ಹಾವೇರಿ: ಜಿಲ್ಲೆಯಲ್ಲಿ ಡೆಂಘೆ ಜ್ವರ ಉಲ್ಬಣಗೊಂಡು ಆತಂಕ ಸೃಷ್ಟಿಸಿದ್ದು, ಈ ನಡುವೆ ಜಿಲ್ಲೆಯ 12 ವರ್ಷದ ಬಾಲಕನೊಬ್ಬನಿಗೆ ಇಲಿ ಜ್ವರ ಕಾಣಿಸಿಕೊಳ್ಳುವ ಮೂಲಕ ಆತಂಕ ಸೃಷ್ಟಿಸಿದೆ.
ಹಾವೇರಿ ತಾಲೂಕಿನ ದೇವಿಹೊಸೂರ ಗ್ರಾಮದ 12 ವರ್ಷದ ಬಾಲಕನಿಗೆ ಕಳೆದ ಏಳೆಂಟು ದಿನಗಳಿಂದ ಜ್ವರ ಕಾಣಿಸಿಕೊಂಡಿತ್ತು. ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಲಾಗಿತ್ತು. ಮೊದಲಿಗೆ ಜಾಂಡೀಸ್ ಪತ್ತೆಯಾಗಿತ್ತು. ಮತ್ತೆ ಜ್ವರ ಹೆಚ್ಚಾದ ಹಿನ್ನೆಲೆಯಲ್ಲಿ ಹಾವೇರಿ ಜಿಲ್ಲಾಸ್ಪತ್ರೆಗೆ ಬಾಲಕನನ್ನು ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆಯಲ್ಲಿ ಇಲಿ ಜ್ವರ ಪರೀಕ್ಷೆ ಮಾಡಿಸಿದಾಗ ಖಚಿತವಾಗಿದೆ.
ಇದು ಯಾವ ಜ್ವರ ಎಂಬುದನ್ನು ಪತ್ತೆ ಹಚ್ಚುವುದು ವೈದ್ಯರಿಗೂ ಸವಾಲಾಗಿತ್ತು. ಯಾಕೆಂದರೆ ಇಲಿ ಜ್ವರವನ್ನು ಸುಲಭವಾಗಿ ಪತ್ತೆ ಹಚ್ಚಲು ಆಗದು. ಬಾಲಕನಿಗೆ ಇಲಿ ಜ್ವರ ಇರುವುದು ಶನಿವಾರ ಗೊತ್ತಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಕೊಡಲಾಗುತ್ತಿದೆ. ಬಾಲಕನ ಆರೋಗ್ಯ ಸ್ಥಿರವಾಗಿದ್ದು, ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾನೆ ಎಂದು ವೈದ್ಯೆ ಡಾ.ಭಾಗ್ಯ ಪ್ರತಿಕ್ರಿಯಿಸಿದ್ದಾರೆ.
ಹೀಗಿವೆ ಲಕ್ಷಣಗಳು :
ಡೆಂಘೆ ಹಾಗೂ ಇಲಿ ಜ್ವರದ ಲಕ್ಷಣಗಳು ಬಹುತೇಕವಾಗಿ ಒಂದೇ ರೀತಿಯಾಗಿರುತ್ತವೆ. ಹೆಚ್ಚು ಜ್ವರ, ಮೈಕೈ ನೋವು, ವಾಂತಿ, ಜಾಂಡೀಸ್, ಮತ್ತಿತರ ಲಕ್ಷಣಗಳು ಕಂಡುಬರುತ್ತವೆ. ಇಂತಹ ಲಕ್ಷಣಗಳು ಕಂಡಲ್ಲಿ ಕೂಡಲೇ ಹತ್ತಿರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕೆಂದು ಎನ್ನುತ್ತಾರೆ ವೈದ್ಯರು.
ಇಲಿ ಮೂತ್ರದಿಂದ ಹರಡುತ್ತೆ
ಬಾಲಕನ ರಕ್ತ ಪರೀಕ್ಷೆ ಮಾಡಿಸಿದಾಗ ಇಲಿ ಜ್ವರ ಶಂಕೆ ವ್ಯಕ್ತವಾಗಿದೆ. ಸದ್ಯ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ದೇವಿಹೊಸೂರ ಗ್ರಾಮದಲ್ಲಿ ಸಮೀಕ್ಷೆ ಆರಂಭಿಸಲಾಗಿದೆ. ಇಲಿ ಮೂತ್ರ, ಭೇದಿಯ ಮೂಲಕ ಇಲಿಜ್ವರ ಹರಡುತ್ತದೆ. ಸೋಂಕಿತರಿಗೆ ಕಿಡ್ನಿ ಮತ್ತು ಲಿವರ್‌ಗೆ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ ಎಂದು ಡಿಎಚ್‌ಒ ಡಾ.ಎಂ.ಜಯಾನಂದ ತಿಳಿಸಿದ್ದಾರೆ.