ಹಾವೇರಿ: ನಗರದ ಶ್ರೀ ಕಲ್ಮೇಶ್ವರ ಗ್ರಾಮೀಣ ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯವನ್ನು ಮುಚ್ಚಿಸಿ ಇದರಲ್ಲಿರುವ ಅಂಗವಿಕಲ ಮಹಿಳೆಯರನ್ನು ಹೊರಹಾಕಲು ಮುಂದಾಗಿರುವುದು ಅಂಗವಿಕಲರ ಹಕ್ಕುಗಳ ಕಾಯ್ದೆ ಉಲ್ಲಂಘನೆಯಾಗುತ್ತದೆ ಎಂದು ಅಂಗವಿಕಲರ, ಪಾಲಕರ ಒಕ್ಕೂಟ(ಕೆ.ಎಸ್.ಡಿ.ಸಿ.ಎಫ್)ದ ರಾಜ್ಯ ಪ್ರಧಾನ ಕಾರ್ಯದರ್ಶಿ ರಂಗಪ್ಪ ದಾಸರ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಗವಿಕಲರನ್ನು ಹೊರ ಹಾಕುವುದನ್ನು ಒಕ್ಕೂಟ ಖಂಡಿಸುತ್ತದೆ. ಯಾವುದೇ ಸಬೂಬು ಹೇಳದೆ ಇವರಿಗೆ ಪುನರ್ವಸತಿ ಕಲ್ಪಿಸಬೇಕೆಂದು ಒತ್ತಾಯಿಸಿದರು.
ಅಂಗವಿಕಲರಿಗಾಗಿ ಕೆಲಸ ಮಾಡುವ ಸಂಸ್ಥೆಯು ಅಂಗವಿಕಲರ ಪೋಷಣೆ, ರಕ್ಷಣೆ, ಶಿಕ್ಷಣ ತರಬೇತಿ, ಪುನಶ್ಚೇತನದ ಉದ್ದೇಶಗಳಡಿ ಸಂಸ್ಥೆ ಪ್ರಾರಂಭಿಸಿರುತ್ತಾರೆ. ಇದಕ್ಕೆ ಬೇಕಾದ ಎಲ್ಲ ರೀತಿಯ ಅನುದಾನವನ್ನು ಪಡೆದಿರುತ್ತಾರೆ. ಇದನ್ನು ಪುನಶ್ಚೇತನಗೊಳಿಸದೇ ಅಂಗವಿಕಲ ಮಹಿಳೆಯರನ್ನು ಹೊರ ಹಾಕುವುದು ಪರ್ಯಾಯ ಮಾರ್ಗವಲ್ಲ ಎಂದರು.
ಎಸ್‌ಎಫ್‌ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್. ಮಾತನಾಡಿ, ಅಂಗವಿಕಲರ ಆಯುಕ್ತರೂ ಆಗಿರುವ ಜಿಲ್ಲಾಧಿಕಾರಿಯವರು, ಈ ಕುರಿತಂತೆ ಮಧ್ಯಪ್ರವೇಶ ಮಾಡಬೇಕು. ವಸತಿ ನಿಲಯದ ಪುನಶ್ಚೇತನಕ್ಕೆ ಬೇಕಾದ ಎಲ್ಲ ರೀತಿಯ ಕ್ರಮಗಳಿಗೆ ಮುಂದಾಗಬೇಕು ಎಂದು ಮನವಿ ಮಾಡಿದರು. ಕಳಪೆ ನಿರ್ವಹಣೆ ಮತ್ತು ಭ್ರಷ್ಟಾಚಾರದ ದೂರುಗಳು ಕಲ್ಮೇಶ್ವರ ಸಂಸ್ಥೆಯ ಮೇಲೆ ಕೇಳಿ ಬರುತ್ತಿದ್ದು, ಈ ಕುರಿತಂತೆ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಒತ್ತಾಯಿಸಿದರು.
ಅಂಗವಿಕಲ ವಿದ್ಯಾರ್ಥಿನಿ ಹೇಮಾ ಪ್ರಕಾಶ ಮಾತನಾಡಿ, ಏಳು ವರ್ಷದಿಂದ ಆಶ್ರಯ ನೀಡಿದ ಸಂಸ್ಥೆ ಏಕಾಏಕಿ ಹೊರದೂಡುವ ಕಾರ್ಯಕ್ಕೆ ಬೇಸರವಾಗಿದೆ. ಊಟ ಉಪಚಾರ ಸಾಕಷ್ಟು ಲೋಪದೋಷಗಳು ಇದ್ದರೂ ಸಹಿಸಿಕೊಂಡು ಬಂದೆವು. ಆದರೆ ಸರ್ಕಾರ ಅನ್ಯಾಯ ಸರಿಪಡಿಸದೆ ನಮ್ಮ ಹಕ್ಕುಗಳನ್ನು ದಹನ ಮಾಡುತ್ತಿದೆ. ಜಿಲ್ಲಾಧಿಕಾರಿಗಳು ಅನುದಾನ ನೀಡುತ್ತಿಲ್ಲ ಎಂದು ಸಂಸ್ಥೆ ನಮ್ಮನ್ನು ಹೊರಗಡೆ ಹೋಗಿ ಎನುತ್ತಿದ್ದಾರೆ. ಸರ್ಕಾರ ನಮಗೆ ನ್ಯಾಯ ಕೊಡಿಸಬೇಕು ಎಂದರು.
ಡಿವೈಎಫ್‌ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ವಿಕಲಚೇತನ ವಿದ್ಯಾರ್ಥಿನಿ ಸುಮಾ ದೊಡ್ಡಗೌಡರ, ಗಿರಿಜಾ ಗೌಳಿ, ರೇಖಾ ಮಾದಗುಂಡಿ, ತಿಪ್ಪೇಸ್ವಾಮಿ ಹೊಸಮನಿ, ಇತರರಿದ್ದರು.