ಜಿಲ್ಲೆ

ಸಂಘಟಿತರಾಗಿ ಸವಾಲುಗಳನ್ನು ಎದುರಿಸಿ; ಪ್ರೌಢಶಾಲಾ ಸಹ-ಶಿಕ್ಷಕರ ಶೈಕ್ಷಣಿಕ ಸಮ್ಮೇಳನದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಸಲಹೆ

ಕೇಶವಮೂರ್ತಿ ಬೇಲೂರಪ್ಪನವರ

ಹಾವೇರಿ: ರಾಷ್ಟ್ರದ ಭವಿಷ್ಯವನ್ನು ನಿರ್ಮಿಸುವ ಶಿಕ್ಷಕರು ಆಧುನಿಕ ಶೈಕ್ಷಣಿಕ ವ್ಯವಸ್ಥೆಯಲ್ಲಿ ಅನೇಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಅವುಗಳಿಗೆ ಪರಿಹಾರ ಕಂಡುಕೊಳ್ಳಲು ಸಂಘಟಿತರಾಗಿ ಶೈಕ್ಷಣಿಕ ಪ್ರಗತಿ ಮತ್ತು ಇಲಾಖೆಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗುತ್ತದೆ ಎಂದು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಶಿಕ್ಷಕರಿಗೆ ಸಲಹೆ ನೀಡಿದರು.
ನಗರದ ಜಿಲ್ಲಾ ಗುರುಭವನದಲ್ಲಿ ರಾಜ್ಯ ಪ್ರೌಢಶಾಲಾ ಸಹ-ಶಿಕ್ಷಕರ ಸಂಘದ ಜಿಲ್ಲಾ ಘಟಕದ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ಜಿಲ್ಲಾ ಮಟ್ಟದ ಪ್ರೌಢಶಾಲಾ ಸಹ-ಶಿಕ್ಷಕರ ಶೈಕ್ಷಣಿಕ ಸಮ್ಮೇಳನ, ಸರ್ವೋದಯ ದಿನಾಚರಣೆ ಹಾಗೂ ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಯ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಯಾರೇ ಆಗಲಿ ತಮ್ಮ ಹಕ್ಕುಗಳನ್ನು ಕೇಳುವಾಗ ಒಬ್ಬಂಟಿಯಾಗಿ ಹೋದರೆ ಜಯ ಸಿಗುವುದಿಲ್ಲ. ಸಂಘಟಿತರಾಗಿ ಸಂಘಟನೆ ಮೂಲಕವಾಗಿ ತಮ್ಮ ಹಕ್ಕುಗಳನ್ನು ನ್ಯಾಯಯುತವಾಗಿ ಕೇಳಿದಾಗ ಜಯ ಸಿಗುತ್ತದೆ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಸಂಘದ ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು. ಶಾಲೆ ಎಂಬ ನಾಲ್ಕು ಗೋಡೆಗಳ ಮಧ್ಯದಲ್ಲಿ ದೇಶದ ಭವಿಷ್ಯವನ್ನು ನಿರ್ಮಿಸುವ ಕೆಲಸವನ್ನು ಶಿಕ್ಷಕರು ಮಾಡುತ್ತಿದ್ದಾರೆ. ಅವರ ಸೇವೆ ಸದಾ ಸ್ಮರಣೀಯ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಶಾಂತಗಿರಿ ಮಾತನಾಡಿ, ಸಹ ಶಿಕ್ಷಕರಿಗೆ ಇಲಾಖೆಯಿಂದ ಸಿಗಬೇಕಾಗಿರುವ ಎಲ್ಲ ಸೌಲಭ್ಯಗಳನ್ನು ಕೊಡಿಸುವ ಮತ್ತು ಅವರ ಬೋಧನಾ ಶೈಲಿಯಲ್ಲಿ ಉತ್ಸಾಹ ತುಂಬುವ ಜವಾಬ್ದಾರಿ ನಮ್ಮ ಸಂಘಟನೆ ಮೇಲಿದೆ. ಏಳನೇ ವೇತನ ಆಯೋಗದ ಜಾರಿ ಮತ್ತು ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ ವ್ಯವಸ್ಥೆ ಮರುಜಾರಿ, ಪದವಿಪೂರ್ವ ಕಾಲೇಜಿಗೆ ಭಡ್ತಿ ನೀಡುವುದು, ಹೊಸ ಪ್ರೌಢಶಾಲೆಗಳಿಗೆ ಮತ್ತು ಪ.ಪೂ.ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ಮುಖ್ಯೋಪಾಧ್ಯಾಯರ ಹುದ್ದೆ ಮಂಜೂರು ಮಾಡುವುದು, ಇನ್ನಿತರ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ಮಾಡೋಣ ಎಂದರು.
