ಹಾವೇರಿ: ಸೇವೆ, ಜ್ಯೇಷ್ಠತೆಯ ಆಧಾರದ ಮೇಲೆ ಹಾಗೂ ಹಳೆಯ ಹುದ್ದೆಗೆ ವಿಲೀನಗೊಳಿಸುವ ಮೂಲಕ ಶಿಕ್ಷಕರಿಗೆ ಭಡ್ತಿ ನೀಡಬೇಕು ಎಂದು ಆಗ್ರಹಿಸಿ ಆ.12ರಂದು ಬೆಂಗಳೂರಿನ ಸ್ವಾತಂತ್ರೃ ಉದ್ಯಾನವನದಲ್ಲಿ ರಾಜ್ಯಮಟ್ಟದ ಪ್ರತಿಭಟನೆ ಜರುಗಲಿದೆ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಜಿ.ಬಿ.ಬೂದಿಹಾಳ ಹೇಳಿದರು.
ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 6, 7 ವರ್ಷಗಳಿಂದ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳಲ್ಲಿ ಅಳವಡಿಸಿರುವ ಅವೈಜ್ಞಾನಿಕ ಅಂಶಗಳಿಂದ ಪ್ರಾಥಮಿಕ ಶಾಲೆಗಳಲ್ಲಿ ಈಗಾಗಲೇ ಸೇವೆ ಸಲ್ಲಿಸುತ್ತಿರುವ ಪದವೀಧರ ಶಿಕ್ಷಕರಿಗೆ ಅನ್ಯಾಯ ಆಗುತ್ತಿದೆ. ಅರ್ಹತೆ ಇದ್ದರೂ ಮುಂಭಡ್ತಿಗೆ ಅವಕಾಶ ಸಿಗದೇ ವಂಚನೆಗೀಡಾಗುತ್ತಿದ್ದಾರೆ ಎಂದರು.
ಜಿಲ್ಲೆಯಲ್ಲಿ 6,330 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಮಂಜೂರಾಗಿದ್ದು ಪ್ರಸ್ತುತ 4,878 ಹುದ್ದೆಗಳು ಭರ್ತಿಯಾಗಿ,1,452 ಹುದ್ದೆಗಳು ಖಾಲಿ ಇವೆ. ಸರ್ಕಾರ ಹೊಸದಾಗಿ 6ರಿಂದ 8ನೇ ತರಗತಿಗೆ ಪದವೀಧರ ಶಿಕ್ಷಕರನ್ನು (ಜಿಪಿಟಿ) ನೇಮಿಸುತ್ತಿದೆ. ಮುಖ್ಯೋಪಾಧ್ಯಾಯ, ಇನ್ನಿತರ ಹುದ್ದೆಗೆ ಭಡ್ತಿ ಹೊಂದಬೇಕಾದರೆ ಈಗಾಗಲೇ ಮಾಡಿರುವ ಸೇವೆಯನ್ನು ಪರಿಗಣಿಸದ ಕಾರಣ ಇವರೊಂದಿಗೆ ಹೊಸಬರೊಂದಿಗೆ ಸ್ಪರ್ಧೆ ಮಾಡುವಂತಾಗಿದೆ. ಈ ನಿಯಮದಿಂದಾಗಿ ಅರ್ಹತೆ ಇದ್ದರೂ ಭಡ್ತಿ ಸಿಗದೇ ಹಲವರು ನಿವೃತ್ತಿ ಹೊಂದಿದ್ದಾರೆ. ಇನ್ನೂ ಹಲವರು ಭಡ್ತಿಯಿಂದ ವಂಚಿತರಾಗಿದ್ದಾರೆ. ಪದವಿ, ಸ್ನಾತಕೋತ್ತರ ಪದವಿ, ಪಿಎಚ್‌ಡಿ ಮಾಡಿದವರೂ ಭಡ್ತಿ ಆಗದೇ ಸಮಸ್ಯೆಗೆ ಸಿಲುಕಿದ್ದಾರೆ. ಹಾಗಾಗಿ, ಜ್ಯೇಷ್ಠತೆ ಆಧಾರದಲ್ಲಿ, ಹಳೆಯ ಹುದ್ದೆಗೆ ವಿಲೀನಗೊಳಿಸಬೇಕು ಎಂದು ಆಗ್ರಹಿಸಿದರು.
ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಸವರಾಜ ಚಳ್ಳಾಳ ಮಾತನಾಡಿ, ಈ ಸಮಸ್ಯೆ ಬಗೆಹರಿಸಲು ಈಗಾಗಲೇ ಹಲವು ಬಾರಿ ಹೋರಾಟ ಮಾಡಲಾಗಿದ್ದು, ಇಂದು ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಸಿಇಒ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಮನವಿ ಪತ್ರ ಸಲ್ಲಿಸಲಾಗಿದೆ. ಆ.12ರಂದು ಬೆಂಗಳೂರಿನಲ್ಲಿ ನಡೆಯಲಿರುವ ಹೋರಾಟದಲ್ಲಿ ಜಿಲ್ಲೆಯಿಂದ ನೂರಾರು ಶಿಕ್ಷಕರು ಭಾಗವಹಿಸಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಸಹ ಕಾರ್ಯದರ್ಶಿ ಇ.ಸಿ.ಅಗಸಿಬಾಗಿಲ, ಸಂಘಟನಾ ಕಾರ್ಯದರ್ಶಿ ಅಶೋಕ ಹಾಡೋರ ಇದ್ದರು.