ಜಿಲ್ಲೆ

ಮೃತ್ಯು ಕೂಪವಾದ ರಾಷ್ಟ್ರೀಯ ಹೆದ್ದಾರಿ ಗುಂಡೇನಹಳ್ಳಿ ಕ್ರಾಸ್; ಶವಾಗಾರದ ಎದುರು ಕುಟುಂಬಸ್ಥರ ಆಕ್ರಂದನ

ಹಾವೇರಿ: ಪುಣೆ- ಬೆಂಗಳೂರು ರಸ್ತೆ (ಎನ್‌ಎಚ್ 48) ಹಾವೇರಿಯಿಂದ 7 ಕಿ.ಮೀ. ದೂರದಲ್ಲಿರುವ ಗುಂಡೇನಹಳ್ಳಿ ಕ್ರಾಸ್ ಬಳಿ ರಸ್ತೆಬದಿ ಸಕ್ಕರೆ ಲೋಡ್ ತುಂಬಿಕೊಂಡು ನಿಂತಿದ್ದ ಲಾರಿಗೆ ನಸುಕಿನ ಜಾವ 3.45 ವೇಳೆಗೆ ವೇಗವಾಗಿ ಬಂದ ಟೆಂಪೋ ಟ್ರಾವೆಲರ್ (ಟಿಟಿ) ಡಿಕ್ಕಿ ಹೊಡೆದ ಅಪಘಾತ ಕಡಂ ಎಂಥವರ ಎದೆ ಕೂಡ ಝಲ್ ಎನಿಸುತ್ತದೆ. ಈ ಮೂಲಕ ಗುಂಡೇನಹಳ್ಳಿ ಕ್ರಾಸ್ ಮೃತ್ಯುಕೂಪವಾಗಿ ಪರಿಣಮಿಸಿದೆ.
ಅಪಘಾತದ ರಭಸಕ್ಕೆ ಟಿಟಿ ಲಾರಿಯ ಒಳಗೆ ಭಾಗಶಃ ಸಿಲುಕಿ ಸಂಪೂರ್ಣವಾಗಿ ಜಖಂಗೊಂಡಿದೆ. ಇದರಿಂದ ಟಿಟಿಯಲ್ಲಿದ್ದ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕು ಹೊಳೆಆಲೂರ ಸಮೀಪದ ಎಮ್ಮೆಹಟ್ಟಿ ಗ್ರಾಮದ 17 ಜನರ ಪೈಕಿ 13 ಜನ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅನ್ನಪೂರ್ಣ, ಅರ್ಪಿತಾ, ಪರಶುರಾಮ ಹಾಗೂ ಗೌತಮ್ ಎಂಬ ನಾಲ್ವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ಇವರನ್ನು ಹುಬ್ಬಳ್ಳಿಯ ಕಿಮ್ಸ್ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಆಗಮಿಸಿ ಗಾಯಾಳುಗಳನ್ನು ರಕ್ಷಿಸಿ, ಮೃತದೇಹಗಳನ್ನು ಹಾವೇರಿ ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ರವಾನಿಸಿದರು. ಬೆಳಗ್ಗೆ 9 ಗಂಟೆ ನಂತರ ಮೃತರ ಕುಟುಂಬದವರು, ಸ್ನೇಹಿತರು, ಅಕ್ಕಪಕ್ಕದ ಗ್ರಾಮಸ್ಥರು ಧಾವಿಸಿದರು. ಸ್ಥಳದಲ್ಲಿ ಅಕ್ಷರಶಃ ಸ್ಮಶಾನದಂಥ ವಾತಾವರಣ ಸೃಷ್ಟಿಯಾಗಿತ್ತು. ಮೈಕೈ ಮೂಳೆಗಳು ಮುರಿದ, ತಲೆ ಒಡೆದು ನಜ್ಜುಗುಜ್ಜಾಗಿ ಮೃತಪಟ್ಟಿದ್ದ ಸಂಬಂಧಿಕರ ಮೃತದೇಹ ಕಂಡು ಕುಟುಂಬಸ್ಥರ ದಿಗಿಲು ಬಡಿದಂತಾಗಿದ್ದರು. ಅವರ ಆಕ್ರಂದನ ಮುಗಿಲು ಮುಟ್ಟಿತ್ತು. ಎದೆ ಬಡಿದುಕೊಂಡು ಅಳುತ್ತಿದ್ದ ದೃಶ್ಯ ಕಂಡು ಇತರರು ಮಮ್ಮಲ ಮರುಗಿದರು.
ಮೃತರ ಕುಟುಂಬಸ್ಥರು ಆಗಮಿಸುತ್ತಿದ್ದಂತೆ ಪೊಲೀಸರು ಮೃತದೇಹ ಗುರುತು ಪತ್ತೆ ಹಚ್ಚಿ ಪಂಚನಾಮೆ ಮಾಡಿ, ಮರಣೋತ್ತರ ಪರೀಕ್ಷೆ (ಪಿಎಂ) ಮಾಡಲು ಕಳುಹಿಸಿದರು. ಮಧ್ಯಾಹ್ನ 3 ಗಂಟೆ ವೇಳೆಗೆ ಆಂಬುಲೆನ್ಸ್ ಮೂಲಕ ಕುಟುಂಬಸ್ಥರೊಂದಿಗೆ ಆಯಾ ಗ್ರಾಮಗಳಿಗೆ 13 ಮೃತದೇಹಗಳನ್ನು ರವಾನಿಸಲಾಯಿತು.
ಸ್ಥಳಕ್ಕೆ ಜಿಲ್ಲಾಧಿಕಾರಿ ರಘುನಂದನ ಮೂರ್ತಿ, ಎಸ್‌ಪಿ ಅಂಶುಕುಮಾರ ಭೇಟಿ ನೀಡಿ ಪರಿಶೀಲಿಸಿದರು. ಎಎಸ್‌ಪಿ ಸಿ.ಗೋಪಾಲ, ಡಿವೈಎಸ್‌ಪಿ ಎಂ.ಎಸ್.ಪಾಟೀಲ, ವಿವಿಧ ಠಾಣೆಗಳ ಸಿಪಿಐ, ಪಿಎಸ್‌ಐ, ಸಿಬ್ಬಂದಿ, ಅಗ್ನಿಶಾಮಕ ಠಾಣೆ, ಆಂಬುಲೆನ್ಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸ್ಥಳೀಯರು ಕೈ ಜೋಡಿಸಿದರು.
ಏಕಾಏಕಿ ಚೀರಾಟ ಶುರುವಾಯ್ತು
ವಾಹನದಲ್ಲಿ ಬರುತ್ತಿದ್ದಾಗ ರಾತ್ರಿ ನಾವೆಲ್ಲ ಮಲಗಿದ್ದಾಗ ಏಕಾಏಕಿ ಜೋರಾಗಿ ಸೌಂಡ್ ಬಂತು. ಅವಾಗ ಎಲ್ಲರೂ ಚಿರಾಟ ಶುರು ಮಾಡಿದರು. ನನಗೆ ಪ್ರಜ್ಞೆ ತಪ್ಪಿ, ಏನಾಗುತ್ತಿದೆ ಎಂಬುದೇ ಗೊತ್ತಾಗಲಿಲ್ಲ. ಆಸ್ಪತ್ರೆಗೆ ಬಂದ ನಂತರ ಪ್ರಜ್ಞೆ ಬಂತು. ಒಂದೇ ಕುಟುಂಬದ 17 ಜನ ಹೋಗಿದ್ದೆವು. ಯಾರಿಗೆ ಏನಾಗಿದೆ ಎಂಬುದು ಗೊತ್ತಿಲ್ಲ ಎಂದು ಗಾಯಾಳು ಅರ್ಪಿತಾ ನಡುಗುತ್ತಲೇ ಭಯಾನಕ ಅಪಘಾತದ ಕುರಿತು ಹೇಳಿಕೊಂಡಳು. ಈಕೆ ಟಿಟಿ ಚಾಲಕ ಆದರ್ಶನ ಸಹೋದರಿ. ಅವಘಡದಲ್ಲಿ ಈಕೆಯ ತಂದೆ- ತಾಯಿ ಹಾಗೂ ಸಹೋದರ ಮೃತಪಟ್ಟಿದ್ದು, ಈಕೆ ಈಗ ಅನಾಥವಾಗಿದ್ದಾಳೆ.