ಜಿಲ್ಲೆ

ಖಬರಸ್ತಾನ ವ್ಯಾಪಾರಿಸ್ತಾನ ಆಗದಿರಲಿ; ವಾಣಿಜ್ಯ ಮಳಿಗೆ ನಿರ್ಮಾಣಕ್ಕೆ ಅವಕಾಶ ನೀಡಲ್ಲ; ಹಾವೇರಿ ಹಿತರಕ್ಷಣಾ ವೇದಿಕೆ

ಹಾವೇರಿ: ಮುಸ್ಲಿಂ ಸಮುದಾಯದ ಖಬರಸ್ಥಾನದಲ್ಲಿ ಅನಧಿಕೃತವಾಗಿ ವಾಣಿಜ್ಯ ಮಳಿಗೆ ಸಂಕೀರ್ಣ ನಿರ್ಮಿಸುತ್ತಿರುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಸ್ಮಶಾನದಲ್ಲಿ ಅಂತ್ಯಕ್ರಿಯೆ ಬಿಟ್ಟು ಬೇರಾವುದೇ ಚಟುವಟಿಕೆ ಮಾಡಬಾರದೆಂಬ ನಿಯಮವಿದೆ. ಇದನ್ನು ಮೀರಿ ವಾಣಿಜ್ಯ ಮಳಿಗೆ ನಿರ್ಮಿಸುವ ಮೂಲಕ ಖಬರಸ್ತಾನವನ್ನು ವ್ಯಾಪಾರಿಸ್ತಾನವನ್ನಾಗಿ ಮಾರ್ಪಡಿಸಲು ಬಿಡುವುದಿಲ್ಲ ಎಂದು ಹಾವೇರಿ ಹಿತರಕ್ಷಣಾ ವೇದಿಕೆ ಅಧ್ಯಕ್ಷ ವಿಜಯಕುಮಾರ ಚಿನ್ನಿಕಟ್ಟಿ ಎಚ್ಚರಿಕೆ ನೀಡಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.25ರ ನಂತರ ಕಟ್ಟಡ ನಿರ್ಮಿಸುವುದಾಗಿ ಅಂಜುಮನ್ ಇಸ್ಲಾಂ ಅಧ್ಯಕ್ಷರು ವಿಡಿಯೋ ಹೇಳಿಕೆ ನೀಡಿದ್ದಾರೆ. ಇದು ಸಮಾಜದ ಸೌಹಾರ್ದತೆ ಕದಡುವ ವಿಚಾರವಾಗಿದೆ. ಈ ಕುರಿತು ಮುಸ್ಲಿಂ ಸಮಾಜದ ಹಿರಿಯರು ಅವರಿಗೆ ಸೂಕ್ತ ತಿಳಿವಳಿಕೆ ನೀಡಲಿ ಎಂದು ಸಲಹೆ ನೀಡಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಶಂಭಣ್ಣ ಜತ್ತಿ ಮಾತನಾಡಿ, ವಕ್ಫ್ ಭೂಮಿಯಾಗಲೀ, ಯಾವುದೇ ಭೂಮಿಯಾಗಲಿ ಅಲ್ಲಿ ಕಟ್ಟಡ ನಿರ್ಮಿಸಲು ನಗರಸಭೆಯ ಅನುಮತಿ ಪಡೆಯದೇ ವಾಣಿಜ್ಯ ಕಟ್ಟಡ ನಿರ್ಮಿಸುವಂತಿಲ್ಲ. ಅಲ್ಲದೇ ಇ ಸ್ವತ್ತಿನಲ್ಲಿ ವಕ್ಫ್ ಬೋರ್ಡ್ ಹೆಸರು ಇಲ್ಲ. ಮುಸ್ಲಿಮರ ಸ್ಮಶಾನ ಜಾಗೆ ಎಂದು ಇದೆ. ಈ ಆಸ್ತಿ ಯಾರಿಂದ ಬಂತು ಹೇಗೆ ಬಂತು ಎಂಬುದನ್ನು ಅವರು ಸ್ಪಷ್ಟಪಡಿಸಲಿ ಎಂದು ಆಗ್ರಹಿಸಿದರು.

