ಹಾವೇರಿ: ಸತತ ಮಳೆಯಿಂದ ಮಣ್ಣಿನ ಮನೆಗಳಿಗೆ ಹಾನಿಯಾಗುವ ಸಂಭವವಿರುತ್ತದೆ. ಹಾಗಾಗಿ, ಇಂತಹ ಮನೆಗಳ ಮೇಲೆ ತೀವ್ರ ನಿಗಾ ವಹಿಸಬೇಕು. ಅಂತಹ ಮನೆಗಳಲ್ಲಿ ವಾಸಿಸುವವರನ್ನು ಗುರುತಿಸಿ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಬೇಕು ಎಂದು ಆರ್ಥಿಕ ಇಲಾಖೆಯ ಸರ್ಕಾರ ಕಾರ್ಯದರ್ಶಿಗಳು (ವಿತ್ತೀಯ ಸುಧಾರಣೆ) ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಡಾ.ಆರ್.ವಿಶಾಲ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇಲ್ಲಿನ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ಕಂದಾಯ, ವಿಪತ್ತು ನಿರ್ವಹಣೆ, ಜಿಲ್ಲಾ ಪಂಚಾಯಿತಿ, ಗ್ರಾಮೀಣಾಭಿವೃದ್ಧಿ ಇಲಾಖೆ ಕಾರ್ಯಕ್ರಮಗಳು, ಕುಡಿಯುವ ನೀರು, ಆರೋಗ್ಯ ಇಲಾಖೆ ಕಾರ್ಯಕ್ರಮಗಳ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಮನೆಗಳಿಗೆ ಹಾನಿ ಸಂಭವಿಸಿದ ಕುಟುಂದವರನ್ನು ಅವರ ಸಂಬಂಧಿಕರ ಮನೆಗೆ ಕಳುಹಿಸುವ ವ್ಯವಸ್ಥೆ ಮಾಡಬೇಕು. ಅಗತ್ಯ ಇದ್ದವರಿಗೆ 7ರಿಂದ 10 ದಿನಗಳಿಗೆ ಆಗುವಷ್ಟು ಅಕ್ಕಿ-ಬೆಳೆ-ಎಣ್ಣೆ ಸೇರಿದಂತೆ ಒಳ್ಳೆಯ ಆಹಾರ ಕಿಟ್, ಸಿಲಿಂಡರ್ ಚಾದರ ಹಾಗೂ ಜಮಖಾನಿ ಕೊಡಿಸಬೇಕು ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.
ಮನೆಗಳು ಬಿದ್ದ ತಕ್ಷಣ ಪಂಚನಾಮೆ ಮಾಡಿ ಫೋಟೋ ತೆಗೆದು ವರದಿ ತಯಾರಿಸಬೇಕು. ಅವಘಡ ಸಂಭವಿಸಿದಾಗ ಫಲಾನುಭವಿಗಳಿಗೆ ಪರಿಹಾರ ನೀಡುವ ಜತೆಗೆ ಅವರಿಗೆ ಆತ್ಮಸ್ಥೈರ್ಯ ತುಂಬಬೇಕು ಹಾಗೂ ಸರ್ಕಾರದ ಯೋಜನೆಗಳನ್ನು ಅವರಿಗೆ ತಲುಪಿಸುವ ಪ್ರಾಮಾಣಿಕ ಕೆಲಸ ಮಾಡಬೇಕು. ಗ್ರಾಮೀಣ ಭಾಗದಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ(ಪಿಡಿಒ)ಗಳು ಹೆಚ್ಚಿನ ಕಾಳಜಿವಹಿಸಬೇಕು. ಗ್ರಾಮ ಲೆಕ್ಕಾಧಿಕರಿ(ವಿಎ)ಗಳು ಹಾಗೂ ಪಿಡಿಒಗಳು ಕೇಂದ್ರ ಸ್ಥಾನದಲ್ಲಿರಬೇಕು. ತಾ.ಪಂ.ಕಾರ್ಯದರ್ಶಿಗಳು ಹಾಗೂ ತಹಸೀಲ್ದಾರರು ಜಾಗೃತರಾಗಿರಬೇಕು ಎಂದು ಸೂಚನೆ ನೀಡಿದರು.
