ಜಿಲ್ಲೆ

ದೇಗುಲದ ಕಳಸಾರೋಹಣ ವೇಳೆ ಅವಘಡ; ಶೇಷಗಿರಿಯಲ್ಲಿ ಓರ್ವ ಸಾವು, ಸ್ವಾಮೀಜಿ ಸೇರಿ ಇಬ್ಬರಿಗೆ ಗಾಯ

ಹಾವೇರಿ: ಹಾನಗಲ್ಲ ತಾಲೂಕಿನ ಶೇಷಗಿರಿ ದೇವಸ್ಥಾನದ ಶ್ರೀ ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣದ ಸಂದರ್ಭದಲ್ಲಿ ಕ್ರೇನ್‌ನಿಂದ ಕೆಳಗೆ ಬಿದ್ದು ಓರ್ವ ಮೃತಪಟ್ಟು, ಇಬ್ಬರು ಗಾಯಗೊಂಡ ದುರ್ಘಟನೆ ಶುಕ್ರವಾರ ಸಂಭವಿಸಿದೆ.

ಗ್ರಾಮದ ಮಂಜುನಾಥ ಪಾಟೀಲ (42) ಮೃತಪಟ್ಟವರು. ಮಂಜುನಾಥ ಬಡಿಗೇರ ಹಾಗೂ ಕೂಸನೂರ ಸ್ವಾಮೀಜಿ ಗಾಯಗೊಂಡಿದ್ದಾರೆ.

ಶೇಷಗಿರಿ ಗ್ರಾಮದ ಶ್ರೀ ಗಂಗಾ ಪರಮೇಶ್ವರಿ ದೇವಸ್ಥಾನದ ಕಳಸಾರೋಹಣ ನೆರವೇರಿಸಲಾಗುತ್ತಿತ್ತು. ಈ ವೇಳೆ ಮಂಜುನಾಥ ಪಾಟೀಲ ಹಾಗೂ ಇತರರು ಕ್ರೇನ್‌ನ ಮೇಲೆ ಕಬ್ಬಿಣದ ಚೌಕಟ್ಟನ್ನು ಏರಿ ಕಳಸವನ್ನು ದೇಗುಲದ ಮೇಲೆ ಪ್ರತಿಷ್ಠಾಪಿಸಲು ಮುಂದಾಗಿದ್ದರು. ಈ ವೇಳೆ ಕ್ರೇನ್ ಮೇಲೆ ಎತ್ತುವಾಗ ಕ್ರೇನ್‌ಗೆ ಕಟ್ಟಿದ್ದ ಕಬ್ಬಿಣದ ಚೌಕಟ್ಟು ಬಿಚ್ಚಿ ಕೆಳಗೆ ಬಿದ್ದಿದೆ. ಈ ವೇಳೆ ಎದೆ ಭಾಗಕ್ಕೆ ತೀವ್ರವಾಗಿ ಗಾಯಗೊಂಡ ಮಂಜುನಾಥ ಪಾಟೀಲ ಮೃತಪಟ್ಟಿದ್ದಾರೆ. ಇನ್ನಿಬ್ಬರು ಗಾಯಗೊಂಡಿದ್ದು, ಹಾನಗಲ್ಲ ತಾಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಿಂದ ಸಂತಸದಲ್ಲಿದ್ದ ಗ್ರಾಮದಲ್ಲಿ ಮೌನ ಆವರಿಸಿದೆ.

ಸ್ಥಳಕ್ಕೆ ಆಡೂರ ಠಾಣೆ ಪೊಲೀಸರು ಧಾವಿಸಿ ಪರಿಶೀಲಿಸಿದರು. ಕ್ರೇನ್ ಚಾಲಕನ ನಿರ್ಲಕ್ಷೃದ ಆರೋಪದಡಿ ಪ್ರಕರಣ ದಾಖಲಿಸಿಕೊಂಡಿದ್ದಾಗಿ ಪೊಲೀಸರು ತಿಳಿಸಿದರು.