ಜಿಲ್ಲೆ

ಹಾವೇರಿಯಲ್ಲಿ ಮಹಾಕುಂಭಮೇಳ ವೈಭವ; 20ಕ್ಕೂ ಹೆಚ್ಚು ಕಲಾವಿದರಿಂದ ಪ್ರಯಾಗ್‌ರಾಜ್ ದೃಶ್ಯ ಮರುಸೃಷ್ಟಿ; ಕಂಗೊಳಿಸಿದ ನಾಗಾಸಾಧು, ಸಂತರು

ಹಾವೇರಿ: ಹೋಳಿ ಹಬ್ಬದ ವಿಶಿಷ್ಟ ಆಚರಣೆಗೆ ಪ್ರಸಿದ್ಧಿ ಪಡೆದಿರುವ ಮರಿಕಲ್ಯಾಣ ಖ್ಯಾತಿಯ ಹಾವೇರಿ ನಗರದಲ್ಲಿ ಹೋಳಿ ಮುನ್ನಾದಿನ ಶುಕ್ರವಾರ ಪ್ರಯಾಗರಾಜ್‌ನಲ್ಲಿ ನಡೆದ ಮಹಾಕುಂಭಮೇಳದ ವೈಭವದ ದೃಶ್ಯಗಳನ್ನು ಮರುಸೃಷ್ಟಿ ಮಾಡಲಾಗಿತ್ತು. ಹಾವೇರಿ ಹೋಳಿ ಉತ್ಸವ ಸಮಿತಿಯಿಂದ ಯಾಲಕ್ಕಿ ನಗರಿಯಲ್ಲಿ ಆಯೋಜಿಸಿದ್ದ ಮಹಾಕುಂಭಮೇಳ ವೈಭವ ಕಂಡು ಸಾರ್ವಜನಿಕರು ನಿಬ್ಬೆರಗಾದರು.

ಮಹಾಕುಂಭ ಮೇಳದಲ್ಲಿ ಗಮನ ಸೆಳೆದ ನಾಗಾ ಸಾಧುಗಳು, ಸಾಧು- ಸಂತರು, ಶಿವ- ಪಾರ್ವತಿ, ಮುಳ್ಳಿನ ಹಾಸಿಗೆ ಮೇಲೆ ಮಲಗಿದ ಸಾಧು, ಶಿವರೂಪಿ, ರಾಮಾಂಜನೇಯ, ಇತರ ದೇವತೆಗಳ ವೇಷಧಾರಿಗಳು, ಮೋನಾಲಿಸಾ, ಆನೆ, ಒಂಟೆ ಮೆರವಣಿಗೆಯಲ್ಲಿ ಗಮನ ಸೆಳೆದವು. 60ಕ್ಕೂ ಅಧಿ ಕಲಾವಿದರ ತಂಡ 20ಕ್ಕೂ ಅಧಿಕ ದೃಶ್ಯಗಳನ್ನು ಸೃಷ್ಟಿಸಿತ್ತು.

ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದ ಮೆರವಣಿಗೆಯನ್ನು ಜನ ಕಣ್ತುಂಬಿಕೊಂಡರು. ನಾಗಾ ಸಾಧುಗಳು, ದೃಶ್ಯ ಮಾದರಿಗಳ ಎದುರು ಜನರು ಸೆಲ್ಫೀ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಒಟ್ಟಾರೆ ಹೋಳಿ ಮುನ್ನಾದಿನವೇ ಹೋಳಿ ಹಬ್ಬದ ಸಂಭ್ರಮ, ಸಡಗರ ನಗರದಲ್ಲಿ ಕಂಡುಬಂತು.