ಎಸ್‌ಒಪಿ ಪ್ರಕಾರ ಆಯೋಜಿಸಲು ಸೂಚಿಸಲಾಗುತ್ತಿದೆ ಎಂದರು.
ಹಬ್ಬದಲ್ಲಿ ಹೋರಿ ಮೆರವಣಿಗೆ ಮಾಡಲು ನಿರ್ಬಂಧವಿಲ್ಲ. ಆಗ ಹಗ್ಗ ಕೈಯಲ್ಲಿ ಹಿಡಿದು ಮೆರವಣಿಗೆ ಮಾಡಿ, ದೇವಸ್ಥಾನಕ್ಕೆ ಹೋ ಬರಹುದು. ಆದರೆ, ಹೋರಿ ಬೆದರಿಸುವ ಸ್ಪರ್ಧೆಗಳಿಗೆ ಅನುಮತಿ ಕಡ್ಡಾಯ ಎಂದು ಎಸ್‌ಪಿ ವಿವರಿಸಿದರು.