ಹಾವೇರಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ 2024-2029ನೇ ಅವಧಿಯ ಹಾವೇರಿ ಜಿಲ್ಲಾ ಶಾಖೆಯ ಕಾರ್ಯಕಾರಿ ಸಮಿತಿಯ 64ನಿರ್ದೇಶಕರ ಚುನಾವಣೆ ಪ್ರಕ್ರಿಯೆ ಅ.28ರಿಂದ ಆರಂಭವಾಗಲಿದ್ದು, ನ.16ರಂದು ಮತದಾನ ನಡೆಯಲಿದೆ ಎಂದು ಹಾವೇರಿ ಡಯಟ್ ಕಾಲೇಜ್ ಹಿರಿಯ ಉಪನ್ಯಾಸಕ ಹಾಗೂ ಸಂಘದ ಜಿಲ್ಲಾ ಚುನಾವಣಾಧಿಕಾರಿ ಎಂ.ಎಚ್.ಪಾಟೀಲ ತಿಳಿಸಿದರು.
ನಗರದ ಜಿಲ್ಲಾ ಸರ್ಕಾರಿ ನೌಕರರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಟ್ಟು 49 ಸರ್ಕಾರಿ ಇಲಾಖೆಗಳಿಂದ 64 ನಿರ್ದೇಶಕರ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. 2,499 ಮತದಾರರು ಮತ ಚಲಾಯಿಸಲು ಅರ್ಹರಾಗಿದ್ದಾರೆ. ಶಿಕ್ಷಣ ಇಲಾಖೆಯಿಂದ ಐದು, ಆರೋಗ್ಯ ಇಲಾಖೆಯಿಂದ ನಾಲ್ಕು, ಕಂದಾಯ ಇಲಾಖೆಯಿಂದ ನಾಲ್ಕು ಸ್ಥಾನಗಳು ಸೇರಿ 64 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಪ್ರಬುದ್ಧ ಮತದಾರರಿದ್ದು ಯಾವುದೇ ಆಮಿಷ, ಅಕ್ರಮಕ್ಕೆ ಅವಕಾಶ ನೀಡಲಾಗದು ಎಂದರು.
ಅ.28ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ನ.7 ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ನ.8ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. ಅಂದೇ ಅರ್ಹ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗುವುದು. ನ.11ರಂದು ನಾಮಪತ್ರ ವಾಪಸ್ ಪಡೆಯಲು ಅವಕಾಶ ನೀಡಲಾಗುವುದು. ನ.16ರಂದು ನಗರದ ಜಿಲ್ಲಾ ಸರ್ಕಾರಿ ನೌಕರರ ಸಂಘದ ಕಚೇರಿಯಲ್ಲಿ ಚುನಾವಣೆ ನಡೆಯಲಿದೆ. ಅಂದೇ ಮತ ಎಣಿಕೆ ನಡೆಸಿ ಫಲಿತಾಂಶ ಘೋಷಿಸಲಾಗುವುದು ಎಂದರು.
ಸಹಾಯಕ ಚುನಾವಣಾಧಿಕಾರಿ ಶೇಖರ ಹಂಚಿನಮನಿ ಇದ್ದರು.