ಜಲಜೀವನ್ ಮಿಷನ್ ಯೋಜನೆ ಹಾಗೂ ಬಹುಗ್ರಾಮ ಯೋಜನೆ ಬಾಕಿ ಇರುವ ಕಾಮಗಾರಿಗಳಿಗೆ ಶೀಘ್ರವೇ ಕಾರ್ಯಾದೇಶ ನೀಡಿ ಆದ್ಯತೆ ಮೇರೆಗೆ ಕುಡಿಯುವ ನೀರಿನ ಯೋಜನೆಗಳನ್ನು ಪೂರ್ಣಗೊಳಿಸಬೇಕು. ತುಂಗಾ ಮೇಲ್ದಂಡೆ ಯೋಜನೆ ಭೂಸ್ವಾಧೀನ ಪ್ರಕರಣಗಳ ಸರ್ವೇಗೆ ಲೈಸನ್ಸ್ ಹೊಂದಿದ ಖಾಸಗಿ ಸರ್ವೇಯರ್‌ಗಳ ನೇಮಕ ಮಾಡಿಕೊಂಡು ಶೀಘ್ರವೇ ಭೂಸ್ವಾಧೀನ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ಹಾಗೂ ರಟ್ಟಿಹಳ್ಳಿಯಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಮೌಲಾನಾ ಆಜಾದ್ ಶಾಲೆಗೆ ಒಂದು ಎಕರೆ ನಿವೇಶನ ನೀಡಲು ಕ್ರಮವಹಿಸುವಂತೆ ಫೋನಾಯಿಸಿ ಸಂಬಂಧಿಸಿದ ಇಲಾಖಾ ಸರ್ಕಾರದ ಕಾರ್ಯದರ್ಶಿಗಳ ಗಮನಕ್ಕೆ ತಂದರು.
ರಾಜ್ಯದಲ್ಲೇ ಹಾವೇರಿ ಜಿಲ್ಲೆ ಜನಧನ್ ಜಿಲ್ಲೆ ಎಂದು ಘೋಷಣೆ ಮಾಡಲು ಜಿಲ್ಲೆಯಲ್ಲಿ ಪ್ರತಿಯೊಬ್ಬರೂ ಜನ್‌ಧನ್ ಖಾತೆ ಆರಂಭಿಸಲು ಅಭಿಯಾನದ ರೀತಿಯಲ್ಲಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜನ್‌ಧನ್ ಖಾತೆ ತೆರೆಯಲು ಕ್ರಮವಹಿಸಬೇಕು ಸೂಚನೆ ನೀಡಿದರು. ಲಭ್ಯವಿರುವ ಅನುದಾನ ಬಳಸಿಕೊಂಡು ಮಳೆ ನಿಂತು ಬಿಸಿಲು ಬಂದ ಕೂಡಲೇ ಮಳೆಯಿಂದ ಹಾಳಾದ ರಸ್ತೆ ದುರಸ್ತಿಗೊಳಿಸಿ ಎಂದು ಸಲಹೆ ನೀಡಿದರು.
ಸಭೆಯಲ್ಲಿ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಕ್ಷಯ ಶ್ರೀಧರ, ಜಿ.ಪಂ.ಉಪಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಉಪವಿಭಾಗಾಧಿಕಾರಿಗಳಾದ ಎಚ್.ಬಿ.ಚನ್ನಪ್ಪ ಹಾಗೂ ಮಹ್ಮದ್ ಖಿಜರ್, ಕೃಷಿ, ತೋಟಗಾರಿಕೆ, ಆರೋಗ್ಯ ಇಲಾಖೆಗಳ ಅಧಿಕಾರಿಗಳು, ತಹಸೀಲ್ದಾರರು, ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು ಉಪಸ್ಥಿತರಿದ್ದರು.
273 ಮನೆ, 45 ರೈತರ ಬೆಳೆ ಹಾನಿ
ಜಿಲ್ಲೆಯಲ್ಲಿ ಈವರೆಗೆ ಒಟ್ಟು 273 ಮನೆಗಳಿಗೆ ಹಾನಿಯಾಗಿದ್ದು, ಈ ಪೈಕಿ ಎರಡು ಮನೆ ಸಂಪೂರ್ಣ, ನಾಲ್ಕು ಮನೆಗಳಿಗೆ ತೀವ್ರಹಾನಿ, 267 ಮನೆಗಳು ಭಾಗಶಃ ಹಾನಿಯಾಗಿದೆ. ಪ್ರಸಕ್ತ ಜೂನ್ 1ರಿಂದ ಜುಲೈ 21ರವರೆಗೆ 45 ರೈತರ 31.27 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, ಅಂದಾಜು 29.71 ಲಕ್ಷ ರೂ. ಮೊತ್ತದ ಬೆಳೆಹಾನಿಯಾಗಿದ್ದು, ಎನ್.ಡಿ.ಆರ್.ಎಫ್. ಮಾರ್ಗಸೂಚಿ ಅನ್ವಯ 5.14 ಲಕ್ಷ ರೂ. ಸಹಾಯಧನ ಅಂದಾಜಿಸಲಾಗಿದೆ ಎಂದು ಡಿಸಿ ವಿಜಯಮಹಾಂತೇಶ ದಾನಮ್ಮನವರ ವಿವರಿಸಿದರು.
