ಹಾವೇರಿ: ಆಗಸ್ಟ್ 11ರಂದು ನಡೆಯಬೇಕಿದ್ದ ಹಾವೇರಿ ಜಿಲ್ಲಾ ಸಹಕಾರ ಹಾಲು ಒಕ್ಕೂಟದ ನಿರ್ದೇಶಕರ ಸ್ಥಾನದ ಚುನಾವಣೆಯ ದಿನಾಂಕವನ್ನು ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಮುಂದೂಡಲಾಗಿದೆ.
ಜು.1ರಂದು ಜಿಲ್ಲಾ ಸಹಕಾರ ಉಪ ನಿಬಂಧಕ ಅಜ್ಮತ್‌ವುಲ್ಲಾ ಖಾನ್ ಚುನಾವಣಾ ಪ್ರಕಟಣೆ ಹಾಗೂ ವೇಳಾಪಟ್ಟಿ ಹೊರಡಿಸಿದ್ದರು. ಆ.11ರಂದು ಚುನಾವಣೆ ಮಾಡುವುದಾಗಿ ಘೋಷಿಸಿದ್ದರು. ಇದನ್ನು ಪ್ರಶ್ನಿಸಿ ಕೆಲ ಹಾಲು ಉತ್ಪಾದಕ ಸಂಘಗಳು ಧಾರವಾಡ ಹೈಕೋರ್ಟ್ ಮೊರೆ ಹೋಗಿದ್ದವು. 13 ಡಿ (2) (2-ಎ) ಪ್ರಕಾರ ಅರ್ಹ, ಅನರ್ಹ ಮತದಾರರ ಯಾದಿ ಪ್ರಕಟಿಸಬೇಕು. ಅನರ್ಹ ಮತದಾರರಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿ ನಂತರ ಚುನಾವಣೆ ನಡೆಸುವಂತೆ ಮನವಿ ಮಾಡಿದ್ದವು.
ವಿಚಾರಣೆ ನಡೆಸಿದ ಹೈಕೋರ್ಟ್ 13 ಡಿ (2) (2-ಎ) ಪ್ರಕಾರವೇ ಚುನಾವಣೆ ನಡೆಸುವಂತೆ ಆದೇಶಿಸಿದೆ. ಹಾಗಾಗಿ, ಚುನಾವಣೆ ಮತ್ತೊಮ್ಮೆ ಮುಂದೂಡಲ್ಪಟ್ಟಿದೆ. ಅನರ್ಹ ಮತದಾರರ ಪಟ್ಟಿ ಸಿದ್ಧಪಡಿಸುವ ಕಾರ್ಯ ಆರಂಭವಾಗಿದೆ ಎಂದು ಹಾವೆಮುಲ್ ಎಂಡಿ ಡಿ.ಟಿ.ಕಳಸದ ತಿಳಿಸಿದ್ದಾರೆ.