ಮುಸ್ಲಿಂ ಸಮುದಾಯದ ಸ್ಮಶಾನಕ್ಕೆ 2 ಎಕರೆ ಮಾತ್ರ ಮಂಜೂರಾಗಿದೆ, ಉಳಿದದ್ದು ಅತಿಕ್ರಮಣಗೊಂಡಿದೆ. ಈ ಬಗ್ಗೆ ಜಿಲ್ಲಾಡಳಿತ, ನಗರಸಭೆ ಸೂಕ್ತ ಕ್ರಮಕ್ಕೆ ಮುಂದಾಗಲಿ. ಸೀಮಿತ ಉದ್ದೇಶಕ್ಕೆ ಬಳಕೆ ಮಾಡಿಕೊಳ್ಳದೇ ಇದ್ದಲ್ಲಿ ಅದನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದರು.

ಸಾಮಾಜಿಕ ಕಾರ್ಯಕರ್ತ ಪ್ರದೀಪ ಮುಳ್ಳೂರ ಮಾತನಾಡಿ, ಅ.28ರಂದು ಪ್ರತಿಭಟನೆಗೆ ಮೊದಲು ಅನುಮತಿ ನೀಡಿ ನಂತರ ರಾತ್ರೋರಾತ್ರಿ ವಾಪಸ್ ಪಡೆದಿದ್ದಾರೆ. ಪ್ರತಿಭಟನೆಗೆ ಬಂದವರನ್ನು ಬಂಧಿಸಿದ್ದಾರೆ. ಆದರೂ, ಹಾವೇರಿ ನಗರದ ಜನತೆ ಅರ್ಧ ದಿನ ಅಂಗಡಿಗಳನ್ನು ಬಂದ್ ಮಾಡಿ ಬೆಂಬಲಿಸಿದ್ದಾರೆ. ಪೊಲೀಸರು ಹಾಗೂ ಜಿಲ್ಲಾಡಳಿತ ಯಾರ ಕೈಗೊಂಬೆಯಾಗದೇ ಕಾನೂನು ಪಾಲನೆ ಮಾಡಬೇಕು ಎಂದರು.

ಸುದ್ದಿಗೋಷ್ಠಿಯಲ್ಲಿ ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಲೋಕೇಶ ಕಾರಡಗಿ, ವೆಂಕಟೇಶ ನಾರಾಯಣಿ, ಸುಭಾಷ ಬೆಂಗಳೂರು, ಅಭಿಷೇಕ ಗುಡಗೂರ, ಎನ್.ಎಸ್.ಪಾಟೀಲ, ಅಶೋಕ ಹೊಸಮನಿ, ಕಿರಣ ಕೊಳ್ಳಿ, ಗುಡ್ಡಪ್ಪ ಭರಡಿ, ಇತರರಿದ್ದರು.

ನಗರಸಭೆ, ಜಿಲ್ಲಾಡಳಿತ ವೈಫಲ್ಯ; ಪ್ರದೀಪ ಮುಳ್ಳೂರ ಆರೋಪ

ಖಬರಸ್ಥಾನದಲ್ಲಿ ಅಧಿಕೃತವಾಗಿ ಕಟ್ಟಡ ಕಟ್ಟುತ್ತಿದ್ದರೆ ತಾಡಪತ್ರಿ ಹಾಕಿ ರಾತ್ರೋರಾತ್ರಿ ಏಕೆ ನಿರ್ಮಿಸುತ್ತಿದ್ದರು. ಈ ವಿಷಯವನ್ನು ಸಮರ್ಥವಾಗಿ ನಿರ್ವಹಣೆ ಮಾಡುವಲ್ಲಿ ನಗರಸಭೆ ಮತ್ತು ಜಿಲ್ಲಾಡಳಿತ ವಿಫಲವಾಗಿವೆ. ಈ ಕುರಿತು ಜಿಲ್ಲಾಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೇ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಇಲ್ಲದಿದ್ದಲ್ಲಿ ಹಿಂದುಗಳು ಕೂಡ ಅವರಂತೆ ಸ್ಮಶಾನದಲ್ಲಿ ವಾಣಿಜ್ಯ ಮಳಿಗೆಗಳನ್ನು ಕಟ್ಟುತ್ತೇವೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರದೀಪ ಮುಳ್ಳೂರ ಎಚ್ಚರಿಕೆ ನೀಡಿದರು.