ಹಾವೇರಿ: ಪ್ರಿಯಕರನೊಂದಿಗೆ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಎಂದು ಪತ್ನಿಯೊಂದಿಗೆ ಹೊಂಚು ಹಾಕಿದ ಪ್ರಿಯಕರ ಆಕೆಯ ಪತಿಯನ್ನು ರಟ್ಟಿಹಳ್ಳಿ ತಾಲೂಕಿನ ಮದಗ ಮಾಸೂರ ಕೆರೆ ನೋಡಲು ಕರೆದುಕೊಂಡು ಹೋಗಿ, ಫೋಟೋ ತೆಗೆಯುವುದಾಗಿ ಹೇಳಿ ಕೆರೆಗೆ ತಳ್ಳಿ ಕೊಲೆಗೈದ ಪ್ರಕರಣವನ್ನು ಪೊಲೀಸರು ಬಯಲಿಗೆ ಎಳೆದಿದ್ದಾರೆ.
ದಾವಣಗೆರೆ ಹರಿಹರದ ಬೆಂಕಿನಗರ ಮೂಲದ ರಾಣೆಬೆನ್ನೂರ ತಾಲೂಕು ಹಲಗೇರಿ ಗ್ರಾಮದ ನಿವಾಸಿ ಶಫಿವುಲ್ಲಾ ಅಬ್ದುಲ್‌ಮುಹೀಬ (38) ಮೃತಪಟ್ಟವ. ಹಲಗೇರಿ ನಿವಾಸಿ ಮುಬಾರಕ್ ಖಲಂದರಸಾಬ ಮುಲ್ಲಾ ಹಾಗೂ ಶಫಿವುಲ್ಲಾ ಪತ್ನಿ ಶಹೀನಾಬಾನು ಶಫಿವುಲ್ಲಾ ಬಂಧಿತ ಆರೋಪಿಗಳು. ಮೊದಲು ಸಂಶಯಾಸ್ಪದ ಸಾವು ಎಂದು ಭಾವಿಸಿದ್ದ ಪೊಲೀಸರು ಮರಣೋತ್ತರ ಪರೀಕ್ಷೆ ಬಳಿಕ ಕೊಲೆ ಸಂಶಯ ಬಂದಾಗ, ತನಿಖೆ ನಡೆಸಿ ಕೊಲೆ ಪ್ರಕರಣ ಭೇದಿಸಿದ್ದಾರೆ.
ಹರಿಹರ ಮೂಲದ ಶಫಿವುಲ್ಲಾ ಗೌಂಡಿ ಕೆಲಸಕ್ಕೆಂದು ಹಲಗೇರಿಗೆ ಬಂದು, ಪತ್ನಿ, ಇಬ್ಬರು ಮಕ್ಕಳ ಜತೆಗೆ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಜುಲೈ 27ರಂದು ಮದಗದ ಕೆಎರೆಯಲ್ಲಿ ಶಫಿವುಲ್ಲಾ ಮೃತದೇಹ ಪತ್ತೆಯಾದಾಗ, ಮೈಮೇಲೆ ಗಾಯದ ಗುರುತುಗಳಿದ್ದವು. ಮರಣೋತ್ತರ ಪರೀಕ್ಷೆ ನಡೆಸಿದಾಗ, ಕೊಲೆ ಎಂಬುದು ಗೊತ್ತಾಗಿದೆ.
ಈ ನಡುವೆ ಪತಿ ಕಾಣೆಯಾದ ಬಗ್ಗೆ ಪತ್ನಿ ಶಹೀನಾಬಾನು ಹಲಗೇರಿ ಠಾಣೆಗೆ ಎತರಳಿ ಸ್ವತಃ ತಾನೇ ನಾಪತ್ತೆ ದೂರು ದಾಖಲಿಸಿದ್ದಳು. ಈ ಬಗ್ಗೆ ಅನುಮಾನಗೊಂಡ ಪೊಲೀಸರು ತಾಂತ್ರಿಕ ಪುರಾವೆಗಳನ್ನು ಪರಿಶೀಲಿಸಿದಾಗ, ಕೊಲೆಯಲ್ಲಿ ಈಕೆಯ ಪಾತ್ರವೂ ಇದೆ ಎಂಬುದು ತಿಳಿದಿದೆ. ಇಬ್ಬರನ್ನೂ ವಿಚಾರಣೆಗೆ ಒಳಪಡಿಸಿದಾಗ ಕೊಲೆಯ ರಹಸ್ಯ ಬಯಲಾಗಿದೆ ಎಂದು ಎಎಸ್‌ಪಿ ಎಲ್.ವೈ.ಶಿರಕೋಳ ತಿಳಿಸಿದ್ದಾರೆ.