ಕಾರ್ಯಕ್ರಮದಲ್ಲಿ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಸುರೇಶ ಹುಗ್ಗಿ, ಡಯಟ್ ಪ್ರಾಚಾರ್ಯ ಗಿರೀಶ ಪದಕಿ, ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಮೌನೇಶ ಬಡಿಗೇರ, ಎಂ.ಎಚ್.ಪಾಟೀಲ, ಶ್ರೀಧರ, ಎಸ್.ಜಿ.ಕೋಟಿ, ಎಂ.ಎಫ್.ಬಾರ್ಕಿ, ನಿರಂಜನ ಮೂರ್ತಿ, ವಿಷಯ ಪರೀವಿಕ್ಷಕರು, ಪ್ರೌಢಶಾಲಾ ಸಹಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಸಿದ್ದಬಸಪ್ಪ ಬಿ., ಗೌರವಾಧ್ಯಕ್ಷ ಎಚ್.ಕೆ.ಮಂಜುನಾಥ ಪ್ರಧಾನಿ, ಕಾರ್ಯದರ್ಶಿ ರಾಮು ಗುಗವಾಡ, ಉಪಾಧ್ಯಕ್ಷ ಮಲ್ಲನಗೌಡ ಬಿರಾದಾರ, ದೇವರಾಜೇಗೌಡ, ತುಕಾರಾಮ ಬಾಗೆನ್ನೆವರ, ಧನಸಿಂಗ್ ರಾಠೋಡ, ಸುರೇಶ ಕಲ್ಮನಿ, ಜಿಲ್ಲಾ ಕಾರ್ಯದರ್ಶಿ ರಾಕೇಶ ಜಿಗಳಿ, ಮಾಧ್ಯಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ಎಚ್.ಪಿ.ಬಣಕಾರ, ಕಾರ್ಯದರ್ಶಿ ಎನ್.ಎನ್.ಕುಂದೂರು, ಪ್ರಾಥಮಿಕ ಶಾಲಾ ಶಿಕ್ಷಕ ಸಂಘದ ಕಾರ್ಯದರ್ಶಿ ಬಿ.ಎಸ್.ಚಳ್ಳಾಳ, ಇತರರಿದ್ದರು.
ಬಸವರಾಜ ಜವಾಯಿ ಹಾಗೂ ಗೀತಾ ಸುತ್ತಕೋಟಿ, ಶಂಕರ ಹಾರ‌್ನಳ್ಳಿ ನಿರೂಪಿದರು. ಎಸ್.ಸಿ.ಕಲ್ಮನಿ ಸ್ವಾಗತಿಸಿದರು. ಎ.ಬಿ.ಗುಡ್ಡಳ್ಳಿ ಪ್ರಾರ್ಥಿಸಿದರು. ಮಲ್ಲಯ್ಯ ಹಿರೇಮಠ ವಂದಿಸಿದರು.

ಮೆರವಣಿಗೆ, ಸನ್ಮಾನ :
ಇದಕ್ಕೂ ಮುನ್ನ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಹಾಗೂ ಮಹಾತ್ಮಾ ಗಾಂಧಿಜೀಯವರ ಭಾವಚಿತ್ರದ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಅದ್ಧೂರಿಯಾಗಿ ಜುರುಗಿತು. ಧಾರವಾಡದ ಹಿರೇಮಲ್ಲೂರು ಈಶ್ವರನ್ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಶಶಿಧರ ತೋಡ್ಕರ ಉಪನ್ಯಾಸ ನೀಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸಾಹಿತಿಗಳಾದ ಸತೀಶ ಕುಲಕರ್ಣಿ ಹಾಗೂ ಡಾ.ಶಂಭು ಬಳಿಗಾರ ಅವರನ್ನು ಸನ್ಮಾನಿಸಲಾಯಿತು. ಬಡ್ತಿ ಹೊಂದಿದ ಮುಖ್ಯೋಪಾಧ್ಯಯರನ್ನು ಸಂಘಟನೆಯ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು.