ಹಾವೇರಿ: ಬ್ಯಾಡಗಿ ಎಪಿಎಂಸಿ ಆವರಣದಲ್ಲಿ ಐಶರ್ ಕ್ಯಾಂಟರ್ ಕದ್ದು, ನಂತರ ರಾಣೆಬೆನ್ನೂರಲ್ಲಿ ಅಂಗಡಿಯೊಂದರ ಶೆರ್ಟರ್ಸ್ ಮುರಿದು 87,18,754 ರೂ. ಮೌಲ್ಯದ ಆರ್‌ಎಂಡಿ ಪಾನ್ ಮಸಾಲಾ, ಗುಟಕಾ ಕದ್ದಿದ್ದ ರಾಜಸ್ಥಾನ ಮೂಲದ ನಾಲ್ವರು ಕುಖ್ಯಾತ ಕಳ್ಳರನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸ್ ತಂಡ ಯಶಸ್ವಿಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಶಿವಕುಮಾರ ಗುಣಾರೆ ಹೇಳಿದರು.
ರಾಜಸ್ತಾನ ಮೂಲದ ಮೈಸೂರಿನ ಭುಗತಗಲ್ಲಿಯಲ್ಲಿ ವಾಸವಾಗಿರುವ ಭಗವಾನ್‌ರಾಮ ಅಲಿಯಾಸ್ ಚೇತನ ಖಾಲುರಾಮ, ರತ್ನಾರಾಮನಾಗಜೀರಾಮ್, ಧಾನಾರಾಮ ಸೋತಾರಾಮ ಹಾಗೂ ಅರ್ಜುನ್ ಸೋತಾರಾಮ್ ಬಂಧಿತ ಆರೋಪಿಗಳು.
ಜೂ.9ರಂದು ಮಧ್ಯರಾತ್ರಿ ಬ್ಯಾಡಗಿ ಎಪಿಎಂಸಿ ಆವರಣದಲ್ಲಿ ನಿಲ್ಲಿಸಿದ್ದ ಪವನ ಗೌಡಕೇರ ಎಂಬುವರ ಐಶರ್ ಕ್ಯಾಂಟರ್ ಕದ್ದು ರಾಣೆಬೆನ್ನೂರಿಗೆ ತೆರಳಿದ್ದರು. ರಾಣೆಬೆನ್ನೂರಿನ ನೆಹರು ಮಾರ್ಕೆಟ್‌ನಲ್ಲಿರುವ ವಿಶಾಲ ಪ್ರಕಾಶ ಗುಪ್ತಾ ಎಂಬುವರ ಪ್ರಕಾಶ ಟಿ. ಡಿಪೊ ಅಂಗಡಿಯ ಶೆರ್ಟರ್ಸ್ ಮುರಿದು ಒಟ್ಟು 87,18,754 ರೂ. ಮೌಲ್ಯದ 2,720 ಬಾಕ್ಸ್ ಆರ್‌ಎಂಡಿ ಪಾನ್ ಮಸಾಲಾ, 6,540 ಬಾಕ್ಸ್ ತಂಬಾಕು, 7,520 ಬಾಕ್ಸ್ ಎಂ.ಗೋಲ್ಡ್ ತಂಬಾಕು ಕದ್ದು ಪರಾರಿಯಾಗಿದ್ದರು. ಈ ಕುರಿತು ರಾಣೆಬೆನ್ನೂರ ಶಹರ ಪೊಲೀಸ್ ಠಾಣೆಯಲ್ಲಿ, ಕ್ಯಾಂಟರ್ ಕಳವು ಕುರಿತು ಬ್ಯಾಡಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು ಎಂದರು.
ಈ ಪ್ರಕರಣಗಳ ಪತ್ತೆಗಾಗಿ ಎಎಸ್‌ಪಿ ಸಿ.ಗೋಪಾಲ ಮಾರ್ಗದರ್ಶನದಲ್ಲಿ ವಿಶೇಷ ತಂಡ ರಚಿಸಲಾಗಿತ್ತು. ಈ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಸತತ ಎಂಟು ದಿನಗಳ ಕಾಲ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಪ್ರಮುಖ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎಎಸ್‌ಪಿ ಸಿ.ಗೋಪಾಲ, ಡಿವೈಎಸ್‌ಪಿ ಕೆ.ವಿ.ಶ್ರೀಧರ, ಪಿಐಗಳಾದ ಎಂ.ಐ.ಗೌಡಪ್ಪಗೌಡ್ರ, ಸಂತೋಷ ಪಾಟೀಲ, ಇತರರಿದ್ದರು.
ಬಹುಮಾನ ಘೋಷಣೆ
ಕಾರ್ಯಾಚರಣೆ ನಡೆಸಿದ ತಂಡದಲ್ಲಿ ರಾಣೆಬೆನ್ನೂರ ಉಪ ವಿಭಾಗದ ಡಿಎಸ್‌ಪಿ ಕೆ.ವಿ. ಶ್ರೀಧರ, ರಾಣೆಬೆನ್ನೂರ ಶಹರ ವೃತ್ತ ಸಿಪಿಐ ಎಂ.ಐ.ಗೌಡಪ್ಪಗೌಡ್ರ, ಹಾವೇರಿ ಸಿಇಎನ್ ಪಿಐ ಸಂತೋಷ ಪಾಟೀಲ, ರಾಣೆಬೆನ್ನೂರ ಶಹರ ಪಿಎಸ್‌ಐ ಎಚ್.ಎನ್.ದೊಡ್ಡಮನಿ, ಆಡೂರ ಪಿಎಸ್‌ಐ ಸಂಪತ್ ಆನೆಕಿವಿ, ರಾಣೆಬೆನ್ನೂರ ಶಹರ ಪಿಎಸ್‌ಐ ಗಡ್ಡೆಪ್ಪ ಗುಂಜುಟಗಿ, ಸಿಬ್ಬಂದಿ ಆನಂದ ದೊಡ್ಡಕುರುಬರ, ಮಹೇಶ ಹೊರಕೇರಿ, ವಿ.ಬಿ.ಬಳಿಗಾರ, ಬಿ.ಕಡ್ಲೆಪ್ಪನವರ, ವಿಠ್ಠಲ ಡಿ.ಬಿ., ಚಂದ್ರು ಸಣ್ಣಮನಿ, ಮಹಾಂತೇಶ ಪಾಟೀಲ, ಹನುಮಂತ ದನವಿನಮನಿ, ಮಾರುತಿ ಹಾಲಬಾವಿ, ಸತೀಶ ಮಾರಕಟ್ಟಿ ಇದ್ದರು. ಈ ತಂಡಕ್ಕೆ ನಗದು ಬಹುಮಾನ ನೀಡುವುದಾಗಿ ಎಸ್‌ಪಿ ಘೋಷಿಸಿದರು.
ಮೊಬೈಲ್ ಬಳಸದ ಚಾಲಾಕಿಗಳು
ಗುಟಕಾ ಕಳ್ಳರಲ್ಲಿ ಕೆಲವರು ಈ ಮೊದಲು ಗುಟಕಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಯಾವ ಮಾಲು ಎಲ್ಲಿಗೆ ಯಾವಾಗ ಹೋಗುತ್ತದೆ ಎಂಬುದನ್ನು ಸೂಕ್ತವಾಗಿ ತಿಳಿದುಕೊಂಡೇ ಹೊಂಚು ಹಾಕಿದ್ದರು. ಕಳ್ಳತನ ಸಂದರ್ಭದಲ್ಲಿ ಯಾರೊಬ್ಬರೂ ಮೊಬೈಲ್ ಫೋನ್‌ಗಳನ್ನೇ ಬಳಸಿರಲಿಲ್ಲ. ಕದ್ದ ಕ್ಯಾಂಟರ್‌ನ ನಂಬರ್ ಪ್ಲೇಟ್ ಸಹ ಬದಲಾಯಿಸುವ ಮೂಲಕ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದ್ದರು. ರಾಣೆಬೆನ್ನೂರಿನಿಂದ ಮೈಸೂರುವರೆಗಿನ ಮಾರ್ಗದ ಎಲ್ಲ ಸಿಸಿಟಿವಿ ಕ್ಯಾಮರಾಗಳ ಜಾಡು ಹಿಡಿದು ಹೊರಟ ಪೊಲೀಸರು ಕಳ್ಳರನ್ನು ಮೈಸೂರಿನಲ್ಲಿ ಹಿಡಿದಿದ್ದಾರೆ. ಪ್ರಕರಣದ ಕಿಂಗ್‌ಪಿನ್ ನಾಪತ್ತೆಯಾಗಿದ್ದು, ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.