ಹಾವೇರಿ: ಕೌಶಲಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಮುಖ್ಯಮಂತ್ರಿಯವರ ಕೌಶಲ ಕರ್ನಾಟಕ ಯೋಜನೆಯಡಿ ನಿರುದ್ಯೋಗಿ ಯುವಕ/ ಯುವತಿಯರಿಗೆ ಉದ್ಯೋಗ ಅವಕಾಶಗಳನ್ನು ಕಲ್ಪಿಸುವ ಹಿನ್ನೆಲೆಯಲ್ಲಿ ಹಾನಗಲ್ಲ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ಯಲ್ಲಿ ಉಚಿತ ತಾಂತ್ರಿಕ ಕೌಶಲ ತರಬೇತಿಗಳನ್ನು ಆಯೋಜಿಸಲಾಗಿದೆ.
ಈ ಯೋಜನೆಯಡಿ ಸಿ.ಎನ್.ಸಿ. ಪ್ರೋಗ್ರಾಮಿಂಗ್, ಸಿ.ಎನ್.ಸಿ ಟರ್ನರ್, ಸಿ.ಎನ್.ಸಿ ಮಿಲ್ಲಿಂಗ್, ಕ್ಯಾಡ್-ಕ್ಯಾಮ್, ವೃತ್ತಿಗಳಲ್ಲಿ ಉಚಿತ ಕೌಶಲ ತರಬೇತಿ ನೀಡಲಾಗುವುದು. ಎಸ್‌ಎಸ್‌ಎಲ್‌ಸಿ, ಐಟಿಐ, ಡಿಪ್ಲೋಮಾ, ಬಿ.ಇ ಪಾಸಾದ 16ರಿಂದ 35 ವಯೋಮಿತಿಯೊಳಗಿನ ಎಲ್ಲ ವರ್ಗದ ಅಭ್ಯರ್ಥಿಗಳು ಈ ತರಬೇತಿಯನ್ನು ಪಡೆಯಲು ಅರ್ಹರಿರುತ್ತಾರೆ. ತರಬೇತಿ ಪಡೆಯಲು ಆದಾಯದ ಮಿತಿ ಇರುವುದಿಲ್ಲ. ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ಬಸ್ ಪಾಸ್ ಸೌಲಭ್ಯ ಇರುತ್ತದೆ.
ಜಿಟಿಟಿಸಿ ಸಂಸ್ಥೆಯು ಉನ್ನತ ತಂತ್ರಜ್ಞಾನ ಮತ್ತು ಸೌಕರ್ಯಗಳನ್ನು ಅಳವಡಿಸಿಕೊಂಡಿದ್ದು, ಕೈಗಾರಿಕೆಗಳಲ್ಲಿ ಅನುಭವ ಹೊಂದಿದ ಶಿಕ್ಷಕರಿಂದ ಫಲಾನುಭವಿಗಳಿಗೆ ಆನ್ ಜಾಬ್ ತರಬೇತಿ ನೀಡಲಾಗುವುದು. ಈ ತರಬೇತಿಗಳು ಕೈಗಾರಿಕೆಗಳಲ್ಲಿ ನೇರವಾಗಿ ಕೆಲಸ ಮಾಡಲು ಅನುಕೂಲವಾಗುವಂತೆ ಪಠ್ಯಕ್ರಮ ಹೊಂದಿವೆ. ತರಬೇತಿ ಪಡೆದ ಅಭ್ಯರ್ಥಿಗಳಿಗೆ ಪ್ರತಿಷ್ಠಿತ ಕೈಗಾರಿಕೆಗಳಲ್ಲಿ ಉದ್ಯೋಗ ದೊರಕಿಸಿಕೊಡಲಾಗುವುದು.
ತರಬೇತಿಗಳು ಅಗಸ್ಟ್ 12ರಿಂದ ಪ್ರಾರಂಭವಾಗಲಿವೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 10ರೊಳಗಾಗಿ ಅರ್ಜಿ ಸಲ್ಲಿಸಲು ಕೋರಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಟಿಟಿಸಿ, ಸರ್ಕಾರಿ ಪಾಲಿಟೆಕ್ನಿಕ್ ಆವರಣ, ಪಾಳಾ ರಸ್ತೆ, ಹಾನಗಲ್ಲ ಇಲ್ಲಿಗೆ ಸಂಪರ್ಕಿಸಲು ಕೋರಲಾಗಿದೆ.