Oplus_131104 
ಜಿಲ್ಲೆ

ಹಮಾಲಿ ಕಾರ್ಮಿಕರಿಗೆ ಭವಿಷ್ಯ ನಿಧಿ ಯೋಜನೆ ಜಾರಿಗೊಳಿಸಿ

ಹಾವೇರಿ: ವ್ಯಾಪಾರ ವಹಿವಾಟಿನಲ್ಲಿ ಹಾಗೂ ಸರಕು ಸಾಗಾಣಿಕೆಯಲ್ಲಿ ಮಹತ್ವದ ಪಾತ್ರ ವಹಿಸುವ ಶ್ರಮಜೀವಿಗಳಾದ ಹಮಾಲಿ ಕಾರ್ಮಿಕರಿಗೆ ಪಿಂಚಣಿ ವೇತನ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ, ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಹಮಾಲಿ ಕಾರ್ಮಿಕರು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ನಗರದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಕಾರ್ಮಿಕರು ಪ್ರತಿಭಟನೆ ನಡೆಸಿ, ನಂತರ ತಹಸೀಲ್ದಾರ್ ಮೂಲಕ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ಮನವಿ ಸಲ್ಲಿಸಿದರು. ಬದುಕಿನ ಕೊನೆಗಾಲದಲ್ಲಿ ಆರ್ಥಿಕವಾಗಿ ಹಾಗೂ ಅನಾರೋಗ್ಯದಿಂದ ಸಂಕಷ್ಟಕ್ಕೀಡಾಗುವ ಹಮಾಲಿ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಕರ್ನಾಟಕ ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಯೋಜನೆಯನ್ನು ಜಾರಿ ಮಾಡಬೇಕು ಹಾಗೂ ಸೂಕ್ತ ಪಿಂಚಣಿ ಯೋಜನೆ ಜಾರಿಗೊಳಿಸಬೇಕು. ಎಪಿಎಂಸಿ ಹಮಾಲಿ ಕಾರ್ಮಿಕರಿಗೆ ಈ ಹಿಂದೆ ಪ್ರಾರಂಭಿಸಲಾದ ಕಾಯಕ ನಿಧಿ ಯೋಜನೆಯಡಿ ವೈದ್ಯಕೀಯ ಮರುಪಾವತಿ ಪದ್ಧತಿ ಮುಂದುವರೆಸಬೇಕು. 60 ವರ್ಷ ಆದ ಹಮಾಲಿ ಕಾರ್ಮಿಕರಿಗೆ ಒಂದು ಬಾರಿ ಕನಿಷ್ಠ ಒಂದು ಲಕ್ಷ ರೂಪಾಯಿ ನಿವೃತ್ತಿ ಪರಿಹಾರ (ಗ್ರ್ಯಾಚೂಟಿ) ನೀಡಬೇಕು. ಮರಣ ಪರಿಹಾರವನ್ನು ಕನಿಷ್ಠ ಎರಡು ಲಕ್ಷ ರೂಪಾಯಿಗಳಿಗೆ ಹೆಚ್ಚಿಸಬೇಕು.
ಮಿಲ್-ಗೋಡೌನ್-ವೇರ್‌ಹೌಸ್‌ಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಭವಿಷ್ಯನಿಧಿ, ವಿಮಾ ಸೌಲಭ್ಯ, ಬೋನಸ್ ಸೇರಿದಂತೆ ಅಗತ್ಯ ಕಾರ್ಮಿಕ ಕಾಯ್ದೆಗಳ ಜಾರಿಯಿಂದ ವಂಚಿತರಾಗಿದ್ದಾರೆ. ಈ ಎಲ್ಲ ಕಾರ್ಮಿಕರಿಗೆ ಕಡ್ಡಾಯವಾಗಿ ಕಾರ್ಮಿಕ ಕಾನೂನುಗಳನ್ನು ಅನ್ವಯಿಸಬೇಕು. ಎಲ್ಲ ವಿಭಾಗದ ಹಮಾಲರಿಗೆ ಕನಿಷ್ಠ ವೇತನ ಜಾರಿ ಮಾಡಲು ಮುತುವರ್ಜಿ ವಹಿಸಬೇಕು.
ಎಲ್ಲ ವಸತಿ ರಹಿತ ಹಮಾಲಿ ಕಾರ್ಮಿಕರಿಗೆ ರಾಜ್ಯ, ಕೇಂದ್ರ ಸರ್ಕಾರಗಳ ವಿವಿಧ ವಸತಿ ಯೋಜನೆಗಳನ್ನು ಬಳಸಿಕೊಂಡು ಯೋಗ್ಯವಾದ ವಸತಿ ಯೋಜನೆಯನ್ನು ಜಾರಿ ಮಾಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹಮಾಲಿ ಕಾರ್ಮಿಕ ಸಂಘಟನೆಯ ಜಿಲ್ಲಾ ಸಮಿತಿ ಪದಾಧಿಕಾರಿಗಳಾದ ಬಸವರಾಜ ಪೂಜಾರ, ಮಲ್ಲೇಶಪ್ಪ ಮದ್ಲೇರ, ಹನುಮಂತಪ್ಪ ಕನಕಾಪೂರ, ಹುಸೇನಸಾಬ ಏರಿಮನಿ, ಬಸವಣ್ಣೆಪ್ಪ ಕರೆಬಸಪ್ಪನವರ, ಭೀಮಣ್ಣ ಕನವಳ್ಳಿ, ಈರಪ್ಪ ವಡ್ಡರ, ರಾಜು ಮಾಳಮ್ಮನವರ, ಮೆಹಬೂಬ್ ಅಲಿ ಬಡಿಗೇರ, ಬಸವರಾಜ ಬೂದಿಹಾಳ, ರುದ್ರಪ್ಪ ಹುಬ್ಬಳ್ಳಿ, ಬೀರಪ್ಪ ಡಿಳ್ಳೆಪ್ಪನವರ, ಶಿವಪ್ಪ ಕೋಡಿಹಳ್ಳಿ, ನಿಸಾರ್ ಅಹಮದ್ ಮುಳಗುಂದ, ನಾಗಪ್ಪ ಧಾರವಾಡ, ಕುಮಾರ ದಿಂಡಿಮನಿ, ರೇವಣೆಪ್ಪ ಬರಡಿ, ಇತರರಿದ್ದರು.