ಜಿಲ್ಲೆ

ಎಚ್‌ಐವಿ ಬಗೆಗಿನ ಮೂಡನಂಬಿಕೆ ಹೋಗಬೇಕು; ಮಾರಕ ಕಾಯಿಲೆಗಳಿಗೂ ಇದೆ ಚಿಕಿತ್ಸೆ; ವಿಶ್ವ ಏಡ್ಸ್ ದಿನಾಚರಣೆ ಸಮಾರಂಭದಲ್ಲಿ ರುದ್ರಪ್ಪ ಲಮಾಣಿ ಹೇಳಿಕೆ

ಹಾವೇರಿ: ವಿಜ್ಞಾನ ಈಗ ಬಹಳ ಮುಂದುವರೆದಿದೆ. ಮಾರಕ ಕಾಯಿಲೆಗಳ ನಿಯಂತ್ರಣಕ್ಕೆ ವಿಜ್ಞಾನಿಗಳು ನಿರಂತರ ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಕೋವಿಡ್-19ನಂತಹ ಮಹಾಮಾರಿಯನ್ನು ಹಿಮ್ಮೆಟ್ಟಿಸುವಲ್ಲಿ ವಿಜ್ಞಾನಗಳು ಯಶಸ್ವಿಯಾಗಿದ್ದಾರೆ. ಏಡ್ಸ್‌ನಂತಹ ಕಾಯಿಲೆಗಳಿಗೂ ಅಗತ್ಯ ಚಿಕಿತ್ಸೆ ಇದ್ದು, ಜನರಲ್ಲಿ ಇರುವ ಮೂಡನಂಬಿಕೆಗಳು ಹೋಗಬೇಕು. ಅಂದಾಗ ಮಾತ್ರ ಸಮಾಜ ಸುಧಾರಣೆ ಸಾಧ್ಯ ಎಂದು ಎಂದು ವಿಧಾನಭೆ ಉಪ ಸಭಾಧ್ಯಕ್ಷ ರುದ್ರಪ್ಪ ಲಮಾಣಿ ಹೇಳಿದರು.
ತಾಲೂಕಿನ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಸಭಾಂಗಣದಲ್ಲಿ ಶುಕ್ರವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾಸ್ಪತ್ರೆ, ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕ, ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದ ‘ವಿಶ್ವ ಏಡ್ಸ್ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಏಡ್ಸ್ ಬಗ್ಗೆ ಮೊದಲಿದ್ದ ಭಯ ಈಗ ಇಲ್ಲ. ಏಡ್ಸ್ ತಡೆಗಟ್ಟಲು ಬೇಕಾದ ಸುರಕ್ಷಿತ ಕ್ರಮಗಳ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಸೋಂಕು ಬರದಂತೆ ಎಲ್ಲರೂ ಮುನ್ನೆಚ್ಚರಿಕೆ ವಹಿಸಬೇಕು. ಎಚ್‌ಐವಿ ಸೋಂಕಿತರಿಗೆ ಆತ್ಮಸ್ಥೈರ್ಯ ತುಂಬಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದೆ ಎಂದರು.
ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ನೀಲೇಶ ಎಂ.ಎನ್. ಮಾತನಾಡಿ, ವಿಶ್ವ ಆರೋಗ್ಯ ಸಂಸ್ಥೆಯು 1988ರಿಂದ ಡಿಸೆಂಬರ್ 1 ರಂದು ವಿಶ್ವ ಏಡ್ಸ್ ದಿನವನ್ನಾಗಿ ಆಚರಿಸುತ್ತಿದೆ. ಏಡ್ಸ್ ಪ್ರಕರಣಗಳು ಗಣನೀಯವಾಗಿ ಇಳಿಮುಖವಾದರೂ ಸಹ 2022ರಲ್ಲಿ ದೇಶದ 1.30 ಲಕ್ಷ ಜನರು ಏಡ್ಸ್ ಕಾಯಿಲೆಗೆ ತುತ್ತಾಗಿದ್ದಾರೆ. ಇದರಲ್ಲಿ 18ರಿಂದ 35 ವರ್ಷದೊಳಗಿನ ಯುವಕರೇ ಹೆಚ್ಚು ಎಂಬುದು ಕಳವಳಕಾರಿ ಸಂಗತಿಯಾಗಿದೆ ಎಂದರು.
ಜಿಲ್ಲಾಸ್ಪತ್ರೆ ಎಆರ್‌ಟಿ ಕೇಂದ್ರಲ್ಲಿ 8,612 ಎಚ್‌ಐವಿ ಸೋಂಕಿತರು ನೋಂದಾಯಿಸಿಕೊಂಡಿದ್ದು, 7,178 ಸೋಂಕಿತರು ಎ.ಆರ್.ಟಿ. ಚಿಕಿತ್ಸೆ ಆರಂಭಿಸಿದ್ದಾರೆ. ಪ್ರಸ್ತುತ 4,172 ಎಚ್.ಐ.ವಿ. ಸೋಂಕಿತರು ಎ.ಆರ್.ಟಿ. ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಹೇಳಿದರು.
ಕೆ.ಸಿ.ಅಕ್ಷತಾ ಏಡ್ಸ್ ನಿಯಂತ್ರಣ ಹಾಗೂ ಚಿಕಿತ್ಸೆ ಕುರಿತು ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ಹಾಗೂ ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಚ್.ಎಸ್.ರಾಘವೇಂದ್ರಸ್ವಾಮಿ, ಜಿಲ್ಲಾ ಆರ್.ಸಿ.ಎಚ್.ಅಧಿಕಾರಿ ಡಾ.ಜಯಾನಂದ, ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಜಿ.ಡಿ.ಪಾಟೀಲ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ದೇವರಾಜ, ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಭಾಕರ ಕುಂದೂರ, ಡಾ.ಜಯಶ್ರೀ, ಡಾ.ಮಹ್ಮದ್ ಹಯಾತ್, ರೆಡ್ ಕ್ರಾಸ್ ಸಂಸ್ಥೆ ಜಿಲ್ಲಾ ಘಟಕದ ಖಜಾಂಚಿ ಪ್ರಭು ಹಿಟ್ನಳ್ಳಿ, ಕಾರ್ಯದರ್ಶಿ ನಿಂಗಪ್ಪ ಆರೇರ ಇತರರು ಉಪಸ್ಥಿತರಿದ್ದರು.

