ಹಾವೇರಿ: ಜಿಲ್ಲೆಯಾದ್ಯಂತ ಶನಿವಾರ ಸಡಗರದಿಂದ ಆರಂಭವಾಗಿದ್ದ ಗಣೇಶ ಚತುರ್ಥಿ ಹಬ್ಬದಂದು ಪ್ರತಿಷ್ಠಾಪಿಸಲಾಗಿದ್ದ ಗಣೇಶನ ಮೂರ್ತಿಗಳ ವಿಸರ್ಜನೆ ಕಾರ್ಯಕ್ರಮ ಐದನೇ ದಿನವಾದ ಬುಧವಾರ ಬಲು ಜೋರಾಗಿ ನಡೆಯಿತು.
ಜಿಲ್ಲೆಯ ಬಹುತೇಕ ಸಾರ್ವಜನಿಕ ಗಣೇಶೋತ್ಸವ ಮಂಡಳಿಗಳ ಗಣೇಶನನ್ನು ಬುಧವಾರ ವಿಸರ್ಜಿಸಲಾಯಿತು. ಯುವಕ- ಯುವತಿಯರು, ಮಕ್ಕಳು ಪಟಾಕಿ ಸಿಡಿಸಿ, ಡಿಜೆ ಸದ್ದಿಗೆ ಹೆಜ್ಜೆ ಹಾಕುವ ಮೂಲಕ ಗಣೇಶನನ್ನು ಸಡಗರದಿಂದ ಬೀಳ್ಕೊಟ್ಟರು. ಕೆಲ ಮಂಡಳಿಗಳು ಡೊಳ್ಳು, ಸಮಾಳ, ಮತ್ತಿತರ ವಾದ್ಯಗಳೊಂದಿಗೆ ವಿಸರ್ಜನೆ ಪ್ರಕ್ರಿಯೆ ಪೂರ್ಣಗೊಳಿಸಿದವು.
ಹಾವೇರಿ ನಗರಸಭೆ ವತಿಯಿಂದ ಗಣೇಶ ವಿಸರ್ಜನೆಗಾಗಿ ನಗರದ ಗುರುಭವನ ಪಕ್ಕದ ಅಕ್ಕಮಹಾದೇವಿ ಹೊಂಡದ ಆವರಣದಲ್ಲಿ ಪುಟ್ಟ ಹೊಂಡ ನಿರ್ಮಿಸಲಾಗಿದೆ. ಈ ಸ್ಥಳದಲ್ಲಿ ಸಾರ್ವಜನಿಕರು ಗಣೇಶ ವಿಸರ್ಜನೆ ಮಾಡಿದರು. ನಗರದಲ್ಲಿ ಬುಧವಾರ 20ಕ್ಕೂ ಹೆಚ್ಚು ಸಾರ್ವಜನಿಕ ಗಣೇಶನ ವಿಸರ್ಜನೆ ಮಾಡಲಾಯಿತು.
ಮನೆಗಳಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶನ ವಿಸರ್ಜನೆ ಕೂಡ ಬುಧವಾರ ಸಾಂಗವಾಗಿ ನೆರವೇರಿತು. ಐದು ದಿನ ಬಗೆ ಬಗೆಯ ಅಡುಗೆ ತಯಾರಿಸಿ ಗಣಪನಿಗೆ ನೇವೈದ್ಯ ಮಾಡಿದ ಜನತೆ ಕೊನೆಯ ದಿನ ವಿಶೇಷ ಭಕ್ಷೃ ತಯಾರಿಸಿ ನೈವೇದ್ಯ ಹಿಡಿದು ಸಹಭೋಜನ ಮಾಡಿದರು. ಬಳಿಕ ಸಂಪ್ರದಾಯ ಬದ್ಧವಾಗಿ ಗಣೇಶನಿಗೆ ಕೊನೆಯ ಪೂಜೆ ಮಾಡಿ, ವಿಘ್ನಗಳನ್ನೆಲ್ಲ ದೂರ ಮಾಡು ಗಣಪ ಎಂದು ಬೇಡಿಕೊಂಡು ವಿಸರ್ಜಿಸಿದರು.
ಸರ್ಕಾರಿ ಕಚೇರಿಗಳು ಝಗಮಗ
ಜಿಲ್ಲಾ ಕೇಂದ್ರ ಹಾವೇರಿಯಲ್ಲಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಸರ್ಕಾರಿ ಕಚೇರಿಗಳು, ಪೊಲೀಸ್ ಠಾಣೆಗಳು, ಕೆಇಬಿ ಕಚೇರಿಗಳು, ಸೇರಿದಂತೆ ವಿವಿಧ ಕಚೇರಿಗಳಲ್ಲಿ ಗಣೇಶೋತ್ಸವ ಸಂಭ್ರಮ ಕಂಡುಬಂತು. ಬಹುತೇಕ ಕಚೇರಿಗಳಲ್ಲಿ ಬುಧವಾರ ವಿಸರ್ಜನೆ ಮಾಡಲಾಯಿತು. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಚೇರಿಗಳು ವಿದ್ಯುತ್ ದೀಪಾಲಂಕಾರದಿಂದ ಝಗಮಗಿಸುತ್ತಿದ್ದವು. ಕಚೇರಿ ಸಿಬ್ಬಂದಿ ಎಲ್ಲ ಸೇರಿ ಗಣಪನಿಗೆ ಪೂಜೆಗೈದು ಅನ್ನಪ್ರಸಾದ ಸೇವೆ ನೆರವೇರಿಸಿದರು. ಬಳಿಕ ಮೆರವಣಿಗೆ ಮೂಲಕ ಗಣೇಶ ವಿಸರ್ಜನೆ ಮಾಡುವ ಮೂಲಕ ಭಕ್ತಿ ಮೆರೆದರು.