ಜಿಲ್ಲೆ

ಚನ್ನಳ್ಳಿ ಗ್ರಾಪಂನಲ್ಲಿ ಸರ್ಕಾರದ ಹಣ ದುರುಪಯೋಗ ?; ಅತಿವೃಷ್ಠಿಗೆ ಹಾನಿಗೀಡಾದ ಮನೆಗಳಿಗೆ ಪರಿಹಾರದಲ್ಲಿ ಅವ್ಯವಹಾರ ಆರೋಪ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ಹಿರೇಕೆರೂರ ತಾಲೂಕು ಚನ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪ್ರವಾಹ ಸಂದರ್ಭದಲ್ಲಿ ಮನೆಹಾನಿ ಪ್ರಕರಣದಲ್ಲಿ ಭಾರಿ ಅವ್ಯವಹಾರ ನಡೆದಿದ್ದು, ಈ ಕುರಿತು ಸರ್ಕಾರ ತನಿಖೆ ನಡೆಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮಹೇಶ ಮುದ್ದಣ್ಣನವರ ಆಗ್ರಹಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2021, 2022, 2023ರ ಅವಧಿಯಲ್ಲಿ ಪ್ರವಾಹದ ಸಂದರ್ಭದಲ್ಲಿ ಅತಿವೃಷ್ಠಿಯಿಂದ 60ಕ್ಕೂ ಅಧಿಕ ಮನೆಗಳಿಗೆ ಹಾನಿ ಉಂಟಾಗಿತ್ತು. ಈ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎನ್‌ಡಿಆರ್‌ಎಫ್ ಹಾಗೂ ಎಸ್‌ಡಿಆರ್‌ಎಫ್ ಯೋಜನೆಗಳಡಿ ಹಾನಿಗೊಳಗಾದ ಮನೆಗಳಿಗೆ ಹಣ ಬಿಡುಗಡೆ ಮಾಡಿತ್ತು.

ಚನ್ನಳ್ಳಿ ಗ್ರಾಪಂ ಅಧಿಕಾರಿಗಳು ಹಾಗೂ ತ್ರಿಸದಸ್ಯ ಸಮಿತಿಯವರು ಮಾರ್ಗಸೂಚಿ ಅನ್ವಯ ಪರಿಹಾರ ವಿತರಿಸದೇ, ಅನರ್ಹರಿಗೂ ಪರಿಹಾರ ಸಿಗುವಂತೆ ಮಾಡಿದ್ದಾರೆ. ಜಿಪಿಎಸ್ ಫೋಟೋ ಲಗತ್ತಿಸದೇ, ಕೆಲವರಿಂದ ಹಣ ಪಡೆದು ಒಂದೇ ಫೋಟೋವನ್ನು ಹಿಂದೆ ಮುಂದೆ ಮಾಡಿ ಇಬ್ಬರು ಅಥವಾ ಮೂವರಿಗೆ ಕೆಲವೆಡೆ ಇನ್ನೂ ಹೆಚ್ಚಿನವರಿಗೆ ಲಗತ್ತಿಸಿ ಪರಿಹಾರ ಕೊಡಿಸಿದ್ದಾರೆ. ಇದರಿಂದ ಕೆಲ ಅರ್ಹರಿಗೆ ಪರಿಹಾರ ದೊರೆತಿಲ್ಲ. ಸರ್ಕಾರದ ಹಣ ದುರುಪಯೋಗ ಆಗಿದೆ. ಹಾಗಾಗಿ, ಈ ಕುರಿತು ಸರ್ಕಾರ ತಂಡ ರಚಿಸಿ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಹನುಮಂತಗೌಡ ಸೊರಟೂರ, ಮಲ್ಲನಗೌಡ ಬೋಪಣ್ಣನವರ, ಕರಬಸಪ್ಪ ಮುದ್ನಳ್ಳಿ, ಶ್ರೀಕಾಂತ ಕಲ್ಲಾಪುರ ಇದ್ದರು.