ಹಲವರಿಗೆ ಸನ್ಮಾನ :
ಐಸಿಟಿಸಿ ಕೇಂದ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ನಾಗರಾಜ ಗುತ್ತಲ, ಮಂಜುನಾಥ, ರೇಣುಕಾ ಹೊಸಮನಿ, ರೂಪಾ ಜಡೆದ ಹಾಗೂ ರಕ್ತನಿಧಿ ಕೇಂದ್ರದ ಪುಷ್ಪಾ ಸಜ್ಜನರ ಅವರನ್ನು ಸನ್ಮಾನಿಸಲಾಯಿತು. ಏಡ್ಸ್ ಜಾಗೃತಿ ಕಾರ್ಯಕ್ರಮಗಳಲ್ಲಿ ಉತ್ತಮ ಸಾಧನೆ ಮಾಡಿದ ಸ್ಪಂದನಾ ಮಹಿಳಾ ಒಕ್ಕೂಟ, ಸಂಜೀವಿನಿ ಸಂಸ್ಥೆ ಸೇರಿದಂತೆ ವಿವಿಧ ಸ್ವಯಂ ಸೇವಾ ಸಂಸ್ಥೆಗಳ ಸಿಬ್ಬಂದಿ ಹಾಗೂ ಅತ್ಯುತ್ತಮ ರೆಡ್ ರಿಬ್ಬನ್ ಕಾಲೇಜುಗಳಾದ ಗಾಂಧಿಪುರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯ, ಶಿಗ್ಗಾಂವಿ ಎಸ್‌ಆರ್‌ಜೆವಿಜಿ ಕಾಲೇಜು ಹಾಗೂ ಅಕ್ಕಿಆಲೂರ ಸಿ.ಜಿ.ಬೆಲ್ಲದ ಕಾಲೇಜಿನ ಪ್ರಾಚಾರ್ಯರನ್ನು ಸನ್ಮಾನಿಸಲಾಯಿತು.
ಬಹುಮಾನ ವಿತರಣೆ:
ಜಿಲ್ಲಾ ಏಡ್ಸ್ ಪ್ರತಿಬಂಧಕ ಮತ್ತು ನಿಯಂತ್ರಣ ಘಟಕದಿಂದ ಆಯೋಜಿಸಿದ್ದ ನಾಟಕ ಸ್ಪರ್ಧೆ ಹಾಗೂ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಯಿತು.