ಹಾವೇರಿ: ಹೇಮರೆಡ್ಡಿ ಮಲ್ಲಮ್ಮನ ತತ್ವಾದರ್ಶಗಳು ಹಾಗೂ ಜೀವನ ಶೈಲಿ ಎಲ್ಲರಿಗೂ ದಾರಿದೀಪವಾಗಿದೆ. ಇಂದಿನ ಯುವ ಸಮೂಹ ಅವರ ಜೀವನ ಕುರಿತು ತಿಳಿದುಕೊಳ್ಳಬೇಕು ಎಂದು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಎನ್.ಎನ್. ಗಾಜಿಗೌಡ್ರ ಹೇಳಿದರು.
ನಗರದ ಗಾಂಧಿ ಭವನದಲ್ಲಿ ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಹಾವೇರಿ ಜಿಲ್ಲಾ ರೆಡ್ಡಿ ಜನಸಂಘದ ಸಹಯೋಗದಲ್ಲಿ ಆಯೋಜಿಸಿದ್ದ ಶಿವಶರಣೆ ಮಹಾಸಾದ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಅಧ್ಯಕ್ಷ ಎಂ.ಎಂ ಮೈದೂರ ಮಾತನಾಡಿ, ಹೇಮರೆಡ್ಡಿ ಮಲ್ಲಮ್ಮ ತತ್ವಜ್ಞಾನಿ ಎಂದು ಹೆಸರುವಾಸಿಯಾಗಿದ್ದರು. ಅವರ ಜೀವನ ಚರಿತ್ರೆ ಅಮೂಲ್ಯವಾಗಿದೆ. ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅಳವಡಿಸಿಕೊಂಡಾಗ ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ ಎಂದು ಹೇಳಿದರು.
ಹೊಸಮಠದ ಶ್ರೀ ಬಸವಶಾಂತಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಆಶೀರ್ವಚನ ನೀಡಿದರು. ಹಿರೇಕೆರೂರ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಉಪನ್ಯಾಸಕ ಡಾ.ಕಾಂತೇಶರೆಡ್ಡಿ ಗೋಡಿಹಾಳ, ಹೇಮರಡ್ಡಿ ಮಲ್ಲಮ್ಮ ಜೀವನದ ಕುರಿತು ಉಪನ್ಯಾಸ ನೀಡಿದರು.
ನಗರಸಭೆ ಉಪಾಧ್ಯಕ್ಷ ಮಲ್ಲಿಕಾರ್ಜುನ ಸಾತೇನಹಳ್ಳಿ, ಸದಸ್ಯ ಸಂಜೀವಕುಮಾರ ನೀರಲಗಿ, ಉಪ ವಿಭಾಗಾಧಿಕಾರಿ ಎಚ್.ಬಿ ಚನ್ನಪ್ಪ, ತಹಸೀಲ್ದಾರ್ ಶರಣಮ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಆರ್.ವಿ ಚಿನ್ನಿಕಟ್ಟಿ, ನಗರಸಭೆ ಆಯುಕ್ತ ಗಂಗಾಧರ ಬೆಲ್ಲದ, ಜಿಲ್ಲಾ ರೆಡ್ಡಿ ಜನಸಂಘದ ಕಾರ್ಯದರ್ಶಿ ಬಿ.ವಿ ದೊಡ್ಡಗೌಡ್ರ, ಸಮಾಜದ ಪ್ರಮುಖರು, ಇತರರು ಉಪಸ್ಥಿತರಿದ್ದರು.