ಗಂಡನ ಕೊಂದರೆ ನಿನ್ನ ಜತೆ ಮದುವೆ !
ಶಫಿವುಲ್ಲಾ ಈ ನಡುವೆ ಹೆಚ್ಚಾಗಿ ಕೆಲಸಕ್ಕೆ ಹೋಗದೇ ಮನೆಯಲ್ಲೇ ಇರುತ್ತಿದ್ದ. ಇದರಿಂದ ಇಬ್ಬರೂ ಸೇರಲು ಅವಕಾಶ ಸಿಗುತ್ತಿರಲಿಲ್ಲ. ಹೀಗಾಗಿ, ‘ನನ್ನ ಪತಿಯನ್ನು ಕೊಂದರೆ ನಿನ್ನ ಜತೆಗೆ ಮದುವೆಯಾಗಿ ಜೀವನ ಮಾಡುತ್ತೇನೆ’ ಎಂದು ಮುಬಾರಕ್‌ಗೆ ಶಹೀನಾಬಾನು ಹೇಳಿರುತ್ತಾಳೆ. ಇದೇ ಕಾರಣಕ್ಕೆ ಆಕೆಯ ಪತಿಯೊಂದಿಗೆ ಸ್ನೇಹ ಬೆಳೆಸಿದ್ದ ಮುಬಾರಕ್ ಜು.25ರಂದು ಶಫಿವುಲ್ಲಾನನ್ನು ಫುಸಲಾಯಿಸಿ ಮದಗ ಕೆರೆಗೆ ಕರೆದುಕೊಂಡು ಹೋಗಿದ್ದ. ಕಂಠಪೂರ್ತಿ ಮದ್ಯ ಕುಡಿಸಿ ಸಂಜೆ 6ಕ್ಕೆ ಬೈಕ್‌ನಲ್ಲಿ ಕರೆದುಕೊಂಡು ಹೋಗಿದ್ದ.
ಶಫಿವುಲ್ಲಾಗೆ ಫೋಟೋ ತೆಗೆಯುವುದಾಗಿ ಹೇಳಿ ಕೆರೆಯ ದಂಡೆ ಬಳಿ ನಿಲ್ಲಿಸಿದ್ದ ಮುಬಾರಕ್ ಮೇಲಿಂದ ಜೋರಾಗಿ ತಳ್ಳಿ, ಅಲ್ಲಿಂದ ಪರಾರಿಯಾಗಿದ್ದ. ಕೆರೆಯಲ್ಲಿ ಬೀಳುತ್ತಿದ್ದಂತೆ ಶಫಿವುಲ್ಲಾ ತಲೆ, ದೇಹಕ್ಕೆ ಕಲ್ಲುಗಳು ತಾಗಿ ರಕ್ತಸ್ರಾವ ಉಂಟಾಗಿ, ಮೃತಪಟ್ಟಿದ್ದಾರೆ. ಜು.26ರಂದು ಕೆರೆ ಬಳಿ ಮೃತದೇಹ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಜು.27ರಂದು ಮೃತದೇಹ ಹೊರ ತೆಗೆದು, ಮರಣೋತ್ತರ ಪರೀಕ್ಷೆಗೆ ಕಳುಹಸಿದ್ದರು. ನಂತರ ತನಿಖೆಯಲ್ಲಿ ಕೊಲೆ ರಹಸ್ಯ ಬಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೋಟ್:
ಅಕ್ರಮ ಸಂಬಂಧವೇ ಈ ಕೊಲೆಗೆ ಕಾರಣವಾಗಿದ್ದು, ಇಬ್ಬರೂ ಸೇರಿ ಹೊಂಚು ಹಾಕಿ ಕೊಲೆಗೈದಿರುವುದು ಹಿರೇಕೆರೂರ ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ. ಇಬ್ಬರೂ ಆರೋಪಿತರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿದಿದೆ.
- ಯಶೋಧಾ ವಂಟಗೋಡಿ, ಎಸ್‌ಪಿ, ಹಾವೇರಿ