ಹಾವೇರಿ: ರಂಗಪಂಚಮಿ ಹಬ್ಬದ ಹಿನ್ನೆಲೆಯಲ್ಲಿ ಮಾ.15ರಂದು ಹೋಳಿ ರಂಗಿನಾಟಕ್ಕೆ ಯಾಲಕ್ಕಿ ನಗರಿ ಸಜ್ಜಾಗಿದೆ. ಬಣ್ಣದಾಟಕ್ಕಾಗಿ ಮಾರುಕಟ್ಟೆಯಲ್ಲಿ ಖರೀದಿ ಜೋರಾಗಿದೆ.
ನಗರದ ಎಂಜಿ ರಸ್ತೆ, ಮೇಲಿನ ಪೇಟೆ, ರೈತರ ಓಣಿ ಸೇರಿದಂತೆ ಜಿಲ್ಲೆಯ ವಿವಿಧೆಡೆ ಕಾಮ-ರತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಹೋಳಿ ಹಬ್ಬದ ಹಿನ್ನೆಲೆಯಲ್ಲಿ ನಗರದ ಮಾರುಕಟ್ಟೆಗಳಲ್ಲಿ ಶುಕ್ರವಾರ ಜನದಟ್ಟಣೆ ಕಂಡು ಬಂತು. ಪಿಚಕಾರಿ, ಹಲಗೆ, ವಿವಿಧ ಬಗೆಯ ಬಣ್ಣದ ಸಾಮಗ್ರಿಗಳನ್ನು ಮಕ್ಕಳು, ಯುವಕ- ಯುವತಿಯರು ಖರೀದಿಸಿದರು.
ಹೋಳಿ ಹಬ್ಬದಂದು ಹೋಳಿಗೆ ಊಟ ಸವಿದು ಸ್ನೇಹಿತರು, ಸಂಬಂಧಿಕರಿಗೆ ಬಣ್ಣ ಹಚ್ಚಿ ಸಂಭ್ರಮಿಸಲು ಕಾತರರಾಗಿದ್ದಾರೆ. ಇದಕ್ಕಾಗಿ ಕೆಲವರು ವಿಶೇಷ ತಯಾರಿ ಮಾಡಿಕೊಂಡಿದ್ದಾರೆ. ತರಹೇವಾರಿ ಉಡುಗೆ, ತೊಡುಗೆ, ಮುಖವಾಡ, ವೇಷಗಳನ್ನು ಧರಿಸುವ ಮೂಲಕ ಗಮನ ಸೆಳೆಯಲು ಸಜ್ಜಾಗಿದ್ದಾರೆ. ಅಲ್ಲಲ್ಲಿ ಹಲಗೆ ಮೇಳಗಳು ಭಾರೀ ಸದ್ದು ಮಾಡುತ್ತಿವೆ. ಹೋಳಿ ಆಟವಾಡಿ ಕಾಮದಹನ ಮಾಡಿ ಹಬ್ಬಕ್ಕೆ ವಿದಾಯ ಹೇಳಲು ಯುವಪಡೆ ತುದಿಗಾಲಲ್ಲಿ ನಿಂತಿದೆ.