ಹಾವೇರಿ: ಜಿಲ್ಲೆಯಲ್ಲಿ ಇತ್ತೀಚೆಗೆ ವರದಿಯಾದ ಹವೇರಿ ತಾಲೂಕು ಹಾವನೂರ ಹಾಗೂ ಶಿಗ್ಗಾಂವಿ ತಾಲೂಕು ದುಂಡಶಿ ಅರಣ್ಯ ಪ್ರದೇಶ ವ್ಯಾಪ್ತಿಯ ಹಳವ ತರ್ಲಘಟ್ಟ ಅರಣ್ಯ ಪ್ರದೇಶದ ನಾಶ ಹಾಗೂ ಒತ್ತುವರಿ ಪ್ರಕರಣಗಳು ಎಫ್‌ಐಆರ್‌ಗೆ ಸೀಮಿತವಾಗಿವೆ. ತಪ್ಪಿತಸ್ಥರು ಹಾಗೂ ನಿರ್ಲಕ್ಷೃ ವಹಿಸಿದ ಅಧಿಕಾರಿ, ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಲು ಅರಣ್ಯ ಇಲಾಖೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ.
ದುಂಡಶಿ ರೇಂಜ್ ಫಾರೆಸ್ಟ್ ವ್ಯಾಪ್ತಿಯ ಕುನ್ನೂರ ಗ್ರಾಪಂ ಅಡಿಯಲ್ಲಿರುವ ಅರಣ್ಯ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಹಳವ ತರ್ಲಘಟ್ಟ ಪ್ರದೇಶದಲ್ಲಿ 155 ಸರ್ವೆ ನಂಬರ್‌ನಲ್ಲಿ 27 ಎಕರೆ ಅರಣ್ಯವಿದೆ. ಇದರಲ್ಲಿ ಸುಮಾರು 17 ಎಕರೆ ಅರಣ್ಯ ನಾಶ, ಒತ್ತುವರಿ ಯತ್ನ ಪ್ರಕರಣ ವರದಿಯಾಗಿತ್ತು. ಹಾವೇರಿ ತಾಲೂಕು ಹಾವನೂರ ಅರಣ್ಯ ಪ್ರದೇಶದ ಸರ್ವೆ ನಂಬರ್ 410, 411ರಲ್ಲಿ ಹತ್ತಾರು ಎಕರೆ ಅರಣ್ಯ ಪ್ರದೇಶ ನಾಶಪಡಿಸಿ, ಒತ್ತುವರಿಗೆ ಯತ್ನಿಸಿದ ವರದಿಯಾಗಿತ್ತು. ಈ ಕುರಿತು ‘ವಿಜಯವಾಣಿ’ ಬೆಳಕು ಚೆಲ್ಲಿತ್ತು.
ದುಂಡಶಿ ಅರಣ್ಯ ವಲಯ ವ್ಯಾಪ್ತಿಯ ಹಳವ ತರ್ಲಘಟ್ಟ ಪ್ರದೇಶದ ಅರಣ್ಯ ನಾಶ ಒತ್ತುವರಿ ಯತ್ನ ಕುರಿತು ನಾಲ್ವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಹಾವನೂರ ಅರಣ್ಯ ನಾಶ, ಒತ್ತುವರಿ ಕುರಿತು ಎಂಟು ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ತನಿಖೆ ವೇಗ ಹೆಚ್ಚಿಸಿ, ನಿರ್ಲಕ್ಷೃ ತೋರಿದ ಸಂಬಂಧಪಟ್ಟ ಬೀಟ್ ಗಾರ್ಡ್, ಫಾರೆಸ್ಟರ್ ವಿರುದ್ಧ ಕ್ರಮ ಜರುಗಿಸುವಂತೆ ಪರಿಸರ ಪ್ರೇಮಿಗಳು ಒತ್ತಾಯಿಸಿದ್ದಾರೆ.
