ಹಾವೇರಿ: ಹಿಂದಿನ ಆಡಳಿತ ಮಂಡಳಿಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ಕುರಿತು ತನಿಖೆ ನಡೆಸಿ. ತಪ್ಪಿತಸ್ಥರಿಂದ ಹಣ ವಸೂಲಿ ಮಾಡಿ. ಅಧ್ಯಕ್ಷರ ವಿರುದ್ಧ ಬರೆದಿರುವ ಅನಾಮಧೇಯ ಪತ್ರ, ನೌಕರರ ಕಲ್ಯಾಣ ನಿಧಿ ದುರುಪಯೋಗದ ಕುರಿತು ತನಿಖೆ ನಡೆಸಿ ಎಂದು ಹಾವೇರಿ ಹಾಲು ಒಕ್ಕೂಟದ ಸದಸ್ಯರು ಆಗ್ರಹಿಸಿದರು.
ನಗರದ ಶ್ರೀ ಸಿದ್ದರಾಮೇಶ್ವರ ಕಲ್ಯಾಣ ಮಂಟಪದಲ್ಲಿ ಸೋಮವಾರ ಹಾವೇರಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ (ಹಾವೆಮುಲ್) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಒಕ್ಕೂಟದ ಹಲವು ಸದಸ್ಯರು ನೂತನ ಆಡಳಿತ ಮಂಡಳಿಗೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಒಕ್ಕೂಟದಲ್ಲಿ ಹೆಚ್ಚುವರಿ ಉದ್ಯೋಗಿಗಳು ಇದ್ದಾರೆ. ಹೆಚ್ಚುವರಿ ಉದ್ಯೋಗಿಗಳನ್ನು ಕಡಿತಗೊಳಿಸಿ, ಇಲ್ಲವೇ ಬೇರೆಡೆ ವರ್ಗಾಯಿಸಿ. ಹಾಲು ಉತ್ಪಾದಕರಿಗೆ ಸಮಯಕ್ಕೆ ಸರಿಯಾಗಿ ವಾರಕ್ಕೊಮ್ಮೆ ಹಣ ಬಿಡುಗಡೆ ಮಾಡಿ. ಹಳ್ಳಿ ಹಳ್ಳಿಗಳಲ್ಲೂ ಖಾಸಗಿ ಡೇರಿಗಳು ಆಗಮಿಸಿದ್ದು, ಭಾರೀ ಸ್ಪರ್ಧೆ ಎದುರಾಗಿದೆ. ಪ್ರತಿ ಲೀಟರ್ ಹಾಲಿನ ದರ ಹೆಚ್ಚಿಸಿ ಹೈನುಗಾರರಿಗೆ, ಸದಸ್ಯರಿಗೆ ಅನುಕೂಲ ಮಾಡಿಕೊಡಿ. ಮೈಸೂರು, ಮಂಡ್ಯ ಜಿಲ್ಲೆಗಳ ಮಾದರಿಯಲ್ಲಿ ಮಾರುಕಟ್ಟೆ ಅಭಿವೃದ್ಧಿಪಡಿಸಿ. ಎಲ್ಲೆಡೆ ನಂದಿನಿ ಹಾಲು, ಮೊಸರು, ಇತರ ಉತ್ಪನ್ನ ಸುಲಭವಾಗಿ ಸಿಗುವಂತೆ ಮಾಡಿ ಎಂದು ಆಗ್ರಹಿಸಿದರು.
2022-23ರಲ್ಲಿ ರಾಸು ವಿತರಣೆಗಾಗಿ ಸರ್ಕಾರ 10 ಕೋಟಿ ರೂ. ಬಿಡುಗಡೆ ಮಾಡಿತ್ತು. ಅದರಲ್ಲಿ 3.50 ಕೋಟಿ ರೂ. ಬಾಕಿ ಉಳಿದಿತ್ತು. ಅದನ್ನು ವಿತರಿಸುವಲ್ಲಿ ಇರುವ ಕಾನೂನು ತೊಡಕು ನಿವಾರಿಸಿ, ಜನರಲ್‌ನವರಿಗೂ ಹಸು ವಿತರಿಸಿ. ಅರ್ಹರಿಗೆ ಡೇರಿ ಸದಸ್ಯತ್ವ ಕೊಡಿ. ಹಾಲು ಉತ್ಪಾದಕರಿಗೆ ಸಾಲ ನೀಡಲು ನಬಾರ್ಡ್ ಯೋಜನೆ ಇದೆ. ಕೆಸಿಸಿ ಬ್ಯಾಂಕ್ ಮೂಲಕ ಹಾಲು ಉತ್ಪಾದಕರಿಗೆ ಸಾಲ ಕೊಡುವ ವ್ಯವಸ್ಥೆ ಮಾಡಿ ಎಂದು ಸದಸ್ಯರು ಒತ್ತಾಯಿಸಿದರು.
ಒಕ್ಕೂಟದ ಅಧ್ಯಕ್ಷ ಮಂಜನಗೌಡ ಪಾಟೀಲ, ನಿರ್ದೇಶಕರಾದ ಉಜ್ಜನಗೌಡ ಮಾವಿನತೋಪ, ಶಶಿಧರ ಯಲಿಗಾರ, ಪ್ರಕಾಶ ಬನ್ನಿಹಟ್ಟಿ, ಚಂದ್ರಪ್ಪ ಜಾಲಗಾರ, ಟಾಕನಗೌಡ ಪಾಟೀಲ, ಬಸವೇಶಗೌಡ ಪಾಟೀಲ, ಎಂಡಿ ಪ್ರದೀಪ ಎಸ್.ಎಲ್, ಇತರರಿದ್ದರು.
ಕೋಟ್:
ಅನಾಮಧೇಯ ಪತ್ರ ಹಾಗೂ ಭ್ರಷ್ಟಾಚಾರ ಆರೋಪದ ಕುರಿತು ತನಿಖೆ ನಡೆಸಲಾಗುವುದು. ವಾರಕ್ಕೊಮ್ಮೆ ಪೇಮೆಂಟ್ ಮಾಡಲಾಗುವುದು. ನಮ್ಮ ಹಾಲಿನ ದರ ಈಗಾಗಲೇ ಹೆಚ್ಚಿಗೆ ಇದೆ. ಒಕ್ಕೂಟದಲ್ಲಿ ಹೆಚ್ಚುವರಿ ನೌಕರರಿಲ್ಲ. 26 ಖಾಯಂ ಸಿಬ್ಬಂದಿ ಇದ್ದಾರೆ. ಉಳಿದವರು ಗುತ್ತಿಗೆ ಆಧಾರದಲ್ಲಿದ್ದಾರೆ. ಖಾಯಂ ನೌಕರರ ನೇಮಕಕ್ಕೆ ಸರ್ಕಾರದ ಅನುಮತಿ ಪಡೆಯಲಾಗುವುದು.
- ಮಂಜನಗೌಡ ಪಾಟೀಲ, ಅಧ್ಯಕ್ಷ, ಹಾವೆಮುಲ್