110 ಗ್ರಾಮ ಗುರುತು
ಜಿಲ್ಲೆಯಲ್ಲಿ ಪ್ರವಾಹಕ್ಕೆ ಹಾಗೂ ಭೂಕುಸಿತ ಸಂಭವನೀಯ 62 ಗ್ರಾಮ ಪಂಚಾಯತಿಗಳ 110 ಗ್ರಾಮಗಳನ್ನು ಹಾಗೂ 110 ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ. ಪಂಚಾಯಿತಿ ಮಟ್ಟದಲ್ಲಿ 62 ವಿಪತ್ತು ನಿರ್ವಹಣಾ ಸಮಿತಿಗಳನ್ನು ರಚಿಸಲಾಗಿದೆ. ವಿಪತ್ತು ನಿರ್ವಹಣೆಗೆ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಡಿಸಿ ಮಾಹಿತಿ ನೀಡಿದರು.
ಕೋರ್ಟ್ ಕೇಸ್ ಬಗೆಹರಿಸಿ
ಕಳೆದ ಬಾರಿಗಿಂತ ಕೋರ್ಟ್ ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದು, ಮೂರರಿಂದ ಆರು ತಿಂಗಳ ಅವಧಿಯ ಕೋರ್ಟ್ ಕೇಸ್‌ಗಳನ್ನು ತಹಸೀಲ್ದಾರ್ ಹಾಗೂ ಉಪವಿಭಾಗಾಧಿಕಾರಿಗಳು ಆದ್ಯತೆ ಮೇರೆಗೆ ಇತ್ಯರ್ಥಗೊಳಿಸಬೇಕು. ಆರ್.ಟಿ.ಸಿ. ಮ್ಯೂಟೇಷನ್ ಹಾಗೂ ಆರ್.ಟಿ.ಸಿ. ಕರೆಕ್ಸನ್ ತ್ವರಿತವಾಗಿ ಕಾಲಮಿತಿಯೊಳಗೆ ವಿಲೇಗೊಳಿಸಬೇಕು. ಭೂಮಾಪನ ಬಾಕಿ ಪ್ರಕರಣಗಳನ್ನು ತ್ವರಿತವಾಗಿ ವಿಲೇಗೊಳಿಸಬೇಕು. ಜಿಲ್ಲೆಯಲ್ಲಿ ಆರ್‌ಟಿಸಿಗೆ ಆಧಾರ್ ಜೋಡಣೆ ಬಹಳ ಕಡಿಮೆಯಾಗಿದ್ದು, ಆದ್ಯತೆ ಮೇರೆಗೆ ನೂರಕ್ಕೆ ನೂರರಷ್ಟು ಆಧಾರ್ ಜೋಡಣೆಗೆ ಕ್ರಮವಹಿಸಬೇಕು ಎಂದು ಡಾ.ವಿಶಾಲ ಸೂಚಿಸಿದರು.
ರೋಗಿಗಳನ್ನು ಕಡೆಗಣಿಸಬೇಡಿ
ಆರೋಗ್ಯ ಇಲಾಖೆಯಲ್ಲಿ ಅಗತ್ಯ ವೈದ್ಯರು, ಇತರೆ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲ್ಲಿ ನೇಮಿಸಿಕೊಳ್ಳಿ. ಕರ್ತವ್ಯಕ್ಕೆ ಸರಿಯಾಗಿ ಹಾಜರಾದವರಿಗೆ ಹಾಗೂ ಹಾಜರಾತಿ ನೀಡಿದವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಆಸ್ಪತ್ರೆಗಲ್ಲಿ ಡೆಂೆ ಪ್ರಕರಣಗಳ ನೆಪ ಹೇಳಿ ಇತರ ರೋಗಿಗಳನ್ನು ಕಡೆಗಣಿಸದೇ ಸೂಕ್ತ ಚಿಕಿತ್ಸೆ ನೀಡಬೇಕು ಎಂದು ಡಾ.ವಿಶಾಲ ಎಚ್ಚರಿಕೆ ನೀಡಿದರು.