ಹಳವ ತರ್ಲಘಟ್ಟ ಪ್ರದೇಶದ ಕುರಿತು ಆರ್‌ಟಿಸಿಯಲ್ಲಿ ಅರಣ್ಯ ಇಲಾಖೆ ಹೆಸರು ನೋಂದಣಿ ಆಗುವ ಮುನ್ನ ಅಲ್ಲಿನ ಕೆಲವರು, ತಮ್ಮ ಹದ್ದು ತಿಳಿಸುವಂತೆ ಎಸಿ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಆದರೂ ನಮ್ಮ ಸಿಬ್ಬಂದಿ ಎಫ್‌ಐಆರ್ ದಾಖಲಿಸಿದ್ದಾರೆ. ಹಾವನೂರ ಎಂಟು ಜನರ ಮೇಲೆ ಎಫ್‌ಐಆರ್ ಮಾಡಲಾಗಿದೆ. ಫಾರೆಸ್ಟ್ ಅಂತಾ ಬರೆಯಲಾಗಿದೆ. ಡಿಮಾರ್ಕೆಶನ್ ಪ್ರಕ್ರಿಯೆ ನಡೆಸಬೇಕಿದೆ. ಒತ್ತುವರಿ ಮಾಡಲು ಬಿಡುವುದಿಲ್ಲ. ಮಳೆಗಾಲದಲ್ಲಿ ಸಸಿ ನೆಡಲಾಗುವುದು. ಜಿಲ್ಲಾ ಮಟ್ಟದಲ್ಲಿ ಎಕ್ಸ್‌ಪರ್ಟ್ ಕಮಿಟಿ ಮಾಡಲಾಗುತ್ತಿದೆ. ಆ ಕಮಿಟಿ ಸರ್ವೆ ಮಾಡಿ ವರದಿ ನೀಡಲಿದೆ ಎಂದು ಡಿಸಿಎಫ್ ಅಬ್ದುಲ್ ಅಜೀಜ್ ಶೇಖ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ತಹಸೀಲ್ದಾರ್, ಆರ್‌ಎಫ್‌ಒ ಭೇಟಿ
ದುಂಡಿಶಿ ಆರ್‌ಎಫ್‌ಒ ರವಿ ಎಂ.ಪಿ. ಹಾಗೂ ಶಿಗ್ಗಾಂವಿ ತಹಸೀಲ್ದಾರ್ ಇತ್ತೀಚೆಗೆ ಹಳವ ತರ್ಲಘಟ್ಟ ಅರಣ್ಯ ಪ್ರದೇಶಕ್ಕೆ ಭೇಟಿ ನೀಡಿ ಅರಣ್ಯ ನಾಶ, ಒತ್ತುವರಿ ಕುರಿತು ಪರಿಶೀಲಿಸಿದ್ದಾರೆ. ಒತ್ತುವರಿ ಮಾಡದಂತೆ ತಡೆಯಲು ಮಳೆಗಾಲದಲ್ಲಿ ಸಸಿ ನೆಡಲು ಜೆಸಿಬಿ ಮೂಲಕ ಗುಂಡಿಗಳನ್ನು ತೆಗೆಸಿದ್ದಾರೆ.
ಕೋಟ್:
ಹಾವನೂರ ಮತ್ತು ದುಂಡಶಿ ಅರಣ್ಯ ಪ್ರದೇಶ ನಾಶ, ಒತ್ತುವರಿ ಪ್ರಕರಣ ಮೇಲ್ನೋಟಕ್ಕೆ ಕಂಡುಬಂದಿದೆ. ಇಷ್ಟಕ್ಕೆ ಅಧಿಕಾರಿ, ಸಿಬ್ಬಂದಿ ವಿರುದ್ಧ ಕ್ರಮ ತೆಗೆದುಕೊಳ್ಳಲು ಆಗುವುದಿಲ್ಲ. ಇಲಾಖೆ ನಿಯಮದ ಪ್ರಕಾರ ಮಾಡಬೇಕಾಗುತ್ತದೆ. ವಾರದೊಳಗೆ ಎಸಿಎಫ್ ವರದಿ ಸಲ್ಲಿಸಲಿದ್ದಾರೆ. ಬಳಿಕವೇ ಶಿಸ್ತುಕ್ರಮದ ಕುರಿತು ತೀರ್ಮಾನಿಸಲಾಗುವುದು.
- ಅಬ್ದುಲ್ ಅಜೀಜ್ ಶೇಖ್, ಉಪ ಅರಣ್ಯ ಸಂರಕ್ಷಣಾಧಿಕಾರಿ